Advertisement

ಆಧಾರ್ ಕಾರ್ಡ್ ಅಡವಿಟ್ಟು ಈರುಳ್ಳಿ ಖರೀದಿಸಿ ; ಇಲ್ಲಿದೆ ಆಕರ್ಷಕ ಈರುಳ್ಳಿ ಸಾಲ ಮೇಳ!

10:03 AM Dec 02, 2019 | Hari Prasad |

ವಾರಣಾಸಿ: ದೇಶದೆಲ್ಲೆಡೆ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವಂತೆ ಇದರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಜನಾಕ್ರೋಶವೂ ಹೆಚ್ಚಾಗುತ್ತಿದೆ.

Advertisement

ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿಯ ದುಬಾರಿ ಬೆಲೆಗೆ ಸಂಬಂಧಿಸಿದ ಅಣಕು ವಿಡಿಯೋಗಳು, ಕಾರ್ಟೂನ್ ಗಳೂ ಸಹ ವೈರಲ್ ರೀತಿಯಲ್ಲಿ ಹರಿದಾಡುತ್ತಿದೆ. ಪ್ರತಿಪಕ್ಷಗಳು ವಿಭಿನ್ನ ರೀತಿಯಲ್ಲಿ ಈರುಳ್ಳಿ ಬೆಲೆಯನ್ನು ಖಂಡಿಸಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿವೆ.

ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರತಿಭಟನಾಕಾರರು ಈರುಳ್ಳಿ ಖರೀದಿಸಲು ಅನುಕೂಲವಾಗುವಂತೆ ಗ್ರಾಹಕರಿಗೆ ಸಾಲ ನೀಡುವ ಮೂಲಕ ಬಿಜೆಪಿ ಸರಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಆದರೆ ಈ ಸಾಲಕ್ಕೆ ಇರುವ ಒಂದು ಶರತ್ತೇನೆಂದರೆ ಸಾಲ ಪಡೆದುಕೊಳ್ಳುವವರು ತಮ್ಮ ಆಧಾರ್ ಕಾರ್ಡನ್ನು ಅಡವಿರಿಸಬೇಕು.

ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರಕಾರ ವಿಫಲವಾಗುತ್ತಿರುವುದನ್ನು ಖಂಡಿಸಿ ನಾವು ಈ ರೀತಿಯಾಗಿ ವಿನೂತನ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಆಧಾರ್ ಕಾರ್ಡ್ ಅಥವಾ ಬೆಳ್ಳಿಯ ಆಭರಣಗಳನ್ನು ಅಡವಿರಿಸಿಕೊಂಡು ನಾವಿಲ್ಲಿ ಈರುಳ್ಳಿಯನ್ನು ನೀಡುತ್ತಿದ್ದೇವೆ ಎಂದೂ ಸಹ ಅವರು ಹೇಳಿದ್ದಾರೆ. ಕೆಲವೊಂದು ಅಂಗಡಿಗಳಲ್ಲಿ ಈರುಳ್ಳಿಯನ್ನು ಲಾಕರ್ ಗಳಲ್ಲಿ ಇರಿಸುವ ಪರಿಸ್ಥಿತಿ ತಲೆದೋರಿದೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next