Advertisement
ಮುಂದುವರಿಕೆನಿಮ್ಮ ಖಾತೆಯನ್ನು ಯಾವುದೇ ಹಿಂಪಡೆತ/ಆನ್ಯೂಟಿ ಇಲ್ಲದೆ 70 ವರ್ಷದವರೆಗೆ ಜೀವಂತ ಖಾತೆಯಾಗಿ ದೇಣಿಗೆ ಕಟ್ಟುತ್ತಾ ಮುಂದುವರಿಸಿಕೊಂಡು ಹೋಗಬಹುದು. ಈ ಅವಧಿಯಲ್ಲಿ ನಿಮ್ಮ ಖಾತೆ ಎಲ್ಲಾ ರೀತಿಯಲ್ಲೂ ಹಿಂದಿನ ಸಾಮಾನ್ಯ ಖಾತೆಯಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಕರ ವಿನಾಯಿತಿ ಮತ್ತಿತರ ಸೌಲಭ್ಯಗಳು ದೊರಕುತ್ತವೆ.
ಖಾತೆಯನ್ನು ಮುಕ್ತಾಯಗೊಳಿಸಿ ದುಡ್ಡು ಹಿಂಪಡೆಯುವ ಆಸಕ್ತಿ ಉಳ್ಳವರು ತಮಗೆ 60 ವರ್ಷ ವಯಸ್ಸಾದ ಕೂಡಲೇ ಎನ್‌ಪಿಎಸ್ ಫಂಡಿನಲ್ಲಿ ಸಂಚಯವಾಗಿರುವ ಒಟ್ಟು ಮೊತ್ತದ ಗರಿಷ್ಟ ಶೇ.60 ವರೆಗೆ ಏಕಗಂಟಿನಲ್ಲಿ ಹಿಂತೆಗೆಯಬಹುದಾಗಿದೆ. ಬಾಕಿ ಕನಿಷ್ಟ ಶೇ.40ನ್ನು ಕಡ್ಡಾಯವಾಗಿ ಒಂದು ವಿಮಾ ಕಂಪೆನಿಯ ಆನ್ಯುಟಿ ಯೋಜನೆಯಲ್ಲಿ ತೊಡಗಿಸುವ ನಿರ್ದೇಶನವನ್ನು ಎನ್‌ಪಿಎಸ್ ಗೆ ನೀಡಬೇಕು. ಆ ಆನ್ಯೂಟಿ ಯೋಜನೆ ಮಾಸಿಕ ಪೆನ್ಶನ್ ನೀಡುತ್ತಾ ಹೋಗುತ್ತದೆ – ಸ್ವಂತಕ್ಕೆ ಹಾಗೂ ಬಳಿಕ ಹೆಂಡತಿ/ಗಂಡನಿಗೆ ಈ ಮೂಲಕ ಪಿಂಚಣಿಯನ್ನು ಪಡೆಯಬಹುದು. ಈ ಮೊತ್ತಗಳನ್ನು ಭಾರತದಲ್ಲಿಯೂ ಅಥವಾ ಹೊರದೇಶದಲ್ಲಿಯೂ ಪಡೆಯಬಹುದು. ಆದರೆ, ಎನ್‌ಪಿಎಸ್ ನಿಧಿಯಲ್ಲಿ ಒಟ್ಟು ಮೊತ್ತ ರೂ. 2 ಲಕ್ಷಕ್ಕಿಂತ ಕಮ್ಮಿ ಇದ್ದಲ್ಲಿ ಸಂಪೂರ್ಣ ಮೊತ್ತವನ್ನು (ಆನ್ಯೂಟಿ ಮಾಡಿಸಿಕೊಳ್ಳದೆ) ಹಿಂಪಡೆಯಬಹುದು. ಎನ್‌ಪಿಎಸ್ ಯೋಜನೆಯ ಇನ್ನೊಂದು ಲಕ್ಷಣ ಏನೆಂದರೆ, 60 ವರ್ಷ ದಾಟಿದವರು ತಮ್ಮ ಹಿಂಪಡೆತವನ್ನು, ಆನ್ಯೂಟಿಯನ್ನು ಅಥವಾ ಎರಡನ್ನೂ ಮುಂದೂಡಬಹುದು. ಆನ್ಯೂಟಿಯನ್ನು 63 ವಯಸ್ಸಿನ ಒಳಗಾಗಿ ಹಾಗೂ ಹಿಂಪಡೆತವನ್ನು 70 ವರ್ಷದವರೆಗೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಹಿಂಪಡೆತವನ್ನು ಏಕಗಂಟಿನಲ್ಲಿ ಅಥವಾ ಒಟ್ಟು 10 ವಾರ್ಷಿಕ ಕಂತುಗಳಲ್ಲೂ ಪಡಕೊಳ್ಳಬಹುದು.
