Advertisement

ಎನ್‌ಆರ್‌ಸಿ ಜಟಿಲ ಪ್ರಕ್ರಿಯೆ

11:14 PM Nov 21, 2019 | Team Udayavani |

ದೇಶವ್ಯಾಪಿಯಾಗಿ ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ಹೊರದಬ್ಬುವುದು ಎನ್‌ಆರ್‌ಸಿ ಮುಖ್ಯ ಉದ್ದೇಶ. ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳು ಎಂದರೆ ಬಹುತೇಕ 1971ರ ಬಳಿಕ ಬಾಂಗ್ಲಾದೇಶದಿಂದ ವಲಸೆ ಬಂದು ಅಕ್ರಮವಾಗಿ ದಾಖಲೆ ಪತ್ರ ಪಡೆದುಕೊಂಡು ಇಲ್ಲಿ ಖಾಯಂ ವಾಸವಾಗಿರುವವರು ಎಂದು ಅರ್ಥ.

Advertisement

ಬಾಂಗ್ಲಾದಿಂದ ಅಕ್ರಮ ವಲಸೆ ಈಗಲೂ ಅವ್ಯಾವಹತವಾಗಿ ನಡೆಯುತ್ತಿದೆ. ಹಿಂದೆ ಅಸ್ಸಾಂ, ಪಶ್ಚಿಮ ಬಂಗಾಲ ಮುಂತಾದ ರಾಜ್ಯಗಳಲ್ಲಿ ಮಾತ್ರ ಬಾಂಗ್ಲಾ ವಲಸಿಗರ ಹಾವಳಿಯಿತ್ತು. ಆದರೆ ಈಗ ಅವರು ದಕ್ಷಿಣ ಭಾರತದಲ್ಲೂ ಧಾರಾಳ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ, ಕೇರಳ ಮತ್ತಿತರ ರಾಜ್ಯಗಳಲ್ಲಿ ಬಾಂಗ್ಲಾ ವಲಸಿಗರ ಬಗ್ಗೆ ವಿರೋಧ ತೀವ್ರವಾಗಿದೆ. ಬಹುತೇಕ ವಲಸಿಗರು ಕಟ್ಟಡ ನಿರ್ಮಾಣ, ಫ್ಯಾಕ್ಟರಿ ಮುಂತಾದೆಡೆಗಳಲ್ಲಿ ದುಡಿಯು ತ್ತಿರುವ ದಿನಗೂಲಿ ಕಾರ್ಮಿಕರು. ಇವರಿಂದಾಗಿ ಸ್ಥಳೀಯ ಜನರಿಗೆ ಉದ್ಯೋಗ ನಷ್ಟವಾಗಿದೆ. ಇನ್ನು ಹಲ ವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವುದೂ ಕಾಲ ಕಾಲಕ್ಕೆ ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ವಾಗಿ ನೆಲೆಸಿರುವವರ ಗುರುತಿಸಿ ಹೊರದಬ್ಬುವುದು ಅಪೇಕ್ಷಣೀಯವೇ ಆಗಿದ್ದರೂ ಇದರಲ್ಲಿನ ಅಪಾಯವನ್ನು ಅರಿತಿರಬೇಕು.

