ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿವಾಸಕ್ಕೆ ತೆರಳಿ ವಿಶ್ವಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. ಸೇನ್ ಅವರಿಗೆ ಜೆಡ್ ಪ್ಲಸ್ ಭದ್ರತೆಗೂ ದೀದಿ ಆದೇಶಿಸಿದ್ದಾರೆ.
ಅಮರ್ತ್ಯ ಸೇನ್ ಅವರ ತಂದೆ ಅಶುತೋಶ್ ಸೇನ್ ಅವರಿಗೆ ಭೋಗ್ಯಕ್ಕೆ 1.25 ಎಕರೆ ಭೂಮಿ ನೀಡಲಾಗಿತ್ತು. ಆದರೆ ಅಮರ್ತ್ಯ ಸೇನ್ ಅವರು 1.38 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವಿವಿ ಆರೋಪಿಸಿತ್ತು.
ಈ ಕುರಿತು ಮಾತನಾಡಿದ ಸಿಎಂ ಮಮತಾ, “ಅಮರ್ತ್ಯ ಸೇನ್ ವಿರುದ್ಧದ ಒತ್ತುವರಿ ಆರೋಪಗಳು ನಿರಾಧಾರ. ಅವರ ಪ್ರತಿಷ್ಠೆಗೆ ಕುಂದು ತರುವ ಪ್ರಯತ್ನವಾಗಿದೆ. ವಿಶ್ವಭಾರತಿ ವಿವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.