ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದ ಭೋರ್ಗರೆತವನ್ನು ಇನ್ಮುಂದೆ ಪ್ರವಾಸಿಗರು ಮತ್ತಷ್ಟು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಜೋಗ ಜಲಪಾತದ ಬಳಿ “ಜಿಪ್‌ಲೈನ್’ ಅಳವಡಿಸಲು ಜೋಗ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಅಂದುಕೊಂಡಂತೆ ಈ ಕಾಮಗಾರಿ ನಡೆದರೆ ಜೋಗದ ಜಲವೈಭವ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಲಿದೆ.
ಮಳೆಗಾಲದಲ್ಲಿ ಶರಾವತಿ ನದಿ ಗೇರುಸೊಪ್ಪದ ಬಳಿ 829 ಅಡಿ ಆಳಕ್ಕೆ ಧುಮ್ಮಿಕ್ಕುತ್ತದೆ. ಜೋಗ ಅಥವಾ ಗೇರುಸೊಪ್ಪ ಜಲಪಾತ ಎಂದು ಕರೆಯಲ್ಪ ಡುವ ಇಲ್ಲಿ ನೀರು ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಲ್ಲಿ ಧುಮ್ಮಿಕ್ಕು ತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮುಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಬಾರಿ ಚಿಮ್ಮುತ್ತ ಧುಮುಕುವ ರೋರರ್, ಬಳಕುತ್ತಾ ಜಾರುವ ರಾಣಿ, ರಭಸ ವಾಗಿ ಚಿಮ್ಮುವ ರಾಕೆಟ್ ಇವುಗಳನ್ನು ನೋಡುವುದೇ ಒಂದು ಆನಂದ. ಸದ್ಯ ಈ ಜಲಪಾತವನ್ನು ದೂರದಿಂದ ವೀಕ್ಷಿಸಬಹುದಾಗಿದ್ದು, “ಜಿಪ್‌ಲೈನ್’ ಆದಲ್ಲಿ ತೀರಾ ಹತ್ತಿರದಿಂದ ನೀರು ಬೀಳುವುದನ್ನು ನೋಡಬಹುದಾಗಿದೆ.
ಹೇಗಿರುತ್ತೆ ಜಿಪ್‌ಲೈನ್?: ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಸ್ಟೀಲ್ ವೈರ್‌ಗಳನ್ನು ಎಳೆಯಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಈ ವೈರ್‌ಗೆ ಕಟ್ಟಿ ತಗ್ಗು ಪ್ರದೇಶಕ್ಕೆ ಬಿಡಲಾಗುತ್ತದೆ. ಜೋಕಾಲಿ ರೀತಿಯಲ್ಲಿರುವ ವೈರ್ ಮೂಲಕ ಕೆಳಗೆ ಹೋಗುತ್ತ ಪ್ರವಾಸಿಗ, ಅಕ್ಕಪಕ್ಕದ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಜೋಗ ಜಲಪಾತದ ಸಾವಿರ ಅಡಿ ಎತ್ತರದಿಂದ (ಕೆಪಿಸಿ ಐಬಿ) ಎದುರಿನ ಯಾತ್ರಿನಿವಾಸದವರೆಗೂ ಈ ವೈರ್‌ಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಈ ವೈರ್‌ಗಳ ಮೂಲಕ ಒಬ್ಬರ ನಂತರ, ಒಬ್ಬರನ್ನು ಕೆಳಗೆ ಬಿಡಬಹುದು. ಇದು ಒಂದು ರೀತಿಯ ಸಾಹಸ ಕ್ರೀಡೆಯ ಅನುಭವ ನೀಡಲಿದೆ. ಇದನ್ನು ಅಳವಡಿಸುವ ಮೂಲಕ ಪ್ರವಾಸೋದ್ಯಮ ಇಲಾಖೆ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಇದೆ. ಈ ಕಾಮಗಾರಿಯಿಂದ ಜೋಗದ ಸೌಂದರ್ಯಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಆಗಸ್ಟ್‌ನಿಂದ ಸೆಪ್ಟೆಂಬರ್ ತಿಂಗಳ ಅವ ಧಿಯಲ್ಲಿ ಬಹುತೇಕ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತದೆ. ಹೆಚ್ಚುವರಿ ನೀರನ್ನು ಶರಾವತಿ ನದಿಗೆ ಬಿಟ್ಟ ಮೇಲೆ ಜೋಗದ ವೈಭವ ಮರುಕಳಿಸುತ್ತದೆ. ಜಲಾಶಯ ದಿಂದ ನೀರು ಬಿಡದಿದ್ದರೂ ಮಳೆ ಜೋರಿದ್ದರೆ ಜಲಪಾತ ಮೈದುಂಬುತ್ತದೆ. ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಸಹಜವಾಗಿ ಹೆಚ್ಚಲಿದೆ. ಶನಿವಾರ ಮತ್ತು ಭಾನುವಾರ ಅಂದಾಜು 60ರಿಂದ 70 ಸಾವಿರ ಜನ ಇಲ್ಲಿಗೆ ಆಗಮಿಸುತ್ತಾರೆ. ಸಾಲು, ಸಾಲು ರಜೆ ಇದ್ದಾಗ ಲಕ್ಷ, ಲಕ್ಷ ಜನ ಬಂದ ಉದಾಹರಣೆಗಳೂ ಇವೆ. ಈ ಹೊಸ ಯೋಜನೆ ಕಾರ್ಯಗತವಾದಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
60 ಲಕ್ಷ ರೂಪಾಯಿ ವೆಚ್ಚ: ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಜಿಪ್‌ಲೈನ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಒಟ್ಟು 60 ಲಕ್ಷ ರೂ.ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಳೆ ಕಡಿಮೆಯಾದ ನಂತರ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಡಿಸೆಂಬರ್ ಒಳಗೆ ಮುಕ್ತಾಯವಾಗಬಹುದೆಂದು ಅಂದಾಜಿಸಲಾಗಿದೆ. ಯೋಜನೆಯ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
“ಜಿಪ್‌ಲೈನ್’ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು. ಸಾಕಷ್ಟು ಅಭಿವೃದ್ಧಿ ಯೋಜನೆಗಳು ಇವೆ. ಜೋಗ ಅಭಿವೃದ್ಧಿ ಪ್ರಾ ಧಿಕಾರದಿಂದ ಒಂದೊಂದೇ ಯೋಜನೆಗಳನ್ನು ಕೈಗೊಳ್ಳಲಾಗುವುದು.
-ಹನುಮನಾಯ್ಕ್, ಡಿಡಿ, ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ
* ಶರತ್ ಭದ್ರಾವತಿ