ಇದು ಎಷ್ಟು ಜಟಿಲ ಪ್ರಕ್ರಿಯೆ ಎನ್ನುವುದಕ್ಕೆ ಅಸ್ಸಾಂನಲ್ಲಿ ನಡೆದಿರುವ ಎನ್‌ಆರ್‌ಸಿಯೇ ಸಾಕ್ಷಿ. ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ಮೇಲುಸ್ತುವಾರಿಯಲ್ಲಿ ಬರೀ ಒಂದು ರಾಜ್ಯದಲ್ಲಿ ನಡೆದ ಎನ್‌ಆರ್‌ಸಿಯೇ ಗೊಂದಲದ ಗೂಡಾಗಿದೆ. ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತೊಡಗಿಸಿ, ಕೋಟಿಗಟ್ಟಲೆ ರೂಪಾಯಿ ವ್ಯಯಿಸಿ ನಡೆಸಿದ ಈ ಪ್ರಕ್ರಿಯೆ ಕೊನೆಗೂ ಮುಗಿದು ಸುಮಾರು 19 ಲಕ್ಷ ಮಂದಿ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಈ 19 ಲಕ್ಷ ಮಂದಿ ಅಕ್ಷರಶಃ ದೇಶ ರಹಿತರು. ಆದರೆ ಇವರನ್ನು ಸ್ವೀಕರಿಸುವುದು ಬಿಡಿ ನಮ್ಮವರೆಂದು ಒಪ್ಪಿಕೊಳ್ಳಲು ಕೂಡ ಬಾಂಗ್ಲಾದೇಶ ತಯಾರಿಲ್ಲ. 19 ಲಕ್ಷ ಮಂದಿಯ ಭವಿಷ್ಯ ಏನು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಲ್ಲದೆ ಈ ಎನ್‌ಆರ್‌ಸಿ ಪ್ರಕ್ರಿಯೆಗೆ ವಿಪಕ್ಷಗಳಿಂದ ಮಾತ್ರವಲ್ಲದೆ ಬಿಜೆಪಿಯೊಳಗಿಂದಲೇ ವಿರೋಧ ವ್ಯಕ್ತವಾಗಿದೆ. ಮಾಜಿ ಶಾಸಕರು, ನಿವೃತ್ತ ಸೇನಾಧಿಕಾರಿಯಂಥವರು ಕೂಡ ಎನ್‌ಆರ್‌ಸಿಯಿಂದ ಹೊರಗುಳಿದಿರುವುದು ಇದು ಸಮಗ್ರ ಪ್ರಕ್ರಿಯೆಯಾಗಿಲ್ಲ ಎನ್ನುವುದನ್ನು ತಿಳಿಸುತ್ತದೆ. ಅಲ್ಲಿ ಮರಳಿ ಎನ್‌ಆರ್‌ಸಿ ನಡೆ‌ಯಬೇಕೆಂಬ ಕೂಗು ಎದ್ದಿದೆ. 19 ಲಕ್ಷ ಮಂದಿಯನ್ನು ನಿರಾಶ್ರಿತರ ಶಿಬಿರಗಳಲ್ಲಿ ಕೂಡಿ ಹಾಕುವುದು ಮಾನವಾಧಿಕಾರಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇದರಿಂದ ಆಗಬಹು ದಾದ ಅಂತಾರಾಷ್ಟ್ರೀಯ ಪರಿಣಾಮಗಳು ಗಂಭೀರವಾಗಿರಬಹುದು. ಹೀಗಾಗಿ ಇಷ್ಟೆಲ್ಲ ಕಷ್ಟಪಟ್ಟು ಮಾಡಿದ ಎನ್‌ಆರ್‌ಸಿಯಿಂದ ಆದ ಲಾಭವೇನು ಎಂದು ಕೇಳಿಕೊಳ್ಳಬೇಕಾಗಿದೆ.
ಎನ್‌ಆರ್‌ಸಿ ಎಂದರೆ ನಾಗರಿಕರ ಸಾಚಾತನದ ಪರೀಕ್ಷೆ. ಇದು ಜನಗಣತಿ ಅಥವಾ ಮತದಾರರ ಪಟ್ಟಿಗೆ ಜನರನ್ನು ಸೇರಿಸುವಷ್ಟು ಸುಲಭದ ಕೆಲಸವಲ್ಲ. ಜನರು ತಮ್ಮ ಪೂರ್ವಜರು ಇಲ್ಲಿನವರೇ ಎಂದು ಸಾಬೀತುಪಡಿಸಲು ಅಗತ್ಯವಾಗಿರುವ ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳನ್ನು ಇಟ್ಟುಕೊಳ್ಳುವುದರಲ್ಲಿ ನಮ್ಮ ದೇಶ ಬಹಳ ಕಳಪೆ ದಾಖಲೆಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತಲೆಮಾರುಗಳ ಹಿಂದಿನ ವಿಚಾರ ಬಿಡಿ ಈಗಿನ ದಾಖಲೆಗಳೇ ಸಮರ್ಪಕವಾಗಿರದ ಲಕ್ಷಗಟ್ಟಲೆ ಪ್ರಕರಣ ಗಳಿವೆ. ಹೀಗಿರುವಾಗ ಯಾವ ನೆಲೆಯಲ್ಲಿ ಎನ್‌ಆರ್‌ಸಿ ನಡೆಸುವುದು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕಾಗಿದೆ.

125 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶಕ್ಕೆ ಅಕ್ರಮ ವಿದೇಶಿ ಪ್ರಜೆಗಳು ಹೊರೆ ಎನ್ನುವುದು ನಿಜ. ಇದು ಸಂಪನ್ಮೂಲ ಮತ್ತು ಸೌಲಭ್ಯದ ಹಂಚಿಕೆಯ ಜೊತೆಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಚಾರವೂ ಹೌದು. ಆದರೆ ಅಕ್ರಮ ಪ್ರಜೆಗಳನ್ನು ಗುರುತಿಸುವ ಪ್ರಕ್ರಿಯೆ ಉಳಿದವರಿಗೆ ಕಿರುಕುಳವಾಗಿ ಪರಿಣಮಿಸದಂತೆ ನೋಡಿಕೊಳ್ಳಬೇಕಾದುದು ಮುಖ್ಯ. ರಾಷ್ಟ್ರೀಯವಾಗಿ ನಡೆದಾಗ ದೇಶರಹಿತರಾಗಬಹುದಾಗ ಲಕ್ಷಗಟ್ಟಲೆ ಜನರ ಭವಿಷ್ಯ ಏನು ಎನ್ನುವ ಸ್ಪಷ್ಟವಾದ ಕಲ್ಪನೆಯೊಂದು ಆಳುವವರಲ್ಲಿ ಇರುವುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next