Related Articles
Advertisement
ಏನಿದು ಆನ್ಯೂಟಿ?ಆನ್ಯೂಟಿ ಎಂದರೆ ಕರಾರಿನಂತೆ ದೀರ್ಘ ಕಾಲಕ್ಕೆ ನಿರಂತರವಾಗಿ ನಿಗದಿತ ಮೊತ್ತವನ್ನು ಪಾವತಿಸುತ್ತಾ ಹೋಗುವ ಸಾಧನ. ಆರಂಭದಲ್ಲಿ ಠೇವಣಿ ಹೂಡಿದ ಮೊತ್ತದಿಂದ ನೀವು ಆಯ್ದುಕೊಂಡ ಆಯ್ಕೆಯ ಪ್ರಕಾರ ಇದು ನಿರಂತರವಾಗಿ ಪೆನ್ಶನ್ ರೀತಿಯಲ್ಲಿ ಮೊತ್ತವನ್ನು ಪಾವತಿಸುತ್ತಾ ಹೋಗುತ್ತದೆ. ಏಕಗಂಟಿನಲ್ಲಿರುವ ಒಂದು ದೊಡ್ಡ ಮೊತ್ತದಿಂದ ಆದಾಯ ಗಳಿಸಲು ಇದೊಂದು ಉತ್ತಮ ಆಯ್ಕೆ. ಭಾರತದಲ್ಲಿ ವಿಮಾ ಕಂಪೆನಿಗಳು ಆನ್ಯೂಟಿ ಪಾಲಿಸಿಗಳನ್ನು ಇಶ್ಯೂ ಮಾಡುತ್ತವೆ. ಎಲ್ಲೆ„ಸಿಯ ಜೀವನ್ ಅಕ್ಷಯ್ ಅಂತಹ ಒಂದು ಆನ್ಯೂಟಿ ಪಾಲಿಸಿ. ಎನ್‌ಪಿಎಸ್ ಯೋಜನೆಗೆ ಅದರೊಡನೆ ಅದರದ್ದೇ ಆದ ಆನ್ಯೂಟಿ ಯೋಜನೆಗಳಿವೆ. ಆನ್ಯೂಟಿಯ ಒಳಗೂ ಹಲವಾರು ಉಪ ಆಯ್ಕೆಗಳಿರುತ್ತವೆ. ಸಂದರ್ಭಕ್ಕೆ ಸರಿಯಾಗಿ ಬೇಕಾದ ಆಯ್ಕೆಯನ್ನು ಪಡಕೊಳ್ಳಬಹುದು. ಎನ್‌ಪಿಎಸ್‌ನಲ್ಲಿ ಬರುವ ಆನ್ಯೂಟಿಯಲ್ಲಿ ಮುಖ್ಯವಾಗಿ ಈ ಕೆಳಗಿನ ಆಯ್ಕೆಗಳಿರುತ್ತವೆ (ಇದರಲ್ಲಿ ಕಂಪೆನಿಯಿಂದ ಕಂಪೆನಿಗೆ ವ್ಯತ್ಯಾಸಗಳು ಇರಬಹುದು):
1. ಆಜೀವ ಪರ್ಯಂತ ಪೆನ್ಶನ್- ಗ್ರಾಹಕರಿಗೆ ಮಾತ್ರ
2. ಆಜೀವ ಪರ್ಯಂತ – ಗ್ರಾಹಕರಿಗೆ ಹಾಗೂ ನಾಮಿನಿಗೆ ಅಸಲು ಮೊತ್ತದ ವಾಪಸಾತಿ
3. ಆಜೀವ ಪರ್ಯಂತ ಮತ್ತು ಮೃತ್ಯುವಿನ ಬಳಿಕ ಹೆಂಡತಿ/ಗಂಡನಿಗೆ ಆಜೀವ ಪರ್ಯಂತ ಶೇ.100 ಪೆನ್ಶನ್
4. ಆಜೀವ ಪರ್ಯಂತ ಮತ್ತು ಮೃತ್ಯುವಿನ ಬಳಿಕ ಹೆಂಡತಿ/ಗಂಡನಿಗೆ ಆಜೀವ ಪರ್ಯಂತ ಶೇ.100 ಪೆನ್ಶನ್ ಹಾಗೂ ನಾಮಿನಿಗೆ ಅಸಲು ಮೊತ್ತದ ವಾಪಸಾತಿ
