Advertisement

ಇನ್ನೇನಿದ್ದರೂ ಎಲೆಕ್ಟ್ರಿಕ್‌ ವಾಹನಗಳ ಜಮಾನ 

03:03 PM Aug 31, 2018 | |

ಕಡಿಮೆ ಖರ್ಚು, ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್‌ ವಾಹನಗಳು ಗ್ರಾಹಕರ ಮನಗೆಲ್ಲಲಾರಂಭಿಸಿವೆ. ಹೀಗಾಗಿ ಪೈಪೋಟಿಗೆ ಬಿದ್ದಂತೆ ವಿವಿಧ ಕಂಪೆನಿಗಳು ಸ್ಕೂಟರ್‌, ಬೈಕ್‌, ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಪೆಟ್ರೋಲ್‌- ಡೀಸೆಲ್‌ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದು ವಾಹನ ಸವಾರರನ್ನು ಕಂಗೆಡಿಸಿದೆ. ಮುಂದಿನ ದಿನಗಳಲ್ಲಿ ವಾಹನ ಖರೀದಿ ಮಾಡುವುದು ಹೇಗೆ? ಎಂಬ ಚಿಂತೆ ಎಲ್ಲರನ್ನು ಕಾಡುವಾಗ ಎಲೆಕ್ಟ್ರಿಕ್‌ ವಾಹನಗಳನ್ನೇಕೆ ಖರೀದಿ ಮಾಡಬಾರದು ಎಂಬ ಯೋಚನೆ ಮನಸ್ಸಲ್ಲಿ ಹುಟ್ಟದೇ ಇರದು.

Advertisement

ಏಕೆಂದರೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಮಹತ್ವ ಪಡೆಯುತ್ತಿದ್ದು, ನಿಧಾನವಾಗಿ ಮಾರುಕಟ್ಟೆಯತ್ತ ಬರಲು ಆರಂಭಿಸಿದೆ. ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬಂದ ಸಮಯದಲ್ಲಿ ಡೀಸೆಲ್‌, ಪೆಟ್ರೋಲ್‌ ವಾಹನಗಳಿಗೆ ಹೋಲಿಸಿದರೆ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ಸರಕಾರದಿಂದ ಇದಕ್ಕೆ ಪ್ರೋತ್ಸಾಹ ಸಿಕ್ಕಿರುವ ಹಿನ್ನೆಲೆಯಲ್ಲಿ ನಿಧಾನವಾಗಿ ಇದು ಜನಪ್ರಿಯತೆ ಪಡೆಯಲಾರಂಭಿಸಿದೆ.

ಎಲೆಕ್ಟ್ರಿಕ್‌ ವಾಹನಗಳನ್ನು ಬಳಕೆ ಮಾಡುವುದರಿಂದ ವಾಯುಮಾಲಿನ್ಯ ತಡೆಗಟ್ಟಲು ಸಾಧ್ಯವಿದೆ. ನಗರ ವ್ಯಾಪ್ತಿಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಇದು ಸಹಕಾರಿಯಾಗಲಿದ್ದು, ಪರಿಸರ ಸ್ನೇಹಿಯೂ ಆಗಿದೆ. ಈ ಹಿಂದೆ ಮಾರುತಿ ಸುಜುಕಿ ಸಂಸ್ಥೆಯು ಪರಿಸರ ಸ್ನೇಹಿ ವಾಹನವನ್ನು ರಸ್ತೆಗಿಳಿಸಿತು. ಹೋಂಡಾ ಕಂಪೆನಿಯು 2030ರೊಳಗೆ ಶೇ.75ರಷ್ಟು ಇಕೋ ಫ್ರೆಂಡ್ಲಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಹೇಳಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಕಾರುಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್‌ ಬೈಕ್‌- ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಹೀಂದ್ರಾ ಸಂಸ್ಥೆಯು ದೇಶದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳನ್ನು ಉತ್ಪಾದನೆ ಮಾಡುತ್ತಿರುವ ಏಕೈಕ ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಈಗಾಗಲೇ ಅನೇಕ ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಂದ್ರಾ ಸಂಸ್ಥೆಯು ಸದ್ಯದಲ್ಲಿಯೇ ಮುಜೋ ಎಂಬ ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ ಮಾಡಲಿದ್ದು, ಒಂದು ಬಾರಿ ಬ್ಯಾಟರಿ ಚಾರ್ಜ್‌ ಮಾಡಿದರೆ ಬರೋಬ್ಬರಿ 250 ಕಿ.ಮೀ. ಮೈಲೇಜ್‌ ನೀಡುವ ಬೈಕ್‌ ಇದಾಗಲಿದೆ.

