Advertisement

ಇನ್ನು  ಮಳೆಗಾಲ: ವಿದ್ಯುತ್‌ ಇರೋದೇ ಡೌಟ್‌!

03:56 PM May 30, 2018 | Team Udayavani |

ಸುಬ್ರಹ್ಮಣ್ಯ: ಮಳೆ ಆರಂಭವಾಗಿದೆ. ಜತೆಗೆ ವಿದ್ಯುತ್‌ ಕೂಡ ಕೈಕೊಡಲಾರಂಭಿಸಿದೆ. ಕೃಷಿಕರಿಗೆ ಬೇಸಗೆಯಲ್ಲಿ ಲೋ ವೋಲ್ಟೇಜ್‌ ಸಮಸ್ಯೆ. ಮಳೆಗಾಲ ಶುರು ವಾದರೆ ವಿದ್ಯುತ್‌ ಪೂರೈಕೆಯೇ ಸರಿಯಾಗಿ ಇರುವುದಿಲ್ಲ. ಗ್ರಾಮೀಣ ಜನರ ಪಾಡು ಹೇಳಿ ಪ್ರಯೋಜನವಿಲ್ಲ ಎಂಬಂತಾಗಿದೆ.

Advertisement

ಮಳೆ ಇನ್ನೂ ತನ್ನ ಪ್ರತಾಪ ತೋರಿಸುವುದು ಬಾಕಿ ಇದೆ. ಅಷ್ಟರಲ್ಲೇ ವಿದ್ಯುತ್‌ ಸಮಸ್ಯೆ ಬಿಗಡಾಯಿಸಿದೆ. ತಾಲೂಕಿನಲ್ಲಿ ಮುಂಗಾರು ಸಿದ್ಧತೆಗಳು ಇನ್ನೂ ಆಗಿಲ್ಲ. ಮೆಸ್ಕಾಂ ಕೂಡ ನಿರೀಕ್ಷಿತ ಮಟ್ಟದಲ್ಲಿ ಮಳೆಗಾಲ ಎದುರಿಸಲು ಸಿದ್ಧವಾಗಿಲ್ಲ. ಇದಕ್ಕೆ ಕಾರಣ, ಲೈನ್‌ಮನ್‌ಗಳ ಕೊರತೆ. ಜಂಗಲ್‌ ಕಟ್ಟಿಂಗ್‌, ಬ್ರೇಕ್‌ ಡೌನ್‌, ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು, ಹಳೆಯ ಲೈನ್‌ಗಳ ಬದಲಾವಣೆ, ತಂತಿಗಳಿಗೆ ತಾಗುತ್ತಿರುವ ಗಿಡ-ಬಳ್ಳಿಗಳ ತೆರವು ಇತ್ಯಾದಿ ಕೆಲಸಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. 

ಸುಳ್ಯ ಸಹಿತ ಪಂಜ, ಜಾಲ್ಸೂರು, ಅರಂತೋಡು, ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಹೀಗೆ ಏಳು ವಿದ್ಯುತ್‌ ಸ್ಥಾವರಗಳು (ಸೆಕ್ಷನ್‌ಗಳು) ತಾಲೂಕಿನಲ್ಲಿವೆ. ಪ್ರತಿ ಸ್ಥಾವರಗಳಿಗೆ ಕನಿಷ್ಠ 25 ಮಂದಿ ಲೈನ್‌ಮನ್‌ಗಳು ಇರಬೇಕೆಂದು ಇಲಾಖೆ ಹೇಳುತ್ತದೆ. ಅದಕ್ಕೆ ಅನುಗುಣವಾಗಿ ಲೈನ್‌ ಮನ್‌ಗಳನ್ನು ನೇಮಿಸಬೇಕು. ಆದರೆ ಏಳು ಶಾಖಾ ಕಚೇರಿಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಲೈನ್‌ಮನ್‌ಗಳಿಲ್ಲ. ಪ್ರತಿ ಸೆಕ್ಷನ್‌ಗೆ ಹತ್ತಕ್ಕಿಂತ ಕಡಿಮೆ ಲೈನ್‌ಮನ್‌ಗಳಿರುವುದು ಮೆಸ್ಕಾಂಗೆ ತಲೆನೋವಾಗಿ ಪರಿಣಮಿಸಿದೆ.