ಈ ರೀತಿ ಒಟ್ಟು 4 ಪ್ರಮುಖ ಆಯ್ಕೆಗಳಿವೆ. ಪ್ರತಿಯೊಂದು ಆಯ್ಕೆಯಲ್ಲಿಯೂ ಪ್ರತಿಫಲ ಭಿನ್ನವಾಗಿರುತ್ತದೆ. ಅದನ್ನು ಆಯ್ಕೆಯ ಸಂದರ್ಭದಲ್ಲಿ ಪ್ರಚಲಿತ ಬಡ್ಡಿದರಗಳನ್ನು ಅನುಸರಿಸಿ ನಿಗದಿಪಡಿಸುತ್ತಾರೆ. ಆನ್ಯೂಟಿ ನೀಡುವ ಒಟ್ಟು 5 ಸಂಸ್ಥೆಗಳು ಎನ್‌ಪಿಎಸ್ ಜೊತೆ ಕೈ ಜೋಡಿಸಿವೆ. ಆನ್ಯೂಟಿ ಪಾವತಿಗಾಗಿ ಎಲ್ಲೆ„ಸಿ, ಎಸ್‌ಬಿಐ, ಎಚ್‌ಡಿಎಫ್ಸಿ, ಐಸಿಐಸಿಐ ಹಾಗೂ ಸ್ಟಾರ್ ಯೂನಿಯನ್ ವಿಮಾ ಸಂಸ್ಥೆಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು. 60ರ ಮುನ್ನ
60 ವರ್ಷ ಆಗುವ ಮುನ್ನ ಕೆಲಸ ಕಳೆದುಕೊಂಡೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಎನ್‌ಪಿಎಸ್ ಕಂತುಗಳನ್ನು ಮುಂದುವರಿಸಲಾರದೆ ಖಾತೆಯನ್ನು ಸಂಪೂರ್ಣವಾಗಿ ಕೈಬಿಡಬೇಕಾದವರು ಏನು ಮಾಡಬೇಕು? ಮೊತ್ತ ಮೊದಲನೆಯದಾಗಿ ಇಂತಹ ಆಯ್ಕೆ ಮಾಡಿಕೊಳ್ಳಲು ಖಾತೆಗೆ ಕನಿಷ್ಠ 10 ವರ್ಷ ವಯಸ್ಸು ಆಗಿರಬೇಕು. ಅಂಥವರು ಕನಿಷ್ಠ ಶೇ.80 ಮೊತ್ತವನ್ನು ಆನ್ಯೂಟಿಗೆ ಪರಿವರ್ತಿಸಿಕೊಂಡು ಉಳಿದ ಗರಿಷ್ಟ ಶೇ.20ನ್ನು ಹಿಂಪಡೆಯಬಹುದು. ಆದರೆ ಖಾತೆಯಲ್ಲಿ ರೂ. 1 ಲಕ್ಷಕ್ಕಿಂತ ಕಡಿಮೆ ದುಡ್ಡು ಇದ್ದರೆ ಸಂಪೂರ್ಣ ಹಿಂಪಡೆತ ಸಾಧ್ಯ. ಖಾತೆದಾರನ ಮೃತ್ಯು
60ರ ಮೊದಲು ಖಾತೆದಾರನ ಮೃತ್ಯು ಸಂಭವಿಸಿದಲ್ಲಿ ಒಟ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ನಾಮಿನಿಯು ಏಕಗಂಟಿನಲ್ಲಿ ದುಡ್ಡನ್ನು ಪಡಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಆನ್ಯೂಟಿಯಾಗಿಯೂ ಪಡಕೊಳ್ಳಬಹುದು. ಹಿಂಪಡೆದ ಮೊತ್ತ ಸಂಪೂರ್ಣ ಕರಮುಕ್ತವಾಗಿದೆ. ಭಾಗಶಃ ಹಿಂಪಡೆತ
