ಚಿಕ್ಕಮಗಳೂರು: ಕಾಂಗ್ರೆಸ್ ಸೋಲದ ಕ್ಷೇತ್ರದಲ್ಲಿ ಸೋತಿದೆ, ಗುಜರಾತ್ ನಲ್ಲಿ ಏಳನೇ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ.ಇದು ವಿಶ್ವಾಸಪೂರ್ವಕ ಗೆಲುವು. 158 ಸ್ಥಾನ ಗೆಲ್ಲೋದು ಅಸಾಧಾರಣ ಗೆಲುವು, ವರ್ಣಿಸಲಸಾಧ್ಯ ಗೆಲುವು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುರುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ,’ರಾವಣ ಅಂತ ಕರೆದ ಕಾಂಗ್ರೆಸ್ ಜನ ಉತ್ತರ ನೀಡಿದ್ದಾರೆ. ಖರ್ಗೆ ಅವರಿಗೆ ರಾವಣ ಯಾರು ಎಂದು ಗೊತ್ತಾಗಿದೆ ಎಂದು ಭಾವಿಸುತ್ತೇನೆ” ಎಂದು ತಿರುಗೇಟು ನೀಡಿದರು.
”ಎಎಪಿಯಿಂದ ಮತ ವಿಭಜನೆ ಎಂದು ಹೇಳಿದರು.ನೀವೆಲ್ಲಾ ಒಗ್ಹಟ್ಟಾಗಿ ಬಂದಿದ್ದರೂ ಇದೇ ಫಲಿತಾಂಶ. ಪ್ರಚಾರದಲ್ಲೇ ಲಕ್ಷಾಂತರ ಜನ ಬರುತ್ತಿದ್ದುದನ್ನು ನೋಡಿಯೇ ನಮಗೆ ಗೊತ್ತಾಗಿತ್ತು. 132-135 ಅಂತ ಭಾವಿಸಿದ್ದೆವು. ಅದಕ್ಕೂ ಮೀರಿ ಜನ ಗೆಲ್ಲಿಸಿದ್ದಾರೆ. ಈ ಗೆಲುವಲ್ಲಿ ನನ್ನದೂ ಅಳಿಲು ಸೇವೆ ಇದೆ, ನಾನು ಅವರಿಗೆ ಕೃತಜ್ಞ.ನಾನು ಗುಜರಾತ್ ಚುನಾವಣೆಯಲ್ಲಿ ಸಾಕಷ್ಟು ಕಲಿತಿದ್ದೇನೆ” ಎಂದರು.
ಎಎಪಿ ಲೆಕ್ಕಕ್ಕಿಲ್ಲ
”ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪೂರ್ಣ ಪರಿಣಾಮ ಬೀರುವುದಿಲ್ಲ, ಭಾಗಶಃ ಪರಿಣಾಮ ಬೀರುತ್ತದೆ. ಈ ಫಲಿತಾಂಶ ರಾಜ್ಯದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರೇರಣೆ ನೀಡಿದೆ. ಗೆಲುವಿನಿಂದ ಮೈಮರೆಯಲ್ಲ, ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಹಿಮಾಚಲ ಪ್ರದೇಶದಲ್ಲಿ ಸೋತಿದ್ದೆವೆ ಹಾಗಂತ ಇವಿಎಂ ಅನ್ನು ದೂರುವುದಿಲ್ಲ.ಅದೇ ಇವಿಎಂನಿಂದಲೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಗೆ ಹತಾಶೆ, ಬಿಜೆಪಿಗೆ ಉತ್ಸಾಹ ಬಂದಿದೆ. ಅಲ್ಲಿನ ಗೆಲುವು ಪೂರ್ಣ ಪರಿಣಾಮ ನಮಗೆ ಬೀರುವುದಿಲ್ಲ. ನಮಗೆ ಎಎಪಿ ಲೆಕ್ಕಕ್ಕಿಲ್ಲ ಎಂದು ನಾವು ಮೊದಲೇ ಹೇಳಿದ್ದೆವು” ಎಂದರು.
ಧೈರ್ಯವೂ ಅವರಿಗಿಲ್ಲ
”ನಾವು ನಮ್ಮ ನಾಯಕತ್ವ,ಕಾರ್ಯಕರ್ತರಿಂದ ಎಲೆಕ್ಷನ್ ಮಾಡಿದ್ದೇವೆ. ಅವರು ಕೆಲವೆಡೆ ಗಂಭೀರವಾಗಿ ಬಂದಿಲ್ಲ. ಅವರ ಸೋಲನ್ನ ಅವಲೋಕನ ಮಾಡಿಕೊಳ್ಳುತ್ತಿಲ್ಲ. ಸೋಲಿಗೆ ರಾಹುಲ್ ಕಾರಣ ಎಂದು ಹೇಳುವ ಧೈರ್ಯವೂ ಅವರಿಗಿಲ್ಲ. ರಾವಣ, ಭಸ್ಮಾಸುರ ಎಂಬ ಹೇಳಿಕೆ ದುಬಾರಿ ಆಯ್ತು ಅನ್ನಿಸಿಲ್ಲ” ಎಂದರು.
ಸೋಲು ಎಂದು ಬರೆದಿದ್ದಾನೆ
”ಸತೀಶ್ ಜಾರಕಿಹೊಳಿ ಯಾಕೆ ಮೂರ್ಖರಂತೆ ಮಾತನಾಡುತ್ತಾರೆ. ಹಾಗೇ ಹೇಳಿದರೆ ಸತೀಶ್ ಕಿಕ್ ಔಟ್ ಆಗುತ್ತಾರೆ ಅಂತ ಭಯ ಇರಬೇಕು. ಹಿಂದೂ ವಿರೋಧಿ, ಓಲೈಕೆ ನೀತಿ ಇರೋವರೆಗೂ ಸತೀಶ್ ಜಾರಕಿಹೊಳಿ ಸೋಲುತ್ತಾರೆ. ಹಿಂದೂ ಪದ ಅಶ್ಲೀಲ ಅಂದಾಗಲೇ ದೇವರು ಅವರ ಮೇಲೆ ಸೋಲು ಎಂದು ಬರೆದಿದ್ದಾನೆ.ಈ ಬಾರಿ ಸತೀಶ್ ಸೋತೇ ಸೋಲುತ್ತಾರೆ” ಎಂದರು.