ಎನ್.ಆರ್.ಪುರ: ಪಟ್ಟಣದ ಗುರು ಭವನದಲ್ಲಿ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಸಾಮರ್ಥ್ಯ ಸೌಧದಲ್ಲಿ ತಾಲೂಕು ಪಂಚಾಯಿತಿ ಇಒ ಎಸ್.ನಯನ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಧನಂಜಯ ಮೇದೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿಯ ಮಹಿಳಾ ದಿನವನ್ನು ತಾಲೂಕಿನ ವ್ಯಾಪ್ತಿಯ ಎಲ್ಲಾ ಮಹಿಳಾ ಸಂಘಗಳು, ಸ್ತ್ರೀ ಶಕ್ತಿ, ಸ್ವಸಹಾಯ ಸಂಘದವರನ್ನು ಒಳಗೊಂಡು ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಮುತ್ತಿನಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕಾನೂರು ವೃತ್ತ ವ್ಯಾಪ್ತಿಯ ಅಂಗನವಾಡಿಯಲ್ಲಿ ಸಮಯ ಪಾಲನೆ, ಅಂಗನವಾಡಿ ಸ್ವತ್ಛತೆ, ರುಚಿಕರ ಅಡುಗೆ ಮಾಡುವುವವರು ಮತ್ತಿತರ ಅಂಶಗಳನ್ನು ಗಮನಿಸಿ ವೃತ್ತ ಮಟ್ಟದ ಅಂಗನವಾಡಿ ಸಹಾಯಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಎಂಬ ಬಿರುದು ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.
ಮಹಿಳೆಯರಿಗೆ ಆಟೋಟ ಅಥವಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಿಸಲು ಚಿಂತಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಇಲಾಖೆಯಿಂದ 20ಸಾವಿರ ರೂ.ಭರಿಸಲಾಗುವುದು. ಉಳಿದ ಮೊತ್ತವನ್ನು ಎಲ್ಲರ ಸಹಕಾರದಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಮಹಿಳಾ ದಿನವನ್ನು ವೈವಿಧ್ಯಮಯವಾಗಿ ಆಚರಿಸುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಬೇಕು. ಎಲ್ಲಾ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಆಚರಿಸಲು ನಿರ್ಧರಿಸಿರುವುದು ಒಳ್ಳೆಯ ತೀರ್ಮಾನ. ರೋಟರಿ ಸಂಸ್ಥೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸಾಹಿತ್ಯ, ಸಂಗೀತ, ಶಿಕ್ಷಣ, ಕ್ರೀಡೆ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು, ಪಟ್ಟಣದಲ್ಲಿ ಮಹಿಳಾ ಸಮಾಜದ ಸ್ಥಾಪಕರನ್ನು ಹಾಗೂ ಇನ್ನರ್‌ವ್ಹೀಲ್ ಸಂಸ್ಥೆ ಸ್ಥಾಪಕರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಪಟ್ಟಣ ಪಂಚಾಯಿತಿ ವೃತ್ತದ ಸಮೀಪದಿಂದ ಜಾಥಾ ನಡೆಸಲು ನಿರ್ಧರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ನಯನ ಮಾತನಾಡಿ, ಮಹಿಳಾ ದಿನಾಚರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಎಲ್ಲರೂ ಒಟ್ಟುಗೂಡಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮವನ್ನು ಮಾಡೋಣ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಅಂಬಿಕಾ, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಪ್ರಶಾಂತಿ ವೆಂಕಟೇಶ್, ಸೀಜಾ ಸದಾನಂದ, ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ.ಉಪೇಂದ್ರ ಇತರರಿದ್ದರು. ಎಲ್ಲಾ ಸಂಘ-ಸಂಸ್ಥೆಯವರು ಮಹಿಳಾ ದಿನಾಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.