ಎನ್‌ಪಿಎಸ್ ಟಯರ್-1ರಲ್ಲಿ ತೊಡಗಿಸಿದ ಮೊತ್ತವನ್ನು 60 ವರ್ಷ ತುಂಬುವ ಮೊದಲೂ ಕೂಡಾ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಖಾತೆಗೆ ಕನಿಷ್ಠ 3 ವರ್ಷ ಆಗಿರಬೇಕು. ಅಲ್ಲದೆ ಖಾತೆಯ ಒಟ್ಟು ಅವಧಿಯಲ್ಲಿ ಗರಿಷ್ಟ 3 ಬಾರಿ ಇಂತಹ ಭಾಗಶಃ ಹಿಂಪಡೆತವನ್ನು ಮಾಡಿಕೊಳ್ಳಬಹುದು – ಪ್ರತಿ ಬಾರಿಯೂ ನಿಮ್ಮ ದೇಣಿಗೆಯ ಶೇ.25 ಮೀರದಂತೆ. ಈ ಮೂರು ಹಿಂಪಡೆತಗಳನ್ನು ಖಾತೆಗೆ 3 ವರ್ಷ ತುಂಬಿದ ಬಳಿಕ ಯಾವಾಗ ಬೇಕಾದರೂ ಮಾಡಬಹುದು. ಹಿಂಪಡೆತವು ನಿಮ್ಮ ಒಟ್ಟು ದೇಣಿಗೆಗೆ ಮಾತ್ರವೇ ಸೀಮಿತವಾಗಿದೆ ಹಾಗೂ 2017 ರ ಬಜೆಟ್ಟಿನಲ್ಲಿ ಇಂತಹ ಹಿಂಪಡೆತಗಳ ಮೊತ್ತಕ್ಕೆ ಕರ ವಿನಾಯಿತಿ ಕೂಡಾ ನೀಡಲಾಗಿದೆ. (ಟಯರ್-2 ಖಾತೆಯಿಂದ ಹಿಂಪಡೆತಕ್ಕೆ ಲಾಗಾಯ್ತಿನಿಂದಲೂ ಯಾವುದೇ ನಿರ್ಬಂಧವಿರಲಿಲ್ಲ. ಅದು ಒಂದು ಎಸಿº ಖಾತೆಯಂತೆ ಕೆಲಸ ಮಾಡುತ್ತದೆ) ಭಾಗಶಃ ಹಿಂಪಡೆತದ ಸೌಲಭ್ಯವನ್ನು ಈ ಕೆಳಗಿನ ಕಾರಣಗಳಿಗೆ ಮಾತ್ರ ನೀಡಲಾಗಿದೆ. 1. ಮಕ್ಕಳ/ದತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಮದುವೆಗಾಗಿ
2. ಮೊದಲನೆಯ ಮನೆ/ಫ್ಲ್ಯಾಟಿನ ನಿರ್ಮಾಣ ಅಥವಾ ಖರೀದಿಗೆ – ಸ್ವಂತ ಯಾ ಪತ್ನಿ/ಪತಿಯೊಂದಿಗೆ ಜಂಟಿ ಹೆಸರಿನಲ್ಲಿ. ಈಗಾಗಲೇ ಒಂದು ಸ್ವಂತ/ಜಂಟಿ ಹೆಸರಿನಲ್ಲಿ ಮನೆ/ಫ್ಲ್ಯಾಟ್ ಇದ್ದವರಿಗೆ ಇದು ಅನ್ವಯವಾಗುವುದಿಲ್ಲ.
