Advertisement

ನ.1ಕ್ಕೆ “ಆಯುಷ್ಮಾನ್‌ ಭವ’ರಿಲೀಸ್‌ ಎಂದು ಎಲ್ಲಿಯೂ ಹೇಳಿಲ್ಲ: ಯೋಗಿ

10:07 AM Nov 01, 2019 | Lakshmi GovindaRaju |

ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಅಭಿನಯದ “ಆಯುಷ್ಮಾನ್‌ ಭವ’ ಇದೇ ಕನ್ನಡ ರಾಜ್ಯೋತ್ಸವಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿತ್ತು. ಇದನ್ನು ನೋಡಿದ ಪ್ರೇಕ್ಷಕರು ಮತ್ತು ಸಿನಿಮಾ ಮಂದಿ ಕೂಡ “ಆಯುಷ್ಮಾನ್‌ ಭವ’ ನ. 1ಕ್ಕೆ ತೆರೆಗೆ ಬರಲಿದೆ ಎಂದೇ ಭಾವಿಸಿದ್ದರು. ಇದಕ್ಕೆ ಪೂರಕವೆಂಬಂತೆ, ಕಳೆದ ಕೆಲ ದಿನಗಳಿಂದ ಭರದಿಂದ ಚಿತ್ರದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಟ್ರೇಲರ್‌ ಕೂಡಾ ಬಿಡುಗಡೆ ಮಾಡಿತ್ತು.

Advertisement

ಜೊತೆಗೆ ಚಿತ್ರ ತೆರೆಗೆ ತರಲು ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಇನ್ನೇನು ಮೂರು ದಿನಗಳಷ್ಟೇ ಬಾಕಿಯಿದೆ, “ಆಯುಷ್ಮಾನ್‌ಭವ’ ಈ ಶುಕ್ರವಾರ ತೆರೆಗೆ ಬರಬಹುದು ಅಂದುಕೊಳ್ಳುತ್ತಿರುವಾಗಲೇ, ನಿರ್ಮಾಪಕ ಯೋಗಿ ದ್ವಾರಕೀಶ್‌ ಹಠಾತ್ತಾಗಿ ಚಿತ್ರವನ್ನು ಮುಂದೂಡಿದ್ದಾರೆ. ಆದರೆ “ಆಯುಷ್ಮಾನ್‌ ಭವ’ ಬಿಡುಗಡೆಯ ಬಗ್ಗೆ ಯೋಗಿ ಹೇಳ್ಳೋದು ಬೇರೆಯೇ ಇದೆ. “ನಾವು ಕನ್ನಡ ರಾಜ್ಯೋತ್ಸವಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಅಂತ ಹೇಳಿದ್ದೇನೆಯೇ ಹೊರತು, ನ. 1ಕ್ಕೆ ರಿಲೀಸ್‌ ಮಾಡ್ತೀನಿ ಅಂತ ಎಲ್ಲೂ ಹೇಳಿಕೊಂಡಿಲ್ಲ.

ಕನ್ನಡ ರಾಜ್ಯೋತ್ಸವ ಅಂದ್ರೆ, ನವೆಂಬರ್‌ ತಿಂಗಳಿನಲ್ಲಿ ಯಾವಾಗ ಬೇಕಾದ್ರೂ ಆಚರಿಸಬಹುದು. ಹಾಗಾಗಿ ನವೆಂಬರ್‌ ತಿಂಗಳಿನಲ್ಲಿ ನಮ್ಮ ಚಿತ್ರ ಯಾವಾಗ ಬೇಕಾದ್ರೂ ರಿಲೀಸ್‌ ಆಗಬಹುದು. ಸೋಶಿಯಲ್‌ ಮೀಡಿಯಾಗಳು ಮತ್ತೆ ಕೆಲವರು “ಆಯುಷ್ಮಾನ್‌ ಭವ’ ನ. 1ಕ್ಕೆ ರಿಲೀಸ್‌ ಅಂತ, ಅಂತೆ-ಕಂತೆ ಹಬ್ಬಿಸುತ್ತಿದ್ದಾರೆ ಅಷ್ಟೇ’ – ಇದು “ಆಯುಷ್ಮಾನ್‌ಭವ’ ಚಿತ್ರದ ಬಿಡುಗಡೆ ಮುಂದೆ ಹೋಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಚಿತ್ರದ ನಿರ್ಮಾಪಕ ಯೋಗಿ ದ್ವಾರಕೀಶ್‌ ಉತ್ತರವಿದು.

ಶಿವಣ್ಣ ಅಭಿಮಾನಿಗಳು ಸೇರಿದಂತೆ, ಸಾಮಾನ್ಯ ಪ್ರೇಕ್ಷಕರು ಕನ್ನಡ ರಾಜ್ಯೋತ್ಸವ ಎಂದರೆ ನ. 1 ಎಂದು ಭಾವಿಸುತ್ತಾರೆ. ಹಾಗಾಗಿ ಯೋಗಿ ಅವರ ಮಾತಿನಂತೆ “ಆಯುಷ್ಮಾನ್‌ ಭವ’ ನ.1ಕ್ಕೆ ತೆರೆಗೆ ಬರಬಹುದು ಎಂದೇ ಅನೇಕರು ಭಾವಿಸಿರುತ್ತಾರೆ. ಆದರೆ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಯೋಗಿ, ಶಿವಣ್ಣ ಅಭಿಮಾನಿಗಳು ಮತ್ತು ಪ್ರೇಕ್ಷಕರ ಬುದ್ದಿವಂತಿಕೆಯನ್ನೇ ಪರೀಕ್ಷಿಸಿರುವಂತಿದೆ.