ತಾ| ಕೇಂದ್ರ ಸುಳ್ಯ ಸಹಿತ ದೂರದ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜು ತಂತಿಗಳು ಹಾದುಹೋಗಿವೆ. ಈ ತಂತಿಗಳಲ್ಲಿ ಮಳೆಗಾಲದಲ್ಲಿ ದೋಷ ಕಾಣಿಸಿಕೊಳ್ಳುವುದು ಹೆಚ್ಚು. ಗುಡ್ಡ-ಕಾಡು ಪ್ರದೇಶಗಳಲ್ಲಿ ಲೈನ್‌ ಹಾದು ಹೋಗಿರುವುದು ಇದಕ್ಕೆ ಕಾರಣ. ಮಳೆಗಾಲದಲ್ಲಿ ಬೀಸುವ ಗಾಳಿ-ಮಳೆಗೆ ಮರ ಹಾಗೂ ಮರದ ಕೊಂಬೆಗಳು ವಿದ್ಯುತ್‌ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು, ಅವುಗಳು ತುಂಡಾಗಿ ನೆಲಕ್ಕುರುಳುತ್ತವೆ. ಇದರ ದುರಸ್ತಿ ತತ್‌ಕ್ಷಣಕ್ಕೆ ಬೆರಳೆಣಿಕೆಯ ಮೆಸ್ಕಾಂ ಸಿಬಂದಿಯಿಂದ ಸಾಧ್ಯವಾಗುತ್ತಿಲ್ಲ.

ಕರೆಂಟ್‌ ಕಣ್ಣಾಮುಚ್ಚಾಲೆ
ಇರುವ ಲೈನ್‌ಮನ್‌ಗಳು ಮಳೆ- ಚಳಿಯಲ್ಲಿ ಹರಸಾಹಸ ಪಟ್ಟು ದುರಸ್ತಿಗೆ ಮುಂದಾದರೂ ಯಥಾಸ್ಥಿತಿಗೆ ಬರಲು ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಪ್ರದೇಶಗಳ ಜನತೆ ವಾರಗಟ್ಟಲೆ ಕತ್ತಲೆಯಲ್ಲಿ ದಿನ ದೂಡುವ ಅನಿವಾರ್ಯತೆ ಮುಂಗಾರು ಆರಂಭದ ದಿನಗಳಲ್ಲೇ ಸೃಷ್ಟಿಯಾಗಿದೆ. ಗ್ರಾಮಾಂತರದಲ್ಲಿ ವಿದ್ಯುತ್‌ ಕೈ ಕೊಡುತ್ತಿರುತ್ತದೆ. ದಿನಕ್ಕೆ 20-25 ಬಾರಿ ವಿದ್ಯುತ್‌ ಕಣ್ಣಾಮುಚ್ಚಾಲೆ ಆಗುವುದರಿಂದ ವಿದ್ಯುತ್‌ ಬಳಸಿ ಚಾಲುಗೊಳ್ಳುವ ಯಂತ್ರಗಳು ಕೆಟ್ಟುಹೋಗಿ, ನಷ್ಟ ಉಂಟಾಗುತ್ತದೆ. ವಾರ
ಗಟ್ಟಲೆ ವಿದ್ಯುತ್‌ ಪೂರೈಕೆ ಆಗದೆ ನೀರು ಸಂಪರ್ಕ ಕೂಡ ನಿಂತು ಹೋಗುತ್ತದೆ. 

Advertisement

ವಿದ್ಯುತ್‌ ವಿತರಿಸುವ ಸೆಕ್ಷನ್‌ನಲ್ಲಿ ಇರುವ ಆರೇಳು ಮಂದಿ ಲೈನ್‌ಮನ್‌ಗಳು ಇಡೀ ವ್ಯಾಪ್ತಿಯನ್ನು ನಿರ್ವಹಿಸಲು ಅಸಾಧ್ಯ. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಮೇಲಂತೂ ಅವಘಡ ಸಂಭವಿಸುವ ಸ್ಥಳಗಳಿಗೆ ಧಾವಿಸಲು ಆಗದ ಮಾತು. 20-25 ಸಿಬಂದಿ ಮಾಡುವ ಕೆಲಸಗಳನ್ನು ಏಳೆಂಟು ಮಂದಿ ನಿಭಾಯಿಸುತ್ತೇವೆಂದು ಲೈನ್‌ಮನ್‌ ಗಳು ಹೇಳಿದರೂ ಅದು ಅಸಾಧ್ಯ.