3. ಕೆಲ ನಿಗದಿತ ರೋಗಗಳ ಚಿಕಿತ್ಸೆಗಾಗಿ – ಸ್ವಂತ, ಗಂಡ/ಹೆಂಡತಿ/ಮಕ್ಕಳು/ ದತ್ತು ಮಕ್ಕಳ/ಅವಲಂಬಿತ ಹೆತ್ತವರು. ಈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಬೇಡುವ ನಿಗದಿತ ರೋಗಗಳ ಪಟ್ಟಿಯಲ್ಲಿ Cancer, Kidney failure (End stage Renal failure). Primary Pulmonary Arterial Hypertension, Multiple Sclerosis, Major Organ Transplant, Coronary Artery Bypass Graft, Aorta Graft Surgery, Heart Valve Surgery, Stroke, Myocardial Infarction, Coma, Total Blindness, Paralysis, Accident of serious/life threatening nature, Any other critical illness of a life & threatening nature. ಎಂಬ ಹೆಸರುಗಳು ಉಲ್ಲೇಖವಾಗಿವೆ. ಅಂದರೆ ಸಾಮಾನ್ಯ ವಾಂತಿ ಪಿತ್ತ ಕಫ ಜ್ವರ ಕೆಮ್ಮು ದಮ್ಮುಗಳ ಹೆಸರಿನಲ್ಲಿ ಹಿಂಪಡೆಯುವುದು ಸಾಧ್ಯವಿಲ್ಲ. 4. ಚಂದಾದಾರರ ಸ್ವಂತದ ಅಭಿವೃದ್ಧಿ/ಕೌಶಲಾಭಿವೃದ್ಧಿ ಸಂಬಂಧಿ ವೆಚ್ಚ ಭರಿಸಲು
5. ಚಂದಾದಾರರ ಸ್ವಂತ ಉದ್ದಿಮೆ/Start Up ಆರಂಭಿಸಲು ತಗಲುವ ವೆಚ್ಚ ಸಂಬಂಧಿ
6. ಡಿಸೆಬಿಲಿಟಿ/ಅಶಕ್ಯತೆ ಸಂಬಂಧಿ ವೈದ್ಯಕೀಯ ಮತ್ತಿತರ ವೆಚ್ಚದ ಸಲುವಾಗಿ
ಕರ ವಿನಾಯಿತಿ
ನ್ಯೂ ಪೆನ್ಶನ್ ಸ್ಕಿಂ ಅಥವಾ ನ್ಯಾಶನಲ್ ಪೆನ್ಶನ್ ಸ್ಕೀಂ ಬಗ್ಗೆ ಸಾಕಷ್ಟು ಜನ ಜಾಗೃತಿ ಈಗಾಗಲೇ ಏರ್ಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರ ಮೇಲೆ ನೀಡಿರುವ ಕರ ವಿನಾಯಿತಿಯೇ ಆಗಿದೆ. ಈ ಯೋಜನೆಯ ಮೇಲೆ ಸಿಗುವ ಹಾಗೂ ಬೇರಾವ ಯೋಜನೆಗೂ ಸಿಗದ ಹೆಚ್ಚುವರಿಯಾದ ರೂ. 50,000ದ ಕರ ವಿನಾಯಿತಿ ಇದರ ಹೆಗ್ಗಳಿಕೆ ಹಾಗೂ ಆ ಕಾರಣಕ್ಕಾಗಿಯೇ ಅನೇಕ ಜನರು, ಮುಖ್ಯವಾಗಿ ಉದ್ಯೋಗಿ ವರ್ಗದವರು ಇದರ ಬಗ್ಗೆ ಆಸಕ್ತಿವಹಿಸುತ್ತಿದ್ದಾರೆ. ಈ ಸ್ಕೀಮಿನಲ್ಲಿ ವಾರ್ಷಿಕ ರೂ. 