ಕೋಲ್ಕತ: “”ದಿ ಡೈರಿ ಆಫ್ ವೆಸ್ಟ್ ಬೆಂಗಾಲ್” ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರಾ ಅವರಿಗೆ ಕೋಲ್ಕತ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದು, ಮೇ 30ರಂದು ಅಮೆರ್ಸ್ಡ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. “ಉದ್ದೇಶಪೂರ್ವಕವಾಗಿ ಪಶ್ಚಿಮ ಬಂಗಾಳದ ಹೆಸರನ್ನು ಹಾಳುಮಾಡುವ ಪ್ರಯತ್ನ ಸಿನಿಮಾದ ಟ್ರೇಲರ್‌ನಲ್ಲಿ ಕಂಡುಬಂದಿದೆ’ ಎಂದು ಆರೋಪಿಸಿ ಮೇ 11ರಂದು ಲಿಖೀತ ದೂರು ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಈ ವಿಚಾರವಾಗಿ ಪ್ರಾಥಮಿಕ ತನಿಖೆ ನಡೆದಿದ್ದು, ಸಿನಿಮಾದ ನಿರ್ದೇಶಕರನ್ನು ವಿಚಾರಣೆಗೆ ಒಳಪಡಿಸಲು ಸಮಂಜಸವಾದ ಪುರಾವೆಗಳು ಇವೆ.
ಹಾಗಾಗಿ ನೋಟಿಸ್ ನೀಡಲಾಗಿದ್ದು, ಮೇ 30ರಂದು ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಾಮೂಹಿಕ ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿದ್ದು, ಹಿಂದೂಗಳು ವಲಸೆ ಹೋಗುತ್ತಿದ್ದಾರೆ. ಪಶ್ಚಿಮ ಬಂಗಾಳವು ಭಾರತದ ಹೊಸ ಕಾಶ್ಮೀರ ಆಗುತ್ತಿದೆ ಎಂದು ಟ್ರೇಲರ್‌ನಲ್ಲಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ “ದಿ ಕೇರಳ ಸ್ಟೋರಿ’ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಗಿತ್ತು. ಚಿತ್ರತಂಡ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ನಿಷೇಧ ತೆರವುಗೊಂಡಿತು. ಈಗ ಒಂದು ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಬಿಡುಗಡೆಯಾಗಿದೆ. ಉತ್ತಮ ಪ್ರದರ್ಶನವನ್ನೂ ಕಾಣುತ್ತಿದೆ.