ಹಾಗಾದ್ರೆ “ಆಯುಷ್ಮಾನ್‌ ಭವ’ ತೆರೆಗೆ ಬರಲು ತಡವಾಗುತ್ತಿರುವುದಕ್ಕೆ ಕಾರಣವೇನು ಎಂದು ವಿವರಿಸುವ ಯೋಗಿ, “ಸಿನಿಮಾ ಸೆನ್ಸಾರ್‌ ಆಗೋದು ಸ್ವಲ್ಪ ತಡವಾಯ್ತು. ಅದರ ಜೊತೆ ಚಿತ್ರದಲ್ಲಿ ಸಾಕಷ್ಟು ವಿಷ್ಯುವಲ್‌ ಎಫೆಕ್ಟ್ ಇರುವುದರಿಂದ, ಸಿ.ಜಿ ಕೆಲಸಗಳಿಗೆ ತುಂಬಾ ಟೈಮ್‌ ಹಿಡಿಯಿತು. ಇವೆಲ್ಲದಕ್ಕಿಂತ ಹೆಚ್ಚಾಗಿ ಇವತ್ತು ಇಂಡಸ್ಟ್ರಿಯಲ್ಲಿ ತುಂಬ ಕಾಂಪಿಟೇಷನ್‌ ಇದೆ. ಇಷ್ಟು ಟೈಮ್‌ ತೆಗೆದುಕೊಳ್ಳುತ್ತದೆ ಅಂಥ ನಮಗೂ ಗೊತ್ತಿರಲಿಲ್ಲ.

Advertisement

ಹೀಗಿರುವಾಗ, ತರಾತುರಿಯಲ್ಲಿ ನಮ್ಮ ಸಿನಿಮಾವನ್ನ ಯಾಕೆ ರಿಲೀಸ್‌ ಮಾಡಬೇಕು?’ ಅನ್ನೋ ಮರು ಪ್ರಶ್ನೆಯನ್ನು ಮುಂದಿಡುತ್ತಾರೆ. “ಸುಮಾರು 42 ವರ್ಷ ಆದ ಮೇಲೆ ರಾಜಕುಮಾರ್‌ ಫ್ಯಾಮಿಲಿ ಜೊತೆ ಸಿನಿಮಾ ಮಾಡುತ್ತಿದ್ದೇವೆ. ಹಾಗಾಗಿ ತಡವಾದ್ರೂ ಪರವಾಗಿಲ್ಲ, ಆದ್ರೆ ಎಲ್ಲೂ ಕಾಂಪ್ರಮೈಸ್‌ ಮಾಡಿಕೊಂಡು ಸಿನಿಮಾ ಮಾಡಬಾರದು. ಅದಕ್ಕಾಗಿ ಯಾವುದೇ ತರಾತುರಿಯಿಲ್ಲದೆ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ.

ಕೆಲವೊಮ್ಮೆ ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ನಾನೇ ಸಿನಿಮಾ ರಿಲೀಸ್‌ ಯಾವಾಗ ಅಂತ ಅನೌನ್ಸ್‌ ಮಾಡ್ತೀನಿ’ ಎನ್ನುತ್ತಾರೆ ಯೋಗಿ. ಒಟ್ಟಿನಲ್ಲಿ ಯೋಗಿ ದ್ವಾರಕೀಶ್‌ ಅವರ ಮಾತುಗಳ ಆಧಾರದ ಮೇಲೆ ಹೇಳ್ಳೋದಾದ್ರೆ, ಸದ್ಯದ ಮಟ್ಟಿಗಂತೂ “ಆಯುಷ್ಮಾನ್‌ ಭವ’ ಬಿಡುಗಡೆಯ ಬಗ್ಗೆ ಚಿತ್ರತಂಡಕ್ಕೆ ಖಚಿತತೆ, ಸ್ಪಷ್ಟತೆ ಇರವಂತೆ ಕಾಣುತ್ತಿಲ್ಲ.

ಯೋಗಿ ಅವರೇ ಹೇಳುವಂತೆ ನವೆಂಬರ್‌ ತಿಂಗಳು ಸಂಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದರಿಂದ “ಆಯುಷ್ಮಾನ್‌ ಭವ’ ನವೆಂಬರ್‌ ತಿಂಗಳಿನಲ್ಲಿ ಯಾವಾಗ ಬೇಕಾದ್ರೂ ತೆರೆಗೆ ಬರಬಹುದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡಿಸೆಂಬರ್‌ ತಿಂಗಳಿನಲ್ಲೂ ರಾಜ್ಯೋತ್ಸವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುವುದರಿಂದ, ಯೋಗಿ ಅವರ ಮಾತುಗಳನ್ನು ಪ್ರೇಕ್ಷಕ ಪ್ರಭುಗಳು, ಚಿತ್ರರಂಗದ ಮಂದಿ ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು.

Advertisement

Udayavani is now on Telegram. Click here to join our channel and stay updated with the latest news.

Next