Advertisement

GNCT ತಿದ್ದುಪಡಿ ಜಾರಿ; ದೆಹಲಿಗೆ ಇನ್ನು ಕೇಜ್ರಿವಾಲ್ ಬದಲು ಲೆಫ್ಟಿನೆಂಟ್ ಗವರ್ನರ್ ಬಾಸ್!

12:52 PM Apr 28, 2021 | Team Udayavani |

ನವದೆಹಲಿ: ದೆಹಲಿ ಕೇಂದ್ರಾಡಳಿತ ಪ್ರದೇಶದ ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ ರಾಷ್ಟ್ರೀಯ ರಾಜಧಾನಿ ದೆಹಲಿ ಸರಕಾರ (ತಿದ್ದುಪಡಿ) ಮಸೂದೆ, 2021 ಅಥವಾ ದೆಹಲಿಯ ಎನ್ ಸಿಟಿ (ತಿದ್ದುಪಡಿ) ಮಸೂದೆ 2021ರ ಅನ್ವಯ ಕೇಂದ್ರ ಸರಕಾರ ಮಂಗಳವಾರ(ಏ.27) ಅಧಿಸೂಚನೆ ಹೊರಡಿಸಿದ್ದು, ಇದೀಗ ದೆಹಲಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಸುಪ್ರೀಂ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Advertisement

ಇದನ್ನೂ ಓದಿ:ಹಿತ್ತಿಲಿನಲ್ಲಿಯೇ ಸಾವಯವ ಗೊಬ್ಬರ ತಯಾರಿಸುವುದು ಹೇಗೆ ?

ರಾಷ್ಟ್ರೀಯ ರಾಜಧಾನಿ ದೆಹಲಿ ಸರಕಾರ (ತಿದ್ದುಪಡಿ) ಮಸೂದೆ, 2021 ಅಥವಾ ದೆಹಲಿಯ ಎನ್ ಸಿಟಿ (ತಿದ್ದುಪಡಿ) ಮಸೂದೆ 2021ರ ಅನ್ವಯ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 27ರಿಂದಲೇ ಇದು ಜಾರಿಗೆ ಬರಲಿದ್ದು, ಇನ್ನು ದೆಹಲಿ ಅಂದರೆ ಲೆಫ್ಟಿನೆಂಟ್ ಗವರ್ನರ್ ಎಂದೇ ಅರ್ಥ ಎಂಬುದಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ದೆಹಲಿಯಲ್ಲಿ ಇನ್ನು ಕೇಂದ್ರದ ಪ್ರತಿನಿಧಿಯಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಾರ್ಯನಿರ್ವಹಿಸಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗಿಂತ ಹೆಚ್ಚಿನ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರದ್ದಾಗಿದೆ ಎಂದು ವರದಿ ವಿವರಿಸಿದೆ.

ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಮಸೂದೆ 2021ಕ್ಕೆ ಲೋಕಸಭೆಯಲ್ಲಿ ಮಾರ್ಚ್ 22ರಂದು ಅಂಗೀಕಾರ ದೊರಕಿದ್ದು, ಮಾರ್ಚ್ 24ರಂದು ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತ್ತು. ಈ ತಿದ್ದುಪಡಿ ಮಸೂದೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಭಾರತೀಯ ಜನತಾ ಪಕ್ಷದ ಪ್ರಹಾರವಾಗಿದೆ ಎಂದು ಆರೋಪಿಸಿದ್ದರು.

