ಲಂಡನ್ : ಭಾರತದಲ್ಲಿ 9,000 ಕೋಟಿ ರೂ.ಬ್ಯಾಂಕ್ ಸಾಲ ಸುಸ್ತಿಗಾರನಾಗಿ ಲಂಡನ್‌ಗೆ ಪಲಾಯನ ಮಾಡಿದ್ದ ಮದ್ಯ ದೊರೆ, ಎನ್‌ಆರ್‌ಐ ಉದ್ಯಮಿ, 61ರ ಹರೆಯದ ವಿಜಯ್ ಮಲ್ಯ ಅವರು ಮೊನ್ನೆ ಭಾನುವಾರ ಭಾರತ – ಪಾಕ್ ನಡುವಿನ ಐಸಿಸಿ ಚಾಂಪ್ಯನ್‌ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಸ್ಟೇಡಿಯಂ ಗೆ ಬಂದು ಭಾರೀ ಸುದ್ದಿಗೆ ಗ್ರಾಸವಾಗಿದ್ದರು. ಆ ಬಳಿಕ ಇದೀಗ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರ ಸಹಾಯಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಲಂಡನ್‌ನಿಂದ ವಿಜಯ್ ಮಲ್ಯ ಅವರನ್ನು ಗಡೀಪಾರು ಮಾಡುವಂತೆ ಭಾರತ ಸರಕಾರ ಬ್ರಿಟನ್ ಸರಕಾರವನ್ನು ಅಧಿಕೃತವಾಗಿ ಕೇಳಿಕೊಂಡಿರುವ ಹೊರತಾಗಿಯೂ, ಮಲ್ಯ ರಾಜಾರೋಷವಾಗಿ ಲಂಡನ್‌ನಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ವಿರಾಟ್ ಕೊಹ್ಲಿ ನಡೆಸಿಕೊಟ್ಟ ಸಹಾಯಾರ್ಥ ಕಾರ್ಯಕ್ರಮದಲ್ಲಿ ಇಡಿಯ ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ ಕೋಚ್ ಅನಿಲ್ ಕುಂಬ್ಳೆ, ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಜಯ ಮಲ್ಯ ಕೂಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಭಾರತ – ಪಾಕ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ತನ್ನನ್ನು ಮಾಧ್ಯಮಗಳು ಭಾರೀ ಹೈಲಟ್ ಮಾಡಿದುದಕ್ಕೆ ಕೆಂಡಾಮಂಡಲರಾಗಿದ್ದ ವಿಜಯ್ ಮಲ್ಯ, ಚಾಂಪ್ಯನ್ಸ್‌ಟ್ರೋಫಿಯಲ್ಲಿ ಭಾರತ ಸೆಣಸುವ ಎಲ್ಲ ಪಂದ್ಯಗಳನ್ನು ತಾನು ವೀಕ್ಷಿಸಲು ಬಂದೇ ಬರುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಯನ್ನು ವರ್ಲ್ಡ್ ಕ್ಲಾಸ್ ಪ್ಲೇಯರ್, ವರ್ಲ್ಡ್ ಕ್ಲಾಸ್ ಕ್ಯಾಪ್ಟನ್ ಮತ್ತು ವರ್ಲ್ಡ್ ಕ್ಲಾಸ್ ಜಂಟಲ್‌ವುನ್ ಎಂದು ವರ್ಣಿಸಿದ ವಿಜಯ್ ಮಲ್ಯ, ಪಾಕ್ ಎದುರಿನ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ ಇಡಿಯ ತಂಡಕ್ಕೆ ಭಾರೀ ಮೆಚ್ಚುಗೆ ಸೂಚಿಸಿದರು.