Advertisement

ಎನ್‌ಪಿಎಸ್‌ Vs ಒಪಿಎಸ್‌ ಇದರಲ್ಲಿ ಯಾವುದು ಉತ್ತಮ?

11:16 PM Dec 19, 2022 | Team Udayavani |

2004ರಿಂದ ಜಾರಿಯಲ್ಲಿರುವ ಹೊರ ಪಿಂಚಣಿ ಯೋಜನೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕದಲ್ಲಿಯೂ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಹೋರಾಟಗಳು ಶುರುವಾಗಿವೆ. ಹಳೇ ಪಿಂಚಣಿ ವ್ಯವಸ್ಥೆಯಿಂದ ಜೀವನಕ್ಕೆ ಭದ್ರತೆ ಸಿಗುತ್ತದೆ ಎಂಬುದು ಸರಕಾರಿ ನೌಕರರ ಆಗ್ರಹ. ಆದರೆ ಒಪಿಎಸ್‌ನಿಂದ ಸರಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತದೆ ಎಂಬುದು ಕೇಂದ್ರ ಸರಕಾರದ ವಾದ. ಹೀಗಾಗಿ ಹಗ್ಗಜಗ್ಗಾಟ ನಡೆಯುತ್ತಿದ್ದು, ಹೋರಾಟವೂ ತೀವ್ರಗೊಳ್ಳುತ್ತಿದೆ. 

Advertisement

ಒಪಿಎಸ್‌ ಯೋಜನೆ
2004ರ ಜ.1ಗಿಂತ ಹಿಂದೆ ಕೇಂದ್ರ ಸರಕಾರಿ ಹುದ್ದೆಗೆ ನೇಮಕವಾದವು ಹಳೇ ಪಿಂಚಣಿ ವ್ಯವಸ್ಥೆ  (ಒಪಿಎಸ್‌) ನೊಳಗೆ ಬರುತ್ತಾರೆ. ಹಳೇ ಪಿಂಚಣಿ ಯೋಜನೆಯಲ್ಲಿ, ಸರಕಾರಿ ನೌಕರರೊಬ್ಬರು, ತಮ್ಮ ನಿವೃತ್ತಿಯ ಕಡೇ ದಿನ ತೆಗೆದುಕೊಂಡ ವೇತನದ ಅರ್ಧ ಅಥವಾ ಕಳೆದ 10 ತಿಂಗಳಲ್ಲಿ ತೆಗೆದುಕೊಂಡ ಪರಿಹಾರವನ್ನು ಅಂದಾಜಿಸಿ ನಿವೃತ್ತಿ ಅನಂತರದಲ್ಲಿ ಪ್ರತೀ ತಿಂಗಳು ಕೊಡಲಾಗುತ್ತದೆ. ಇದರ ಜತೆಗೆ ಡಿಎ ಕೂಡ ಸೇರ್ಪಡೆಯಾಗುತ್ತದೆ. ಈ ಪಿಂಚಣಿ ಪಡೆಯಬೇಕು ಎಂದರೆ ಸರಕಾರಿ ನೌಕರರು, ಕಡೇ ಪಕ್ಷ 10 ವರ್ಷಗಳಾದರೂ ಸೇವೆ ಸಲ್ಲಿಸಿರಬೇಕು.