Advertisement

ಇದನ್ನೂ ಓದಿ:ಕೊಡಗು: ಮನೆಗೆ ನುಗ್ಗಿ ದರೋಡೆ ಮಾಡಿ, ಮಹಿಳೆ ಕೊಲೆಗೆ ಯತ್ನಿಸಿದ ಖದೀಮರು

ಏತನ್ಮಧ್ಯೆ ಕೇಂದ್ರ ಸರ್ಕಾರ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ಇದು ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆದ ಅಧಿಕಾರ ವ್ಯಾಪ್ತಿಯ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ 2018ರ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ ಕಾಯಿದೆ, 1991
ಪ್ರಸ್ತುತ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ದೆಹಲಿ ರಾಷ್ಟ್ರೀಯ ರಾಜಧಾನಿ ಸರ್ಕಾರ ಕಾಯಿದೆ, 1991 ಗೆ ತಂದಿರುವ ತಿದ್ದುಪಡಿಯಾಗಿದೆ. ಸಂವಿಧಾನದ 69ನೇ ತಿದ್ದುಪಡಿಯ ಮೂಲಕ ವಿಧಿ 239 ಎಎ ಮತ್ತು 239 ಬಿಬಿ ವಿಧಿಯನ್ನು ಪರಿಚಯಿಸಲಾಯಿತು. ಈ ಕಾಯ್ದೆಯು ದೆಹಲಿಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್‌ ಗೆ ಇರುವ ಅಧಿಕಾರಗಳನ್ನು ವಿವರಿಸುತ್ತದೆ. ಮುಖ್ಯವಾಗಿ, ಇತರೆ ರಾಜ್ಯಗಳಿಗಿಂತ ಭಿನ್ನವಾಗಿ, ದೆಹಲಿಯ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಅಧಿಕಾರವನ್ನು ಇಲ್ಲಿ ಲೆಫ್ಟಿನೆಂಟ್ ಗವರ್ನರ್ ಹೊಂದಿರುತ್ತಾರೆ.

ಮಸೂದೆಯ ನಿಬಂಧನೆಗಳು ಹೇಗಿವೆ, ಏನಿವೆ..?

*‘ಸರ್ಕಾರ’ ಎಂದರೆ ‘ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ)’: ದೆಹಲಿ ಶಾಸಕಾಂಗವು ಜಾರಿಗೊಳಿಸಬೇಕಾದ ಯಾವುದೇ ಕಾನೂನಿನಲ್ಲಿ ‘ಸರ್ಕಾರ’ ಎಂಬ ಪದ ಉಲ್ಲೇಖಗೊಂಡರೆ ಅದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೆ ಸಮವಾಗಿರುತ್ತದೆ. ಇದರರ್ಥ, ದೆಹಲಿ ಸರ್ಕಾರ ಏನೇ ಜಾರಿಗೊಳಿಸಬೇಕಾದರೂ ಎಲ್‌ಜಿಯ ಅನುಮತಿ ಕಡ್ಡಾಯವಾಗಿರುತ್ತದೆ.

*ಎಲ್-ಜಿಯ ವಿವೇಚನಾ ಅಧಿಕಾರವನ್ನು ವಿಸ್ತರಿಸುವುದು: ದೆಹಲಿಯ ಶಾಸಕಾಂಗವು ಕಾನೂನುಗಳನ್ನು ಮಾಡಲು ಅಧಿಕಾರ ಹೊಂದಿರುವ ಎಲ್ಲಾ ವಿಷಯಗಳಲ್ಲಿಯೂ ಎಲ್ಜಿಗೆ ವಿವೇಚನಾಧಿಕಾರವನ್ನು ನೀಡುತ್ತದೆ.

*ಎಲ್-ಜಿ ಕಡ್ಡಾಯವಾಗಿ ತನ್ನ ನಿರ್ಧಾರ ಪ್ರಕಟಿಸಬೇಕು: ಮಂತ್ರಿ ಮಂಡಳಿ (ಅಥವಾ ದೆಹಲಿ ಕ್ಯಾಬಿನೆಟ್) ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು ಎಲ್‌ಜಿಗೆ ಅವರ ಅಭಿಪ್ರಾಯವನ್ನು ನೀಡಲು “ಅಗತ್ಯವಾಗಿ ಒಂದು ಅವಕಾಶವನ್ನು ನೀಡಲಾಗಿದೆ” ಎಂದು ಈ ಕಾಯ್ದೆ ಖಚಿತಪಡಿಸುತ್ತದೆ.

*ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ: ಈ ತಿದ್ದುಪಡಿಯು ರಾಜಧಾನಿ ದೆಹಲಿಯ ದೈನಂದಿನ ವಿಷಯಗಳಿಗೆ ಸಂಬಂಧಿಸಿದಂತೆ ಅಥವಾ ಮಂತ್ರಿಮಂಡಲದ ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ಶಾಸಕಾಂಗವು ಯಾವುದೇ ನಿಯಮಗಳನ್ನು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next