ಹೆಲ್ಪರ್‌ ನೀಡಿದಲ್ಲಿ ಉತ್ತಮ
ಈಗ ಇರುವ ಒಬ್ಬ ಲೈನ್‌ಮನ್‌ಗೆ ಹೆಚ್ಚಿನ ಸಹಾಯಕರನ್ನು ಕೊಟ್ಟು ಕ್ಷೇತ್ರ ಕಾರ್ಯಕ್ಕೆ ನಿಯೋಜಿಸಬೇಕು. ಆದರೆ ಇದು ಈಡೇರುವುದು ಮೆಸ್ಕಾಂನಲ್ಲಿ ಸದ್ಯಕ್ಕೆ ದೂರದ ಮಾತು. ಹಾಗಾಗಿ ಈ ಬಾರಿಯೂ ಮಳೆಗಾಲದಲ್ಲಿ ವಿದ್ಯುತ್‌ ವ್ಯತ್ಯಯ ತಪ್ಪುವುದಿಲ್ಲ ಎಂಬ ಚಿಂತೆ ಗ್ರಾಹಕರದ್ದಾಗಿದೆ. ಕೃಷಿ ಅವಲಂಬಿತ ಸುಳ್ಯ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೇಸಗೆಯಲ್ಲಿ ಲೋ ವೋಲ್ಟೇಜ್‌ ಕಾಟ. ಮಳೆಗಾಲದಲ್ಲಿ ರಸ್ತೆ ಬದಿಯ ಮರಗಳು ವಿದ್ಯುತ್‌ ಕಂಬ, ತಂತಿಗಳ ಮೇಲೆ ಬಿದ್ದು ದೋಷ ಕಾಣಿಸಿಕೊಂಡು ಉಂಟಾಗುವ ವಿದ್ಯುತ್‌ ವ್ಯತ್ಯಯದಿಂದ ಸಮಸ್ಯೆ. ರಾತ್ರಿ ತೋಟಗಳಲ್ಲಿ ಕಾಡು ಪ್ರಾಣಿಗಳ ಉಪಟಳ. ಇದು ವಿದ್ಯುತ್‌ ಲೈನ್‌ ದುರಸ್ತಿಯಲ್ಲಿ ತೊಡಗುವ ಸಿಬಂದಿಯನ್ನೂ ಬಿಟ್ಟಿಲ್ಲ. 

ಹೇಗೆ ಹತೋಟಿಗೆ ತರಬಹುದು?
ಕಂಬಗಳ ಅಂತರ ಕಡಿತಗೊಳಿಸುವುದು. ಕಂಬಗಳ ತಂತಿಗಳು ಜೋತು ಬೀಳದಂತೆ ಎಚ್ಚರವಹಿಸುವುದು, ಜತೆಗೆ ವಿದ್ಯುತ್‌ ಮಾರ್ಗಗಳ ಹಾದಿ ಸುಗಮಗೊಳಿಸುವುದು ಆಗಬೇಕು. ಸ್ಥಳೀಯ ನಾಗರಿಕರೂ ಮರದ ಕೊಂಬೆ ಕತ್ತರಿಸುವುದು. ತಂತಿ, ಕಂಬಗಳ ಮೇಲೆ ಮರ ಬಿದ್ದಾಗ ಸ್ಪಂದಿಸಿ ದುರಸ್ತಿಗೆ ಸಹಕರಿಸಬೇಕು. ಇದರಿಂದ ದುರಸ್ತಿ ಕಾರ್ಯ ವಿಳಂಬ ಆಗುವುದಕ್ಕೆ ಬ್ರೇಕ್‌ ಬೀಳುತ್ತದೆ.

ಸುಧಾರಣೆ ತರುತ್ತೇವೆ
ನಗರ ವ್ಯಾಪ್ತಿಯಲ್ಲಿ ತಂತಿ ಬದಲಾಯಿಸುವ ಕೆಲಸ ನಡೆಯುತ್ತಿದೆ. ಪ್ರತಿ ಸೆಕ್ಷನ್‌ಗಳಲ್ಲಿರುವ ಲೈನ್‌ಮನ್‌ ಗಳನ್ನು ಬಳಸಿಕೊಂಡು ಮುಂದೆ ಎದುರಾಗಬಹುದಾದ ಸಮಸ್ಯೆ ನಿವಾರಣೆ ದೃಷ್ಟಿಯಿಂದ ಗಮನ ಹರಿಸುತ್ತೇವೆ.
 - ಹರೀಶ್‌ ನಾಯ್ಕ, ಸಹಾಯಕ ಕಾರ್ಯ ನಿರ್ವಾಹಕ
     ಎಂಜಿನಿಯರ್‌, ಮೆಸ್ಕಾಂ, ಸುಳ್ಯ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next