ಚಾರ್ಜ್‌ ಮಾಡಿ ವಾಹನ ಚಲಾಯಿಸಿ
ಪೆಟ್ರೋಲ್‌ ಮತ್ತು ಡೀಸೆಲ್‌ ಬಳಕೆಯ ವಾಹನಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್‌ ವಾಹನಗಳ ನಿರ್ವಹಣೆ ಕಷ್ಟಕರವಲ್ಲ. ಒಂದು ಬಾರಿ ಬ್ಯಾಟರಿ ಚಾರ್ಜ್‌ ಮಾಡಿದರೆ ಸಾಕು. ಶಬ್ದ ಮಾಲಿನ್ಯ ಮಾಡದ ಕಾರಣ ವಾಹನದ ಶಬ್ದ ಕೂಡ ಕಡಿಮೆ ಇರುತ್ತದೆ. ಕೋಡಾ ಸೆಡಾನ್‌ ಕಾರುಗಳಿಗೆ ಸುಮಾರು ಆರು ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ 193 ಕಿ.ಮೀ. ಚಲಾಯಿಸಬಹುದು. ರೆನಾಲ್ಟ್ ಫ್ಲೂಯೆನ್ಸ್‌ ಮಾದರಿಯ ಕಾರು 6- 8 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ 161 ಕಿ.ಮೀ. ಚಲಾಯಿಸಬಹುದು. ಹ್ಯುಂಡಾಯ್‌ ನ್ಲೂಆನ್‌ ಕಾರನ್ನು 6 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ 140 ಕಿ.ಮೀ. ಸಂಚರಿಸಲು ಸಾಧ್ಯವಿದೆ.

Advertisement

ಅದೇ ರೀತಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿವೆ. ಅದಕ್ಕೆಂದು ಸ್ಪರ್ಧಾತ್ಮಕ ಬೆಲೆಗಳನ್ನು ಕಂಪೆನಿಗಳು ನೀಡುತ್ತಿದ್ದು, ಹೀರೋ ಮೋಟಾರು ಕಂಪೆನಿಯು 2017ರಲ್ಲಿ 19,990ಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತ್ತು. ಹತ್ತಿರದ ಪ್ರದೇಶಗಳಿಗೆ ಹೋಗಲು ಇದು ಉಪಕಾರಿಯಾಗಿದ್ದು, 8 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ 65 ಕಿ.ಮೀ. ಚಲಿಸುತ್ತದೆ.

ಬೈಕ್‌-ಸ್ಕೂಟರ್‌ಗೆ ಬೆಲೆ ಜಾಸ್ತಿ
ಮಾಮೂಲಿ ಸ್ಕೂಟರ್‌-ಬೈಕ್‌ಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಬೆಲೆ ತುಸು ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ಹೀರೋ ಎಲೆಕ್ಟ್ರಿಕ್‌ ಕ್ರಜ್‌ ಎಲ್‌ಐ ಸ್ಕೂಟರ್‌ ಗೆ 54,502 ರೂ., ಒಕಿನಾವ ರಿಡ್ಜ್ ಸ್ಕೂಟರ್‌ ಗೆ 42,400 ರೂ., ಹೀರೋ ಒಪ್ಟಿಮಾ ಪ್ಲಸ್‌-35,690ರೂ., ಯೋ ಎಲೆಕ್ಟ್ರಾನ್‌ ಇಆರ್‌-36,937 ರೂ., ಹೀರೋ ಎಲೆಕ್ಟ್ರಿಕ್‌ ಫೋಟಾನ್‌- 46,151 ರೂ., ಆಥರ್‌ 450- 1,24,000 ರೂ., ಟಾರ್ಕ್‌ ಟಿ6ಎಕ್ಸ್‌ -1,25,000 ರೂ.ಗಳನ್ನು ಹೊಂದಿದೆ.

ಪ್ರತ್ಯೇಕ ನೀತಿ ಅಗತ್ಯ
ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಬಳಕೆ ಮಾಡುವ ಸಲುವಾಗಿ ರಾಜ್ಯ ಸರಕಾರ ಪ್ರತ್ಯೇಕವಾದ ನೀತಿಯನ್ನು ಮಾಡಬೇಕಿದೆ. ವಿವಿಧ ದೇಶಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳನ್ನು ಹೆಚ್ಚಾಗಿ ಉಪಯೋಗ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ಇದರ ಬಳಕೆ ಕಡಿಮೆ. 

ರಸ್ತೆಗಿಳಿಯಲಿದೆ ರಾಯಲ್‌ ಎನ್‌ ಫೀಲ್ಡ್ ಎಲೆಕ್ಟ್ರಿಕ್‌ ಬೈಕ್‌
ದೇಶದ ಪ್ರತಿಷ್ಠಿತ ಬುಲೆಟ್‌ ಸಂಸ್ಥೆಯಾದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನ್ನು ಪರಿಸರ ಸ್ನೇಹಿಯಾಗಿ ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಲಾಗುತ್ತಿದೆ. ರಾಯಲ್‌ ಎನ್‌ ಫೀಲ್ಡ್‌ ಯುಕೆ ಟೆಕ್ನಾಲಜಿ ಸೆಂಟರ್‌ ಹಾಗೂ ಚೆನ್ನೈ  ತಂಡಗಳು ಒಟ್ಟಾಗಿ ಹೊಸ ಇಂಜಿನ್‌ ತಯಾರಿಕೆಯಲ್ಲಿ ತೊಡಗಿದೆ. 2020ರ ವೇಳೆಗೆ ಎಲೆಕ್ಟ್ರಿಕಲ್‌ ಬೈಕ್‌ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next