Advertisement
ಉಡುಪಿ: ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಕೇರಳ, ಕೊಡಗು, ದ.ಕ. ಜಿಲ್ಲೆಯ ಆಂಶಿಕ ಭಾಗದಲ್ಲಿ ವಿಪರೀತ ಹಾನಿಯಾಗಿತ್ತು. ದ.ಕ., ಕೊಡಗು ಜಿಲ್ಲೆಗಿಂತ ಹೆಚ್ಚು ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿಯಿತು. ಕರಾವಳಿ ಭಾಗದಲ್ಲಿ ಈ ಬಾರಿ ಕುಡಿಯುವ ನೀರಿಗೇ ತತ್ವಾರ ಉಂಟಾಗುವ ಸ್ಥಿತಿಯ ಮುನ್ಸೂಚನೆ ಇದೆ.
Related Articles
ಒಂದೇ ಸಮನೆ ಮಳೆ ಬಂದ ಕಾರಣ ನೀರು ಇಂಗದೆ ಸಮುದ್ರಕ್ಕೆ ಹೋದದ್ದು, ಅನಂತರ ನಿರಂತರ ಮಳೆ ಬಾರದೆ ಇದ್ದದ್ದು ನದಿಗಳಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಲು ಕಾರಣ. ಬಾವಿಗಳಲ್ಲಿಯೂ ನೀರು ಇಳಿಯುತ್ತಿದೆ. ಎಲ್ಲೆಲ್ಲಿ ಕಾಂಕ್ರೀಟ್ ರಚನೆಗಳು ಆಗುತ್ತಿವೆಯೋ ಅಲ್ಲಿ ಎಷ್ಟೇ ಮಳೆ ಬಂದರೂ ನೀರು ಇಂಗದು. ಹಿಂದೆ ಮನೆಯಂಗಳಕ್ಕೆ ಸಿಮೆಂಟ್ ಹಾಕುತ್ತಿರಲಿಲ್ಲ. ಇದು ಬಾವಿಯ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗುತ್ತಿತ್ತು. ಈಗ ಮನೆ ಅಂಗಳದಿಂದ ಹಿಡಿದು ಪ್ರತಿ ರಸ್ತೆಗೂ ಕಾಂಕ್ರೀಟ್ ಹಾಕಲಾಗುತ್ತಿದೆ. ವಿಶೇಷವಾಗಿ ಉಡುಪಿಯಂಥ ನಗರ ಪ್ರದೇಶಗಳಲ್ಲಿ 400 ಮಿ.ಮೀ. ಮಳೆ ಬಂದರೂ ಕಾಂಕ್ರೀಟ್ ರಸ್ತೆಯಡಿ ನೀರಿನ ತೇವಾಂಶವಿರದು. ಇದರಿಂದ ನಗರದಲ್ಲಿ ವಿಶೇಷವಾಗಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರ ಸಂಸ್ಥೆಗಳು ನೀರು ಕೊಡುತ್ತವೆ ಎಂದು ಕೆಲವರು ಬಾವಿ ಮುಚ್ಚಿದರು. ಇದೇ ಹೊತ್ತಿಗೆ ಒಳಚರಂಡಿ, ತೆರೆದ ಚರಂಡಿಯಂಥ ಸಮಸ್ಯೆಯಿಂದ ಬಾವಿಯ ನೀರೂ ಹಾಳಾಗಿ ಬಾವಿ ಮುಚ್ಚಲು ಕಾರಣ ಒದಗಿಸಿತು. ಈಗ ಸರಕಾರಕ್ಕೂ ನೀರು ಪೂರೈಸುವುದು ಕಷ್ಟವಾಗುತ್ತಿದೆ.
Advertisement
ಬೇಸಗೆಯಂತೆ ಬಿಸಿಲುಸ್ವರ್ಣಾ ನದಿಯಲ್ಲಿ ನೀರಿನ ಒಳ ಹರಿವು ಜನವರಿವರೆಗೆ ಇರುತ್ತಿತ್ತು. ಈಗಿನ ಸ್ಥಿತಿ ಮುಂದುವರಿದರೆ ಜನವರಿಯಲ್ಲೇ ಕುಡಿಯುವ ನೀರಿನ ಕೊರತೆ ಆದೀತೆಂಬ ಭಯ ಕಾಡುತ್ತಿದೆ. ಒಂದು ವಾರ ದಿಂದ ಎಪ್ರಿಲ್-ಮೇ ತಿಂಗಳಂತೆ ಬಿಸಿಲಿದೆ. ಈ ಕಾರಣದಿಂದಲೂ ನದಿಗಳ ನೀರು ವೇಗವಾಗಿ ಆವಿಯಾಗುತ್ತಿದೆ ಎನ್ನಲಾಗುತ್ತಿದೆ. ಈಗಲೇ ಬಿಸಿಲು ಹೀಗಿದ್ದರೆ ಎಪ್ರಿಲ್ ಕಥೆ ಏನು ಎಂಬುದು ಜನರ ಪ್ರಶ್ನೆ. ಸುಮಾರು 30-40 ವರ್ಷಗಳ ಹಿಂದೆ ಇದೇ ಸಮಯ ಬೆಟ್ಟು ಗದ್ದೆಗಳು ಒಣಗಿದ್ದವು. ಈಗ ಅದಕ್ಕಿಂತ ಭೀಕರ ಸ್ಥಿತಿ ಎದುರಾಗಿದ್ದು, ರಸ್ತೆ ಬದಿಯ ಹುಲ್ಲುಗಳೂ ಒಣಗಿವೆ. ಒಂದೇ ಸಮನೆ ಮಳೆ ಬಂದು ಹೋದುದೇ ಇದಕ್ಕೆ ಕಾರಣ. ಕೆಲವೇ ದಿನಗಳಲ್ಲಿ ಭಾರೀ ಮಳೆ ಬಂದ ಕಾರಣ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗದೆ ಸಮುದ್ರಕ್ಕೆ ಹರಿದುಹೋಯಿತು. ಈ ಪ್ರಾಕೃತಿಕ ಅಸಮತೋಲನಕ್ಕೆ ಪಶ್ಚಿಮ ಘಟ್ಟದ ಬೃಹತ್ತಾದ ಮರಗಳ ಅವ್ಯಾಹತ ನಾಶವೇ ಕಾರಣ. ನಮಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ನೀರು ಸಿಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎನ್.ಎ. ಮಧ್ಯಸ್ಥ. – ಮಟಪಾಡಿ ಕುಮಾರಸ್ವಾಮಿ