Advertisement

ವಿಶೇಷ ಮಕ್ಕಳ ನೆರವಿಗೆ ಎನ್ನಾರೈ ದಂಪತಿ ಬಲ

10:05 AM Dec 18, 2019 | Lakshmi GovindaRaj |

ಹುಬ್ಬಳ್ಳಿ: “ಮಾತೃಭೂಮಿ ಋಣ ತೀರಿಸಲು, ವಿಶೇಷ ಮಕ್ಕಳ ಸೇವೆಗೆ ಸಣ್ಣ ಪಾಲುದಾರರಾಗಲು ದೇವರು ಕೊಟ್ಟ ಅಪೂರ್ವ ಅವಕಾಶವಿದು. ಭಾರತದಲ್ಲಿನ ಅಂಗವಿಕಲ ಮಕ್ಕಳಿಗೆ ಉತ್ತಮ ಸೌಲಭ್ಯ-ಶಿಕ್ಷಣಕ್ಕೆ ನೆರವಿನ ಅಭಿಯಾನದಲ್ಲಿ ನಾನು, ನನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಭಾಗಿಯಾಗಿರುವುದು ನಮ್ಮ ಸೌಭಾಗ್ಯವೆಂದೇ ಭಾವಿಸಿದ್ದೇವೆ’. ಇದು ಗುಜರಾತ್‌ ಮೂಲದವರಾದ ಆಸ್ಟ್ರೇಲಿಯಾ ನಿವಾಸಿ ಕಿಶೋರ ವರ್ಸಾನಿ ಅವರ ನುಡಿಗಳು.

Advertisement

ಭಾರತದಲ್ಲಿನ ಕೆಲವೊಂದು ಅಂಗವಿಕಲ ಮಕ್ಕಳ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟ ನಲ್ಲಿ “ಸೇವಾ ಯುಕೆ’ ಸಂಸ್ಥೆ ಭಾರತದಲ್ಲಿ ಆಯೋಜಿಸಿ ರುವ “ರಿಕ್ಷಾ ರನ್‌’ ಅಭಿಯಾನದಲ್ಲಿ ಆಸ್ಟ್ರೇಲಿಯಾದಲ್ಲಿ ನಿರ್ಮಾಣ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿರುವ ಕಿಶೋರ ವರ್ಸಾನಿ, ಆಸ್ಟ್ರೇಲಿಯಾ ಸರ್ಕಾರಿ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮುಕ್ತಾ ವರ್ಸಾನಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ತೊಡಗಿಕೊಂಡಿದ್ದಾರೆ.

ಅಂಗವಿಕಲ ಮಕ್ಕಳ ಸಹಾಯಾರ್ಥ ಕೈಗೊಂಡ ರಿಕ್ಷಾರನ್‌ ಅಭಿಯಾನ, ಆಸ್ಟ್ರೇಲಿಯಾದ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿ ಅಂಗವಿಕಲ ಮಕ್ಕಳ ನಿಧಿ ಸಂಗ್ರಹ, ಆಸ್ಟ್ರೇಲಿಯಾ ಸರ್ಕಾರ ವಿಶೇಷ ಮಕ್ಕಳ ಶಿಕ್ಷಣ, ಉದ್ಯೋಗ ನೀಡಿಕೆಯಲ್ಲಿ ತೋರುತ್ತಿರುವ ಮುತುವರ್ಜಿ ಕುರಿತಾಗಿ ವರ್ಸಾನಿ ದಂಪತಿ “ಉದಯವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.

ಕಣ್ಣೀರು ಬಂತು: ವಿಶೇಷ ಮಕ್ಕಳಿಗೆ ನೆರವು ಸಂಗ್ರಹದ ಯಾತ್ರೆ ಒಂದು ಕಡೆಯಾದರೆ, ನನ್ನ ಇಬ್ಬರು ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಪರಂಪರೆ, ಪದ್ಧತಿಗಳ ಪರಿ ಚಯವೂ ಆಗಲಿದೆ ಎಂದು ಮಗಳು, ಮಗನನ್ನು ಕರೆದುಕೊಂಡು ಬಂದಿದ್ದೇವೆ. ಶಿವಮೊಗ್ಗದಲ್ಲಿ ವಿಶೇಷ ಮಕ್ಕಳ ನೃತ್ಯ, ಹಾಡು ನೋಡಿ ಕಣ್ಣಲ್ಲಿ ನೀರು ಬಂತು. ವಿಶೇಷ ಮಕ್ಕಳ ನೆರವಿಗೆ ನಮ್ಮ ಕುಟುಂಬ ಕೈಲಾದ ಸೇವೆ ಮಾಡುತ್ತಿದೆ.

