ಎನ್.ಆರ್.ಪುರ: ಕಳೆದೆ ಕೆಲವು ದಿನಗಳಿಂದ ಸಹಕಾರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಕ್ಷರಷಃ ಕಂಗಾಲಾಗಿದ್ದಾರೆ. ಈ ಭಾಗದಲ್ಲಿ ಯಥೇಚ್ಛವಾಗಿ ಸಹಕಾರ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತಿದ್ದವು. ಅನೇಕ ಸರ್ಕಾರಿ ನೌಕರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಈ ಬಸ್‌ಗಳನ್ನು ನಂಬಿಕೊಂಡಿದ್ದರು. ಆದರೆ, ಇದೀಗ ಬಸ್ ಗಳಿಲ್ಲದೆ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಅಧಿಕಾರಿಗಳು ಕಚೇರಿ ಸಮಯಕ್ಕೆ ಸರಿಯಾಗಿ ಬರಲಾಗುತ್ತಿಲ್ಲ. ಒಂದು ಬಸ್ ಬಂದರೆ ಸೀಟುಗಳೇ ಇರುವುದಿಲ್ಲ. ಅದರಲ್ಲೂ ಬಸ್‌ನಲ್ಲಿ ಕಾಲು¤ಳಿತ. ಹಾಲಿ ಸಂಚರಿಸುತ್ತಿರುವ ಐದಾರು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತವೆ. ಬಸ್‌ನಲ್ಲಿ ತುಂಬಿದ ಪ್ರಯಾಣಿಕರನ್ನು ನೋಡಿಯೇ ಕೆಲ ಪ್ರಯಾಣಿಕರು ಬಸ್ ಹತ್ತಲ್ಲ. ಒಟ್ಟಾರೆ ಸಹಕಾರ ಸಾರಿಗೆ ನೌಕರರ ಮುಷ್ಕರ ಜನಸಾಮಾನ್ಯರಿಗೆ, ಅಧಿಕಾರಿಗಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರಿದೆ.
ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಬಸ್ ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳು, ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಿವಮೊಗ್ಗದಿಂದ ಎನ್.ಆರ್ .ಪುರ ಮಾರ್ಗವಾಗಿ ಶೃಂಗೇರಿಗೆ ಸೋಮವಾರದಿಂದ ಮೂರ್‍ನಾಲ್ಕು ಬಸ್ ಗಳು ಸಂಚಾರ ನಡೆಸಿವೆ. ಕೆ.ಎಸ್.ಆರ್.ಟಿ. ಬಸ್‌ನಲ್ಲಿ ಅಧಿಕ ಹಣ ಪಡೆಯುತ್ತಿದ್ದಾರೆ. ಅವರಿಗೆ ಹೊಸ ದಾರಿಯಾಗಿರುವುದರಿಂದ ಎಲ್ಲಿಗೆ ಎಷ್ಟು ತೆಗೆದುಕೊಳ್ಳಬೇಕೆಂಬುದು ತಿಳಿಯುತ್ತಿಲ್ಲ. ಇದರಿಂದ ಕೆಲ ಪ್ರಯಾಣಿಕರು ಹಾಗೂ ಕೆ.ಎಸ್.ಆರ್.ಟಿ. ಬಸ್ ನಿರ್ವಾಹಕರ ನಡುವೆ ಮಾತಿನ ಚಕಾಮಕಿ ನಡೆದಿವೆ.
ಪ್ರತಿನಿತ್ಯ ಮೂವತ್ತಕ್ಕೂ ಅಧಿಕ ಸಹಕಾರ ಸಾರಿಗೆ ಬಸ್‌ಗಳು ಶಿವಮೊಗ್ಗ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಏನೂ ತೊಂದರೆ ಕಾಣುತ್ತಿರಲಿಲ್ಲ. ಬಸ್ ಸಮಯಕ್ಕೆ ಸರಿಯಾಗಿ ಹೊಂದಿಕೊಂಡಿದ್ದರು. ಆದರೆ ಇದೀಗ ಏಕಾಏಕಿ ಬಸ್‌ಗಳ ಓಡಾಟವನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿರುವುದರಂತೂ ಸತ್ಯ.
ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕಚೇರಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಸಹಕಾರಿ ಸಾರಿಗೆ ಬಸ್‌ಗಳು ಕಚೇರಿ ಸಮಯಕ್ಕೆ ಸರಿಯಾಗಿದ್ದವು. ಆದರೆ ಇದೀಗ ಬಹಳ ತೊಂದರೆಯಾಗಿದೆ.
ನಾಗರಾಜ್ ,
ಸರ್ಕಾರಿ ಅಧಿಕಾರಿ, ಎನ್.ಆರ್.ಪುರ
ಶಿವಮೊಗ್ಗಕ್ಕೆ ಹೋಗಲು ಬೆ.11ರಿಂದ ಕಾಯುತ್ತಿದ್ದೆ. ಬಂದ ಒಂದೆರಡು ಬಸ್‌ಗಳಲ್ಲಿ ತುಂಬಿದ್ದ ಜನರನ್ನು ನೋಡಿ ಹೋಗಲಿಲ್ಲ. ಮೂರು ಗಂಟೆ ವರೆಗೂ ಕಾದು ಶಿವಮೊಗ್ಗಕ್ಕೆ ತೆರಳಬೇಕಾಯಿತು. ಸಹಕಾರ ಸಾರಿಗೆ ಸಂಸ್ಥೆ ಜನರಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಇದೀಗ ನಷ್ಟ ಅನುಭವಿಸುತ್ತಿರುವುದು ನಿಜಕ್ಕೂ ಶೋಚನೀಯ.
ಮಂಜುನಾಥ್,
ಎನ್.ಆರ್.ಪುರ