Advertisement
ರಾಜ್ಯದಲ್ಲಿ ಸಂಖ್ಯಾಬಲದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬಹುಮತ ಇತ್ತು. ಅನರ್ಹರ ರಾಜೀನಾಮೆ ಕಾರಣ ದಿಂದ ತಾಂತ್ರಿಕವಾಗಿ ಬಹುಮತ ಪಡೆದಿರುವ, ಆದರೆ ವಿಧಾನಸಭೆ ಒಟ್ಟಾರೆ ಶಾಸಕರ ಸಂಖ್ಯೆ ಪರಿಗಣಿಸಿದರೆ ಅಲ್ಪಮತೀಯ ಬಿಜೆಪಿ ಸರ್ಕಾರಕ್ಕೆ ಚುನಾವಣಾ ಆಯೋಗ ಒಂದರ್ಥದಲ್ಲಿ ಅಗ್ನಿ ಪರೀಕ್ಷೆ ಒಡ್ಡಿದೆ. ಅಂದರೆ, 15 ಅನರ್ಹರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಕನಿಷ್ಠ 7 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕಾದ ಒತ್ತಡ ಬಿಜೆಪಿಗಿದೆ.
Related Articles
Advertisement
ಅನರ್ಹರನ್ನು ಸಂಪ್ರೀತಿಗೊಳಿಸಲು, ಅವರ ಸಂಬಂಧಿಗಳಿಗೆ/ ಸ್ನೇಹಿತರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಅವಕಾಶಗಳಿರಬಹುದು. ಅಥವಾ ಮದ್ರಾಸ್ ಹೈಕೋರ್ಟ್ ತೀರ್ಪಿನಂತೆ ಅನರ್ಹತೆಗೆ ತಡೆ ನೀಡಿ ಚುನಾವಣೆಗೆ ಸ್ವತಹ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಅಷ್ಟೇನು ಸುಲಭದ ಮಾತಲ್ಲ. ಹಾಗಂತ ಅದು ಸಾಧುವೂ ಅಲ್ಲ.
ಇತ್ತ ಅಧಿಕಾರ ಕಳೆದುಕೊಂಡು ಕೈಕೈ ಹೊಸೆಯುತ್ತಿರುವ ಕಾಂಗ್ರೆಸ್- ಜೆಡಿಎಸ್ ಮಿತ್ರರು ಮತ್ತು ಮೈತ್ರಿ ಪತನಕ್ಕೆ ಪರೋಕ್ಷವಾಗಿ ಕಾರಣರಾಗಿ ಒಳಗೊಳಗೇ ಸಂತಸ ಪಡುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಲ ಧುರೀಣರು ಈಗ ಯಾವ ರಾಜಕೀಯ ನಡೆಗೆ ಮುಖಮಾಡುತ್ತಾರೆ ಎಂಬುದು ಚರ್ಚಿಸಬೇಕಾದ ವಿಷಯ. ಅನರ್ಹರ ಕ್ಷೇತ್ರಗಳಲ್ಲಿ ಅನರ್ಹರು ಅಥವಾ ಅವರ ಕಡೆಯವರ ಸೋಲಿಗೆ ಖಂಡಿತಾ ಜೆಡಿಎಸ್ ವರಿಷ್ಠರು ಟೊಂಕ ಕಟ್ಟಿ ನಿಲ್ಲಲಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದಲ್ಲಿ? ಎಲ್ಲಕ್ಕಿಂತಲೂ ಪ್ರಮುಖವಾಗಿ ಮೈತ್ರಿ ಪತನಕ್ಕೆ ಕಾರಣರೆಂಬ ಆರೋಪ ಹೊತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಈಗ ಪ್ರಮುಖವಾಗಿ ಮತದಾರನ ಚರ್ಚೆಗೆ ಬರಲಿದೆ. ಒಳಗೊಳಗಿಂದಲೇ ಅನರ್ಹರತ್ತ ಸಹಕರಿಸುತ್ತಾರೆಯೇ ಅಥವಾ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತಾರೆಯೇ ಎನ್ನುವುದು ಇಲ್ಲಿ ಮುಖ್ಯ ಅಂಶ.
ಹಾಗಾಗಿ ಸಿದ್ದರಾಮಯ್ಯ ಅವರ ಮಟ್ಟಿಗೆ ಹೇಳುವುದಾದರೆ, ಅವರ ರಾಜಕೀಯ ಭವಿಷ್ಯವೂ ಇಲ್ಲಿ ಪರೀಕ್ಷೆಗೆ ಒಳಪಡಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲಲು ತಮ್ಮ ಅಭ್ಯರ್ಥಿಗಳ ಪರವಾಗಿ ನಿಜವಾಗಿ ಕೆಲಸಮಾಡಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಯಾಕೆಂದರೆ ಅನರ್ಹರಲ್ಲಿ ಅನೇಕರು ಅವರ ಸಮೀಪವರ್ತಿಗಳಾಗಿದ್ದವರೇ. ಹೆಚ್ಚಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲರಾಗಿ ಇರಲು ಕಾರಣರಾದವರು ಆ ಅನರ್ಹರೇ.
ಆದರೆ, ಇಲ್ಲಿ ಪ್ರಮುಖ ಅಂಶವಾದರೆ ಮತದಾರನ ತೀರ್ಮಾನ. ಮತದಾರನ ಕಾರಣಕ್ಕಾಗಿಯೇ ರಾಜ್ಯ ರಾಜಕೀಯದಲ್ಲಿ ಅತಂತ್ರ ರಾಜಕೀಯ ಕಾಣಿಸಿಕೊಂಡಿರುವುದು. ಹಾಗಾಗಿಯೇ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಘಟಿಸುತ್ತಿರುವುದು. ಇಲ್ಲಿ ನಿಜವಾದ ಅಗ್ನಿ ಪರೀಕ್ಷೆ ಮತದಾರನ ಮೇಲೆ ಆಗಲಿದೆ. ಆತ ನೀಡುವ ತೀರ್ಮಾನ, ಮತ್ತಷ್ಟು ಅತಂತ್ರ ರಾಜಕೀಯಕ್ಕೆ ಕಾರಣವಾಗುತ್ತದೋ ಅಥವಾ ರಾಜಕೀಯ ಪಕ್ಷಗಳಿಗೆ ಹೊಸ ಪಾಠವನ್ನು ಕಲಿಸುತ್ತದೋ ಎಂಬುದನ್ನು ಈ ಉಪ ಚುನಾವಣೆ ದಾಖಲಿಸಲಿದೆ.
* ನವೀನ್ ಅಮ್ಮೆಂಬಳ