ದೇವನಹಳ್ಳಿ: ಮಳೆ ಇಲ್ಲದೆ ಬರ ಪರಿಸ್ಥಿತಿ ಆವರಿಸಿರುವ ಈ ಸಂದರ್ಭದಲ್ಲೂ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೆ ಕಂಗಾಲು ಆಗಿದ್ದಾರೆ.
ಟೊಮೆಟೋ, ಚೆಂಡು ಹೂ, ಸೇವಂತಿಗೆ ನಂತರ ಬಜ್ಜಿ ಮೆಣಸಿನಕಾಯಿ ಬೆಳೆಗಾರರು ದರ ಕುಸಿತದ ಸಂಕಷ್ಟ ಎದುರಿಸುವಂತೆ ಆಗಿದೆ. ತೋಟಗಳಲ್ಲಿ ರೈತರು ಬಜ್ಜಿ ಮೆಣಸಿನಕಾಯಿಯನ್ನು 8 ರಿಂದ 9 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ 20 ರಿಂದ 25 ರೂ.ಗೆ ಮಾರಾಟ ಆಗುತ್ತಿದೆ.
ವೆಚ್ಚವೂ ಸಿಗುತ್ತಿಲ್ಲ: ಗೊಬ್ಬರ, ಔಷಧಿ, ಕೂಲಿ, ಬೀಜೋಪಚಾರ, ಸಾಗಣೆ ಸೇರಿ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದ ಬೆಳೆಗೆ ಸೂಕ್ತ ದರ ಸಿಗದೆ ಮಾಡಿದ್ದ ಖರ್ಚೂ ಸಿಗದೆ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಇಲ್ಲದೆ ಈಗಾಗಲೇ ಸಂಕಷ್ಟದಲ್ಲಿರುವ ರೈತರು, ಕೊಳವೆ ಬಾವಿಗಳಲ್ಲಿ ಬರುವ ಅಲ್ಪ ಸ್ವಲ್ಪ ನೀರಿನಲ್ಲಿಯೇ ಬೆಳೆ ಬೆಳೆಯುತ್ತಿದ್ದು, ಕೇಳುವವರೇ ಇಲ್ಲದಂತೆ ಆಗಿದೆ. ದೊಡ್ಡಬಳ್ಳಾಪುರ, ಹೊಸಕೋಟೆಯಲ್ಲಿ ಬಜ್ಜಿ ಮೆಣಸಿನಕಾಯಿ ಹೆಚ್ಚು ರೈತರು ಬೆಳೆಯುತ್ತಾರೆ. ದೇವನಹಳ್ಳಿ, ನೆಲಮಂಗಲದಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಚೆಂಡು ಹೂ ರೈತರು: ಚೆಂಡು ಹೂ ಬೆಳೆದ ರೈತರು ಬಂಪರ್ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ನಿರೀಕ್ಷೆ ಸುಳ್ಳಾಯಿತು. ಕಟಾವು ಮಾಡಲು ಬರುವ ಕೂಲಿಗಳಿಗೂ ಕೊಡುವಷ್ಟು ಹಣ ಸಿಗದ ಕಾರಣಕ್ಕೆ ರೈತರು ಹೊಲದಲ್ಲೇ ಬೆಳೆ ಪಾಳು ಬಿಟ್ಟಿದ್ದಾರೆ. ಇನ್ನು ಕೆಲ ರೈತರು ರಸ್ತೆಗಳಲ್ಲೇ ಬೆಳೆ ಚೆಲ್ಲಿ ತಮ್ಮ ಆಕೊ›àಶ ವ್ಯಕ್ತಪಡಿಸಿದ್ದಾರೆ. ಚಂಡು, ಸೇವಂತಿಗೆ ಹೂ ಬೆಳೆದ ರೈತರು ಈಗ ಸಾಲದ ಸುಳಿಗೆ ಸಿಲುಕುವಂತೆ ಆಗಿದೆ.
ಹೊಲದಲ್ಲೇ ಪಾಳು ಬಿಟ್ಟಿದ್ದಾರೆ: ದರ ಕುಸಿತದ ಸರದಿಗೆ ಈಗ ಬಜ್ಜಿ ಮೆಣಸಿನಕಾಯಿ ಸೇರಿದೆ. ತಾಲೂಕಿನ ಬೈಚಾಪುರ ಗ್ರಾಮದ ರಮೇಶ್ ಬಜ್ಜಿ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಆದರೆ, ಬೆಲೆ ಇಲ್ಲದೆ ಕಾಯಿ ಕೇಳಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆಗೆ ಹಾಕಿರುವ ಬಂಡವಾಳವೂ ವಾಪಸ್ ಬರದಂತಾಗಿದೆ. ಇದರಿಂದ ಆತಂಕಗೊಂಡಿರುವ ರೈತರು, ತೋಟದಲ್ಲೇ ಬೆಳೆ ಬಿಟ್ಟಿದ್ದಾರೆ. ಇನ್ನು ಕೆಲವರು ಕಿತ್ತು ಮಾರುಕಟ್ಟೆ ಸಾಗಿಸಲು ಮಾಡುವ ಖರ್ಚು ಸಹ ಹುಟ್ಟುವುದಿಲ್ಲ ಎಂದು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡಿಸಿದ್ದಾರೆ.
ಯಾವ ಬೆಳೆ ಬೆಳೆದರೂ ರೈತರ ಕೈ ಹಿಡಿಯುತ್ತಿಲ್ಲ. ಇದರಿಂದ ಅನ್ನದಾತರು ಕೃಷಿಯಿಂದ ದೂರ ಉಳಿಯುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ನಮ್ಮನ್ನು ಆಳುವ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸಲು ಸಾಧ್ಯ ಎಂದು ತೋಟಗಾರಿಕೆ ಬೆಳೆಗಾರರು ಹೇಳುತ್ತಾರೆ. ಒಂದು ಸಸಿಗೆ ಮೂರು ರೂ. ಆಗುತ್ತದೆ. ಬೆಳೆ ಹಾಕಿದ ಮೇಲೆ ಆದಕ್ಕೆ ರೋಗ ಬಾರದಂತೆ ಔಷಧಿ ಸಿಂಪಡಿಸಬೇಕು. ಬೆಳೆ ರಕ್ಷಣೆ ಮಾಡಿ ಫಸಲನ್ನು ಮರುಕಟ್ಟೆಗೆ ಸಾಗಿಸಿದರೆ ಮಾರುಕಟ್ಟೆಯಲ್ಲಿ ಕೇವಲ 8 ರೂ.ನಿಂದ 9 ರೂ.ಗೆ ಕೇಳುತ್ತಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಬಜ್ಜಿ ಮೆಣಸಿನಕಾಯಿಗೆ ಬೆಲೆ ಇಲ್ಲದೆ ಬೆಳೆಗಾರರಿಗೆ ಸಂಕಷ್ಟ ಸ್ಥಿತಿ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ತೋಟಗಾರಿಕೆ ಬೆಳೆಗಳನ್ನು ನಂಬಿ, ಜೀವನ ಸಾಗಿಸುತ್ತಾ ಬಂದಿದ್ದೇವೆ. ಒಂದು ಬೆಳೆ ಬೆಳೆಯಲು ಲಕ್ಷಾಂತರ ರೂ. ಖರ್ಚು ಬರುತ್ತದೆ. ಕೊನೆಯಲ್ಲಿ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತೆ ಆಗುತ್ತದೆ.
● ಬೈಚಾಪುರ ರಮೇಶ್, ಮೆಣಸಿನಕಾಯಿ ಬೆಳೆಗಾರ
– ಎಸ್.ಮಹೇಶ್