1.5ಲಕ್ಷದವರೆಗೆ 80ಸಿ ಕರ ಲಾಭ ಸಿಗುತ್ತದೆ. (ಈ ಸೆಕ್ಷನ್ ಅಡಿಯಲ್ಲಿ ಎನ್‌ಪಿಎಸ್ ಅಲ್ಲದೆ ಪಿಪಿಎಫ್, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್, 5-ವಾರ್ಷಿಕ ಎಫ್ ಡಿ, ಟ್ಯೂಷನ್ ಫೀಸ್ ಇತ್ಯಾದಿ ಹಲವಾರು ಯೋಜನೆಗಳೂ ಸೇರಿವೆ). ಅದಲ್ಲದೆ 2015ರಿಂದ ಆರಂಭಗೊಂಡಂತೆ ಇದೇ ಸ್ಕೀಮಿಗೆ ಹೊಸ ಸೆಕ್ಷನ್ 80ಸಿಸಿಡಿ(1ಬಿ) ಅನುಸಾರ ಇನ್ನೊಂದು ರೂ. 50,000 ಮೊತ್ತದ ಪ್ರತ್ಯೇಕ ಕರ ವಿನಾಯಿತಿ ಲಭಿಸುತ್ತದೆ. ಈ ರೂ. 50,000 ಕರ ವಿನಾಯಿತಿ ಇದೊಂದೇ ಸ್ಕೀಮಿಗೆ (ಅಟಲ್ ಪೆನ್ಶನ್‌ಗೆ ಕೂಡಾ) ಸಿಗುತ್ತದಲ್ಲದೆ ಬೇರಾವ ಸ್ಕೀಮಿನಲ್ಲೂ ಲಭ್ಯವಿಲ್ಲ. ಈ ಕಾರಣಕ್ಕೆ ಎನ್‌ಪಿಎಸ್ ಸ್ಕೀಮಿನ ಘನತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಿದೆ. ಇವೆರಡೂ ಅಲ್ಲದೆ ಉದ್ಯೋಗದಾತರು ತಮ್ಮ ದೇಣಿಗೆಯನ್ನು ನಿಮ್ಮ ಖಾತೆಗೆ ನೀಡಿದರೆ ಆ ಮೊತ್ತವೂ ಕೂಡಾ ಇನ್ನೊಂದು ಪ್ರತ್ಯೇಕ ಸೆಕ್ಷನ್ 80 ಸಿಸಿಡಿ(2) ಪ್ರಕಾರ ಕರ ವಿನಾಯಿತಿಗೆ ಒಳಪಡುತ್ತದೆ. ಹಾಗಾಗಿ 3 ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಕರಲಾಭ ಇರುವ ಈ ಯೋಜನೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಓದುಗರು ಈ ಮೂರೂ ಸೆಕ್ಷನ್‌ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅಥೆìçಸಿಕೊಂಡು ವ್ಯವಹರಿಸಬೇಕು. ಇವುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸುಳಿದಾಡುತ್ತಿವೆ. ಉದ್ಯೋಗದಾತರು ನೀಡುವ 80ಸಿಸಿಡಿ(2) ದೇಣಿಗೆಯನ್ನೇ ತಮ್ಮ 80ಸಿಸಿಡಿ(1ಬಿ) ಎಂದು ನಂಬಿ ತಣ್ಣನೆ ಕೂತು ವರ್ಷಾಂತ್ಯದಲ್ಲಿ ಕರಲಾಭ ವಂಚಿತರಾದವರು ಹಲವರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಪಿಎಸ್‌ಗೆ ಹೂಡಿಕೆಯ ಆಧಾರದಲ್ಲಿ ಮೇಲೆ ತಿಳಿಸಿದಂತಹ ಕರವಿನಾಯಿತಿ ಇದೆ. ವಾರ್ಷಿಕ ಪ್ರತಿಫಲದ ಮೇಲೂ ಪ್ರತಿವರ್ಷವೆಂಬಂತೆ ಕರಕಟ್ಟಬೇಕಾಗಿಲ್ಲ. ಆದರೆ 60ರ ವಯಸ್ಸಿನಲ್ಲಿ ಖಾತೆಯಲ್ಲಿ ಶೇಖರವಾದ ಒಟ್ಟು ಮೊತ್ತದ ಶೆ.60 ಹಿಂಪಡೆಯಬಹುದು. ಮೊದಲೇ ಹೇಳಿದಂತೆ, ಸದ್ಯಕ್ಕೆ, ಒಟ್ಟು ಮೊತ್ತದ ಶೇ.40 ಮಾತ್ರ ಕರಮುಕ್ತ ಆದಾಯವಾಗಿದೆ. ಉಳಿದ ಶೇ.20ನ್ನು ಆ ವರ್ಷದ ಆದಾಯಕ್ಕೆ ಸೇರಿಸಿ ಅದರನ್ವಯ ದರದಲ್ಲಿ ಕರ ಕಟ್ಟಬೇಕು. ಹಾಗಾಗಿ ಶೇ.40 ಮಾತ್ರ ಹಿಂಪಡೆದು ಉಳಿದ ಶೇ. 60ಅನ್ನು ಆನ್ಯೂಟಿ ಆಗಿ ಪರಿವರ್ತಿಸಬಹುದು. ಏಕೆಂದರೆ, ಹಿಂಪಡೆಯದೆ ಆನ್ಯೂಟಿಯಾಗಿ ಪರಿವರ್ತಿಸಿಕೊಂಡ ಮೊತ್ತದ ಮೇಲೆ ಆದಾಯ ಕರ ಇರುವುದಿಲ್ಲ. ಆದರೆ, ಆ ಮೊತ್ತದಿಂದ ಆ ಬಳಿಕ ನಿಯಮಿತವಾಗಿ ಬರುವ ಆನ್ಯೂಟಿ ಪೆನ್ಶನ್ ಮೇಲೆ ಆದಾಯ ಕರ ಇರುತ್ತದೆ. ಇಲ್ಲಿ ಹಿಂಪಡೆಯುವ ಮೊತ್ತ ಗರಿಷ್ಠ ಶೇ.60 ಅಂದರೆ ಅದರಿಂದ ಕೆಳಗಿನ ಯಾವ ಮೊತ್ತವನ್ನಾದರೂ ಹಿಂಪಡೆಯಬಹುದು -ಶೇ. 0 ಕೂಡಾ. ಅಂದರೆ ನೂರಕ್ಕೆ ನೂರು ಶತಮಾನ ಆನ್ಯೂಟಿಗೆ ಪರಿವರ್ತನೆ ಮಾಡಿಕೊಳ್ಳಬಹುದು. ಅಲ್ಲದೆ ಈ ಹಿಂಪಡೆತಕ್ಕೆ ಸಮಯಾವಕಾಶವೂ ಇದೆ. ಆನ್ಯೂಟಿ ಆರಂಭ 60 ವರ್ಷದ ಬಳಿಕ 3 ವರ್ಷಗಳೊಳಗೆ ಯಾವಾಗ ಬೇಕಾದರೂ ಆರಂಭಿಸಬಹುದು ಹಾಗೂ ಹಿಂಪಡೆಯುವ ಮೊತ್ತ 60 ಕಳೆದು 10 ವಾರ್ಷಿಕ ಕಂತುಗಳಲ್ಲೂ ಪಡಕೊಳ್ಳ ಬಹುದು. ಈ ಅವಕಾಶವನ್ನು ಆದಾಯ ಕಡಿಮೆ ಇರುವ ಸಮಯ ನೋಡಿಕೊಂಡು ಕರ ಉಳಿತಾಯದ ದೃಷ್ಟಿಯಿಂದ ಬಳಸಿಕೊಳ್ಳಬಹುದು. ಇವು ಸದ್ಯದಲ್ಲಿ ಜಾರಿನಲ್ಲಿರುವ ಕಾನೂನು. ಆದರೆ ಶೀಘ್ರವೇ ಜಾರಿಗೆ ಬರುವಂತೆ ಕೆಲವು ಕ್ಯಾಬಿನೆಟ್ ನಿರ್ಧಾರಗಳು ಇತ್ತೀಚೆಗೆ ಹೊರಬಿದ್ದಿವೆ (ಜಾಮೂನ್ ಬದಲಾವಣೆಗಳು). ಆ ಪ್ರಕಾರ ಹಿಂಪಡೆಯುವ ಶೇ.60 ಮೊತ್ತದ ಮೇಲೆ ಸಂಪೂರ್ಣ ಕರ ವಿನಾಯಿತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಎನ್‌ಪಿಎಸ್ ಯೋಜನೆಯನ್ನು ಇನ್ನಷ್ಟೂ ಅಪ್ಯಾಯಮಾನವಾಗಿ ಸುವುದರಲ್ಲಿ ಸಂಶಯವಿಲ್ಲ.
(ಮುಂದುವರಿಯುವುದು)