ಎನ್.ಆರ್.ಪುರ: ನಶಿಸಿ ಹೋಗುತ್ತಿರುವ ಲಗೋರಿ, ಮೂರು ಕಾಲು ಓಟ ಮುಂತಾದ ಅಪ್ಪಟ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಎಡೇಹಳ್ಳಿ ಉತ್ಸವದಲ್ಲಿ ಕ್ರೀಡಾಕೂಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.
ಗುರುವಾರ ಕುವೆಂಪು ಕ್ರೀಡಾಂಗಣದಲ್ಲಿ ಎಡೇಹಳ್ಳಿ ಉತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ನಡೆದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಉತ್ಸವ ಹಾಗೂ ತಾಲೂಕು ಉತ್ಸವಗಳನ್ನು ನಾಡಹಬ್ಬದಂತೆ ಆಚರಿಸಲಾಗುತ್ತಿದೆ. ಮಲೆನಾಡಿನ ಜನರ ಪ್ರತಿಭೆ ಗುರುತಿಸಲು ಉತ್ಸವಗಳು ಸಹಕಾರಿಯಾಗಲಿವೆ. ಕ್ರೀಡೆಗಳಲ್ಲಿ ಗೆಲ್ಲುವುದೇ ಮುಖ್ಯವಾಗಬಾರದು. ಭಾಗವಹಿಸುವುದು ಮುಖ್ಯ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬಹುದು. ಗೆದ್ದವರಿಗೆ ಬಹುಮಾನ ನೀಡಲಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರ್ಗಪ್ಪ ಮಾತನಾಡಿ, ಜಿಲ್ಲಾ ಮಟ್ಟದ ಉತ್ಸವದ ಅಂಗವಾಗಿ ಪೂರಕವಾಗಿ ನಡೆಯುತ್ತಿರುವ ತಾಲೂಕು ಉತ್ಸವದಲ್ಲಿ ಯುವ ಜನರಿಗೆ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸುತ್ತಿದ್ದೇವೆ. ಪ್ರಧಾನಮಂತ್ರಿ ಕರೆಯಂತೆ ಪಿಟ್ ಇಂಡಿಯಾ ಆಗಬೇಕು. ಯುವಜನರು ಸದೃಢರಾಗಬೇಕು. ಮೊಬೈಲ್, ಟಿ.ವಿ.ಯಂತಹ ಆಧುನಿತ ತಂತ್ರಜ್ಞಾನದಿಂದ ಯುವ ಜನರಿಗೆ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುತ್ತಾ ಬಂದರೆ ಆರೋಗ್ಯ, ಆಯುಷ್ಯ ಹೆಚ್ಚಾಗಿ ಮನಸ್ಸಿಗೆ ಆನಂದ ದೊರೆಯಲಿದೆ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯೆ ಜುಬೇದ ಮಾತನಾಡಿ, ನಮ್ಮ ಪೂರ್ವಿಕರು ಆಡುತ್ತಿದ್ದ ಲಗೋರಿಯಂತಹ ಆಟಗಳು ಮರೆಯಾಗಿವೆ. ಈಗ ಮೊಬೈಲ್‌ನಲ್ಲಿ ನಾಲ್ಕು ಗೋಡೆಯೊಳಗೆ ಕುಳಿತು ಒಬ್ಬರೇ ಗೇಮ್ ಆಡುತ್ತಿದ್ದಾರೆ. ಇದು ಕಡಿಮೆಯಾಗಿ ಬಯಲಿನಲ್ಲಿ ಹತ್ತಾರು ಜನರ ಜತೆ ಆಟವಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.
ಸಭೆಯಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭದ್ರೇಗೌಡ ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ವಿಜೇತರು: ಪುರುಷರ ವಿಭಾಗ- ಲಗೋರಿ ಆಟ- ಪ್ರಥಮ ಸೋಮಶೇಖರ್ ಮತ್ತು ತಂಡ ಅಗ್ರಹಾರ, ದ್ವಿತೀಯ ಸುಮಂತ್ ಮತ್ತು ತಂಡ ದ್ವಿತೀಯ, ಮೂರು ಕಾಲಿನ ಓಟ -ಪ್ರಥಮ ಅಸನ್ ಖಾನ್ ಮತ್ತು ರಂಜು, ದ್ವಿತೀಯ ಸುಕೇಶ್ ಮತ್ತು ಚರಣ್, ತೃತೀಯ ಪಾಜಿಲ್ ಮತ್ತು ಬೇಸಿಲ್. ಗೋಣಿ ಚೀಲ ಓಟ ಅಸನ್‌ಖಾನ್ ಮುತ್ತಿನಕೊಪ್ಪ ಪ್ರಥಮ, -ವಾಜಿಲ್ ದ್ವಿತೀಯ, ಶೆಟ್ಟಿಕೊಪ್ಪ ದೀಪಕ್ ತೃತೀಯ.
ಮಹಿಳೆಯರ ವಿಭಾಗ- ಲಗೋರಿ ನಿಷ್ಮಾ ಮತ್ತು ತಂಡ ಪ್ರಥಮ, ಸುನೀತ ಮತ್ತು ತಂಡ ದ್ವಿತೀಯ, ರಂಗೋಲಿ ಸ್ಪರ್ಧೆ- ಸೀಮಾ ಸದಾನಂದ ಪ್ರಥಮ, ಗಾನಶ್ರೀ ದ್ವಿತೀಯ, ಸುಸ್ಮಿತ ತೃತೀಯ. ಮಡಿಕೆ ಒಡೆಯುವ ಸ್ಪರ್ಧೆ ಸುನೀತಾ ಪ್ರಥಮ, ಐಶ್ವರ್ಯ ದ್ವಿತೀಯ, ಜುಬೇದ ತೃತೀಯ.