ಹಣದುಬ್ಬರ ಮತ್ತು ಜೀವನ ವೆಚ್ಚಕ್ಕೆ ತುಟ್ಟಿ ಭತ್ಯೆ ಹೊಂದಾಣಿಕೆಯಾಗಿರುವುದರಿಂದ ಆಗಾಗ ಡಿಎ ಹೆಚ್ಚಳವಾಗುತ್ತದೆ. ಇದರಿಂದ ಇವರ ಪಿಂಚಣಿ ಕೂಡ ಏರಿಕೆಯಾಗುತ್ತಲೇ ಹೋಗುತ್ತದೆ. ಇದಷ್ಟೇ ಅಲ್ಲ, ಒಂದು ವೇಳೆ ಪಿಂಚಣಿ ಪಡೆಯುತ್ತಿದ್ದ ನಿವೃತ್ತ ನೌಕರರೊಬ್ಬರು ಸಾವನ್ನಪ್ಪಿದರೆ ಅವರ ಕುಟುಂಬ ಸದಸÂರಿಗೆ, ಪಿಂಚಣಿಯನ್ನು ನೀಡಲಾಗುತ್ತದೆ.  ಅಷ್ಟೇ ಅಲ್ಲ, ಒಪಿಎಸ್‌ಗಾಗಿ ನೌಕರರ ವೇತನದಿಂದ ಯಾವುದೇ ಹಣವನ್ನು ಮುರಿದುಕೊಳ್ಳಲಾಗುವುದಿಲ್ಲ. ಸರಕಾರವೇ ಇದನ್ನು ಪ್ರತೀ ತಿಂಗಳು ಸಂಪೂರ್ಣವಾಗಿ ಭರಿಸುತ್ತಿತ್ತು. ಇದರಿಂದ ನಿವೃತ್ತಿ ಅನಂತರದಲ್ಲಿ ಆರ್ಥಿಕ ಭದ್ರತೆಯೂ ಸಿಗುತ್ತದೆ.

ಹೊಸ ಪಿಂಚಣಿ ವ್ಯವಸ್ಥೆಯಲ್ಲೇನಿದೆ?
ಕೇಂದ್ರ ಸರಕಾರವು 2004ರಿಂದ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿದೆ. ಇದರಲ್ಲಿ ಸೇನಾಪಡೆಯಲ್ಲಿರುವವರನ್ನು ಹೊರತುಪಡಿಸಿ ಉಳಿದ ಎಲ್ಲ ಕೇಂದ್ರ ಸರಕಾರಿ ನೌಕರರಿಗೆ ಈ ಎನ್‌ಪಿಎಸ್‌ ಅನ್ವಯವಾಗಲಿದೆ. 2004ರಿಂದ ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ಹೊರತುಪಡಿಸಿ, ಉಳಿದೆಲ್ಲÉ ರಾಜ್ಯಗಳು ತಮ್ಮ ನೌಕರರಿಗೆ ಈ ಎನ್‌ಪಿಎಸ್‌ ಅನ್ನು ಜಾರಿಗೊಳಿಸಿವೆ.

ಎನ್‌ಪಿಎಸ್‌ನಲ್ಲಿ ನೌಕರರ ಮೂಲವೇತನದಲ್ಲಿ ಶೇ.10ರಷ್ಟನ್ನು ಪಿಂಚಣಿ ನಿಧಿಗಾಗಿ ಕಡಿತ ಮಾಡಲಾಗುತ್ತದೆ. ಸರಕಾರದ ಕಡೆಯಿಂದ ಶೇ.14ರಷ್ಟನ್ನು ಇದಕ್ಕೆ ಸೇರಿಸಲಾಗುತ್ತದೆ. ಎನ್‌ಪಿಎಸ್‌ ಅನ್ನು ಖಾಸಗಿ ಸಂಸ್ಥೆಗಳೂ ಅನ್ವಯಗೊಳಿಸಿಕೊಳ್ಳಬಹುದಾಗಿದೆ.

Advertisement

ನೌಕರರು ನಿವೃತ್ತಿಯಾಗುವ ವೇಳೆ ಶೇ.60ರಷ್ಟು ಮೊತ್ತವನ್ನು ಯಾವುದೇ ತೆರಿಗೆ ಕಡಿತ ಇಲ್ಲದೇ ವಾಪಸ್‌ ಪಡೆಯಬಹುದಾಗಿದೆ. ಉಳಿದ ಶೇ.40ರಷ್ಟನ್ನು ಅಲ್ಲಿಯೇ ಉಳಿಸಿ ವಾರ್ಷಿಕವಾಗಿ ಇಂತಿಷ್ಟು ಎಂದು ಪಡೆಯಬಹುದು. ಎನ್‌ಪಿಎಸ್‌ನಲ್ಲಿ ಹೆಚ್ಚು ವೇತನ ಪಡೆಯುವಂಥವರು, ತಮ್ಮ ವೇತನದಿಂದ ಹೆಚ್ಚು ಹಣವನ್ನು ಬೇಕಾದರೆ ಮುರಿಸಬಹುದು.

