ಎನ್.ಆರ್.ಪುರ: ತಾಲೂಕಿನ ಮೆಣಸೂರು ಗ್ರಾಮದ ಬಳಿಯಿರುವ ಎನ್.ಆರ್.ಪುರ- ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಹಲವೆಡೆ ಬಿರುಕು ಬಿಟ್ಟಿದೆ.
1949ರಲ್ಲಿ ಭದ್ರಾ ಅಣೆಕಟ್ಟು ನಿರ್ಮಿಸಿದಾಗ ಈ ಹಿಂದೆ ನರಸಿಂಹರಾಜಪುರದಿಂದ ಬೇರೆ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಐತಿಹಾಸಿಕ ತಡಸ ಸೇತುವೆ ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ನಂತರ ಶಿವಮೊಗ್ಗ-ಮಂಡಗದ್ದೆ ಊರುಗಳಿಗೆ ತಾಲೂಕು ಕೇಂದ್ರದಿಂದ ಹಾದು ಹೋಗುವ ರಸ್ತೆಯ ಮಧ್ಯದಲ್ಲಿ ಹರಿಯುವ ಬಕ್ರಿಹಳ್ಳಕ್ಕೆ 1950ರ ದಶಕದಲ್ಲಿ ಚಿಕ್ಕಮಗಳೂರು ಡಿಸ್ಟ್ರಿಕ್ ಬೋರ್ಡ್ ವತಿಯಿಂದ ಸೇತುವೆ ನಿರ್ಮಿಸಿ ಇದಕ್ಕೆ ಬಕ್ರಿಹಳ್ಳ ಸೇತುವೆ ಎಂದು ನಾಮಕರಣ ಮಾಡಲಾಯಿತು.
ಇದನ್ನು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ 1953ರ ಜೂನ್ 16ರಂದು ಉದ್ಘಾಟಿಸಿದ್ದರು. ಈ ಸೇತುವೆಯ ಮೂಲಕವೇ ಹಲವಾರು ವರ್ಷಗಳು ವಾಹನ ಸಂಚಾರ ನಡೆದಿತ್ತು. ಆದರೆ ಈ ಸೇತುವೆಯು ಸಹ ನಂತರದ ದಿನಗಳಲ್ಲಿ ಭದ್ರಾ ಹಿನ್ನೀರಿನಲ್ಲಿ ಮುಳುಗಿದ ಕಾರಣ ಹಾಗೂ ಈಗಿನ ಸೇತುವೆಯು ಕಿರಿದಾಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಳಿಸಿ ತಾಲೂಕಿನ ಮೆಣಸೂರು ಗ್ರಾಮದ ಬಳಿ 1970ರ ದಶಕದಲ್ಲಿ ರಾಜ್ಯ ರಸ್ತೆ ನಿಧಿಯಿಂದ ಭದ್ರಾಹಿನ್ನೀರಿಗೆ ಅಡ್ಡಲಾಗಿ 127.96 ಮೀಟರ್ ಸೇತುವೆ ನಿರ್ಮಿಸಿ ಇದಕ್ಕೆ ಹೊಸ ಸೇತುವೆ ನಿರ್ಮಿಸಿ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಪ್ರಸ್ತುತ ಈ ಸೇತುವೆ ನಿರ್ಮಿಸಲು ಬಳಸಿದ ಕಾಂಕ್ರಿಟ್ ಹಾಗೂ ಕಬ್ಬಿಣದ ಸಲಾಕೆಗಳ ಮೇಲ್ಪದರ ಕುಸಿದು ಕಾಣಿಸಿಕೊಳ್ಳುತ್ತಿದೆ. ಅಲ್ಲದೆ, ಕಲ್ಲಿನಿಂದ ನಿರ್ಮಿಸಿರುವ ಗೋಡೆಯ ಕೆಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಾಲಿ ಇರುವ ಸೇತುವೆ ಕಿರಿದಾಗಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಸೇತುವೆಯ ಮೇಲ್ಭಾಗದಲ್ಲೂ ಕೆಲವೆಡೆ ಕುಸಿತ ಕಂಡು ಬಂದಿದೆ. ಹಾಗಾಗಿ ವಿಸ್ತಾರ ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೆೇಕೆಂಬುದು ವಾಹನ ಚಾಲಕರು ಆಗ್ರಹಿಸಿದ್ದಾರೆ.
ಮೆಣಸೂರು ಗ್ರಾಮದ ಬಳಿ ಹೊಸದಾಗಿ ಸೇತುವೆ ನಿರ್ಮಾಣ ಮಾಡುವುದಕ್ಕೆ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪುನಃ ಇನ್ನೊಂದು ಬಾರಿ 40 ಅಡಿ ಅಗಲದ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
•
ರವಿಚಂದ್ರ,
ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್.