ನಾನು ಕಾರ್ಯನಿರ್ವಹಿಸುವ ನಿರ್ಮಾಣ ಸಂಸ್ಥೆಯಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡಿ, ಅವರು ಇತರರಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಕೆಲಸ ಮಾಡಿದರೂ ಪೂರ್ಣ ವೇತನ ನೀಡುವ ಮೂಲಕ ಉತ್ತೇಜಿಸುವ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ನನ್ನ ಮನೆಯಲ್ಲಿ ಕಳೆದ ನ.16ರಂದು ಪಾರ್ಟಿ ಆಯೋಜನೆ ಮಾಡುವ ಮೂಲಕ ನಿಧಿ ಸಂಗ್ರಹ ಮಾಡಿದ್ದೆವು. ಒಂದೇ ದಿನ ರಾತ್ರಿ ಆ ಪಾರ್ಟಿಯಲ್ಲಿ ಸುಮಾರು 5,000 ಆಸ್ಟ್ರೇಲಿಯಾ ಡಾಲರ್‌ ಸಂಗ್ರಹವಾಗಿತ್ತು.

Advertisement

ಒಟ್ಟಾರೆ 12,000 ಆಸ್ಟ್ರೇಲಿಯಾ ಡಾಲರ್‌ ಹಣ ಸಂಗ್ರಹಿಸಿದೆವು ಎಂದು ಕಿಶೋರ ವರ್ಸಾನಿ ಹೆಮ್ಮೆಯಿಂದ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಅತ್ಯಂತ ಹಳೆಯ ಕಾರು ಖರೀದಿಸಿ ಅದರಲ್ಲಿಯೇ ಆಸ್ಟ್ರೇಲಿಯಾದ ಕಾಡುಗಳಲ್ಲಿ ಸುಮಾರು 1,000 ಕಿಮೀ ದೂರ ಪ್ರಯಾಣಿಸುವ ಮೂಲಕ ವಿಶೇಷ ಮಕ್ಕಳ ನಿಧಿ ಸಂಗ್ರಹದ ಬಗ್ಗೆ ಯೋಜಿಸಿದ್ದೇವೆ ಎನ್ನುತ್ತಾರೆ.

ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಭಾರತದಲ್ಲಿ ವಿಶೇಷ ಮಕ್ಕಳಿಗೆ ಸೌಲಭ್ಯಗಳು ಕಡಿಮೆ. ವಿಶೇಷ ಮಕ್ಕಳಿಗೆ ಆಟಿಕೆ ಸಾಮಗ್ರಿಗಳು, ವಿವಿಧ ಸಲಕರಣೆಗಳ ಮೂಲಕ ಕಲಿಕೆಗೆ ಮುಂದಾದರೆ ಆದಷ್ಟು ಬೇಗ ವಿಷಯ ಗ್ರಹಿಕೆ ಸಾಧ್ಯವಾಗಲಿದೆ. ಭಾರತೀಯ ವಿಶೇಷ ಮಕ್ಕಳು ಉತ್ತಮ ತರಬೇತಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾನ್ಯರಂತೆ ಜೀವಿಸಬೇಕು ಎಂಬುದೇ ನಮ್ಮ ಮಹದಾಸೆ ಎನ್ನುತ್ತಾರೆ ಮುಕ್ತಾ ವರ್ಸಾನಿ.

ಹುಬ್ಬಳ್ಳಿ ಆತಿಥ್ಯಕ್ಕೆ ಕೋಟಿ ನಮನ: ವಿಶೇಷ ಮಕ್ಕಳ ನಿಧಿ ಸಂಗ್ರಹಕ್ಕೆ ಪೂರಕವಾಗಿ ಭಾರತದಲ್ಲಿ ಕೈಗೊಂಡ ರಿಕ್ಷಾ ರನ್‌ ಅಭಿಯಾನದಲ್ಲಿ ಬಹುತೇಕ ನಾವು ಹೋಟೆಲ್‌-ಡಾಬಾಗಳಲ್ಲಿ ಉಪಾಹಾರ-ಭೋಜನ ಸವಿದಿದ್ದೆವು. ಆದರೆ, ಹುಬ್ಬಳ್ಳಿಯಲ್ಲಿ ಜನರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಬಂಧುಗಳ ರೂಪದಲ್ಲಿ ಆತಿಥ್ಯ ನೀಡಿದರು. ಮನೆ ಊಟ ಸವಿದೆವು. ಇಲ್ಲಿನ ಸಿಹಿ ಪದಾರ್ಥ ವರ್ಣಿಸಲಸಾಧ್ಯ. ನಮಗೆ ಆತಿಥ್ಯ ನೀಡಿದ ಹುಬ್ಬಳ್ಳಿ ಜನರಿಗೆ ಕೋಟಿ ನಮನ ಎಂಬುದು ಕಿಶೋರ-ಮುಕ್ತಾ ವರ್ಸಾನಿ ದಂಪತಿ ಅನಿಸಿಕೆ.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next