ರಾಜ್ಯದಲ್ಲಿ ಹೋರಾಟ ಜೋರು
ಕೇಂದ್ರ ಸರಕಾರದ “ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್ಆರ್‌ಡಿಎ) ಕಾಯ್ದೆ  ಮೂಲಕ 2003-04ರಲ್ಲಿ ಜಾರಿಗೆ ತರಲಾಗಿರುವ ಹೂಡಿಕೆ ಆಧಾರಿತ “ಹೊಸ ಪಿಂಚಣಿ ಯೋಜನೆ’ (ಎನ್‌ಪಿಎಸ್‌) ಹಠಾವೋ ಹೋರಾಟ ರಾಜ್ಯದಲ್ಲಿ ಜೋರಾಗಿದೆ. ಎನ್‌ಪಿಎಸ್‌ ರದ್ದುಪಡಿಸಿ ಹಿಂದಿನ ಒಪಿಎಸ್‌ ಮರಳಿ ತರುವಂತೆ ರಾಜ್ಯದ ಸರಕಾರಿ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರಿ ನೌಕರರ ಸಂಘ ಎನ್‌ಪಿಎಸ್‌ ಬೇಡ ಎಂಬ ನಿಲುವು ಹೊಂದಿದ್ದು, ಎಪ್ರಿಲ್‌ನಿಂದ ನಿರ್ಣಾಯಕ ಹೋರಾಟಕ್ಕೆ ನಿರ್ಧರಿಸಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ಎನ್‌ಪಿಎಸ್‌ ನೌಕರರ ಸಂಘ ರಾಜ್ಯಾದ್ಯಂತ “ಒಪಿಎಸ್‌ ಸಂಕಲ್ಪ ಯಾತ್ರೆ’ ಮೂಲಕ ಎನ್‌ಪಿಎಸ್‌ ರದ್ದತಿಗೆ ಮಾಡು ಇಲ್ಲವೆ ಮಡಿ ಹೋರಾಟ ಕೈಗೊಂಡಿದೆ. ಆದರೆ ಎನ್‌ಪಿಎಸ್‌ ರದ್ದತಿ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಿದೆ.

ಅರ್ಹ ನೌಕರರು
ರಾಜ್ಯದಲ್ಲಿ 2.50 ಲಕ್ಷಕ್ಕೂ ಅಧಿನ ಸರಕಾರಿ ನೌಕರರು ಎನ್‌ಪಿಎಸ್‌ ವ್ಯಾಪ್ತಿಗೆ ಬರುತ್ತಾರೆ. ಈವರೆಗೆ ಎನ್‌ಪಿಎಸ್‌ಗೆ ನೌಕರರ ವಂತಿಗೆ ನೌಕರರ ಪಾಲಿನ ಶೇ.10 ರಂತೆ 6,154 ಕೋಟಿ ಹಾಗೂ ಸರಕಾರದ ಪಾಲಿನ ಶೇ.14ರಂತೆ ಸರಕಾರದ ವಂತಿಗೆ 7,298 ಕೋಟಿ ರೂ. ಪಾವತಿಸಲಾಗಿದೆ. ಅದರಂತೆ 2006ರಿಂದ ಇಲ್ಲಿವರೆಗೆ ಪಾವತಿಸಿರುವ 18 ಸಾವಿರ ಕೋಟಿ ರಾಜ್ಯ ಸರಕಾರಿ ನೌಕರರ ಹಣ ಕೇಂದ್ರ ಸರಕಾರದ ಬಳಿ ಇದೆ.

