ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ಯಲ್ಲಿ ಮಾಹಿತಿಯ ಸ್ವಯಂ ಘೋಷಣೆ. ಇದಕ್ಕೆ ಯಾವುದೇ ದಾಖಲೆಯಾಗಲಿ ಅಥವಾ ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಜನಗಣತಿಗೆ ತಗಲುವ 8,754.23 ಕೋಟಿ ರೂಪಾಯಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಪ್ ಡೇಟ್ ಗೆ ವ್ಯಯವಾಗುವ 3,921 ಕೋಟಿ ರೂಪಾಯಿ ಹಣಕಾಸಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕಾರ ನೀಡಿತ್ತು.
ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಾವ್ಡೇಕರ್, ಜನಗಣತಿ ಮತ್ತು ಎನ್ ಪಿಆರ್ ಜಾರಿ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು. ಈ ಯೋಜನೆಯನ್ನು ಯುಪಿಎ 2010ರಲ್ಲಿ ಅನುಷ್ಠಾನಕ್ಕೆ ತಂದಿತ್ತು. 2010ರಲ್ಲಿಯೇ ಪೌರತ್ವ ಕಾಯ್ದೆ 1955 ಮತ್ತು ಪೌರತ್ವ ನಿಯಮ 2003ರ ಅನ್ವಯ ಎನ್ ಪಿಆರ್ ಗೆ ತಯಾರಿ ನಡೆಸಲಾಗಿತ್ತು ಎಂದರು.
2004ರಲ್ಲಿ ಯುಪಿಎ ಸರ್ಕಾರ ಪೌರತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತಂದಿದ್ದು, ಅದಕ್ಕೆ ಕಲಂ 14ಎ ಅನ್ನು ಸೇರ್ಪಡೆಗೊಳಿಸಿತ್ತು. ಅದರ ಪ್ರಕಾರ ಕೇಂದ್ರ ಸರ್ಕಾರ ಪ್ರತಿಯೊಬ್ಬ ನಾಗರಿಕನ ನೋಂದಣಿ ಕಡ್ಡಾಯವಾಗಿದೆ ಮತ್ತು ರಾಷ್ಟ್ರೀಯ ಗುರುತು ಪತ್ರ ನೀಡುವುದು ಮುಖ್ಯವಾಗಿತ್ತು ಎಂದು ಜಾವ್ಡೇಕರ್ ತಿಳಿಸಿದರು.
ಜನಗಣತಿ ಇಡೀ ದೇಶಾದ್ಯಂತ ನಡೆಯಲಿದೆ. ಆದರೆ ಅಸ್ಸಾಂ ಹೊರತುಪಡಿಸಿ ಎನ್ ಪಿಆರ್ ಕೂಡಾ ಎಲ್ಲಾ ಜನಸಂಖ್ಯೆಯ ವಿವರ ಪಡೆಯಲಿದೆ. ಜಾಗತಿಕವಾಗಿ ಆಡಳಿತಾತ್ಮಕವಾಗಿ ಬೃಹತ್ ಪ್ರಮಾಣದಲ್ಲಿ ನಡೆಯಲಿರುವ ಜನಗಣತಿ ಮತ್ತು ಅಂಕಿ ಅಂಶಗಳ ತಯಾರಿ ಇದಾಗಿದೆ ಎಂದರು.