ರಾಜ್ಯ ಸರಕಾರಿ ನೌಕರರ ವಾದವೇನು?
‘ಎನ್‌ಪಿಎಸ್‌’ ಕೇವಲ ಪಿಂಚಣಿ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸಿದರೆ ಸರಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ. ಎನ್‌ಪಿಎಸ್‌ ಟ್ರಸ್ಟ್‌ನಲ್ಲಿ ವಂತಿಗೆ ಮೊತ್ತವೇ 16 ಸಾವಿರ ಕೋಟಿಗೂ ಹೆಚ್ಚಿದೆ. ಒಪಿಎಸ್‌ ಜಾರಿಯಾದರೆ ವಂತಿಗೆ ಕಟ್ಟುವುದು ತಪ್ಪುತ್ತದೆ. ಎನ್‌ಪಿಎಸ್‌ ರದ್ದುಗೊಳಿಸಿದಾಗ ವಂತಿಗೆ ಹಣ ಬಡ್ಡಿಸಮೇತ ವಾಪಸ್‌ ಬರುತ್ತದೆ. ಅದನ್ನು ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಸಾಮಾನ್ಯ ಭವಿಷ್ಯ ನಿಧಿಗೆ ಪರಿವರ್ತಿಸಿದರೆ ಎರಡು ವರ್ಷ ವಾಪಸ್‌ ಪಡೆದುಕೊಳ್ಳುವುದಿಲ್ಲ ಎಂದು ನೌಕರರು ಹೇಳಿದ್ದಾರೆ. ಆದ್ದರಿಂದ ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೆ ತರಬೇಕು ಎಂಬುದು ಸರಕಾರಿ ನೌಕರರ ವಾದವಾಗಿದೆ.

ಎನ್‌ಪಿಎಸ್‌ ರದ್ದಾಗಲಿ ಎಂದು ಮಾಡು ಇಲ್ಲವೆ ಮಡಿ ಹೋರಾಟ ಆರಂಭಿಸಿದ್ದೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎನ್‌ಪಿಎಸ್‌ ರದ್ದುಗೊಳಿಸಿ ಒಪಿಎಸ್‌ ಜಾರಿಗೆ ತಂದರೆ ಕಾನೂನು ತೊಡಕೂ ಇಲ್ಲ, ಆರ್ಥಿಕ ಹೊರೆಯೂ ಆಗುವುದಿಲ್ಲ.
-ಶಾಂತರಾಮ್‌, ಅಧ್ಯಕ್ಷ, ಕರ್ನಾಟಕ ರಾಜ್ಯ ಎನ್‌ಪಿಎಸ್‌ ನೌಕರರ ಸಂಘ

ಎನ್‌ಪಿಎಸ್‌ ಬೇಡ ಅನ್ನುವುದು ನಮ್ಮ ಸ್ಪಷ್ಟ ನಿಲುವು. ಎನ್‌ಪಿಎಸ್‌ ರದ್ದಾಗಬೇಕು ಎಂಬುದರಲ್ಲಿ ಎರಡು ಮಾತೇ ಇಲ್ಲ. ವೇತನ ಆಯೋಗದ ಶಿಫಾರಸು ಬಳಿಕ ಸರಕಾರಿ ನೌಕರರ ಸೌಲಭ್ಯಗಳನ್ನು ಸಿಗಲಿವೆ. ಅದಾದ ಬಳಿಕ ಎನ್‌ಪಿಎಸ್‌ ರದ್ದತಿಗೆ ಎಪ್ರಿಲ್‌ ಅನಂತರದಲ್ಲಿ ನಿರ್ಣಾಯಕ ಹೋರಾಟ ಕೈಗೊಳ್ಳಲಾಗುವುದು.
-ಸಿ.ಎಸ್‌. ಷಡಾಕ್ಷರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next