ದಾವಣಗೆರೆ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಪದವೀಧರರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ನ. 6 ಕೊನೆಯ ದಿನವಾಗಿದ್ದು, ಅರ್ಹರು ಅಗತ್ಯ ದಾಖಲಾತಿ ಒದಗಿಸಿ, ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದ್ದಾರೆ.
ಸೋಮವಾರ, ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತೆ ಸಂಬಂಧಿ ಸಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಪದವೀಧರರ ಕ್ಷೇತ್ರದ ಚುನಾವಣೆಯ ವಿಶೇಷವೆಂದರೆ ಪ್ರತಿ ಚುನಾವಣೆಯಲ್ಲಿ ಪದವೀಧರರು ನೋಂದಾಯಿಸಿಕೊಳ್ಳಬೇಕು.
ಹಿಂದಿನ ಚುನಾವಣೆಯಲ್ಲಿ ನೋಂದಾಯಿಸಿಕೊಂಡಿದ್ದರೆ ಅದು ಈ ಬಾರಿಯ ಚುನಾವಣೆಗೆ ಅನ್ವಯಿಸುವುದಿಲ್ಲ. ಹಾಗಾಗಿ ನವೆಂಬರ್ 6ರ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದರು. ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರುಗಳನ್ನು ಅ.1ರಿಂದ ನೋಂದಣಿ ಮಾಡಲಾಗುತ್ತಿದೆ. ಪದವೀಧರರು ನಮೂನೆ-18 ಅರ್ಜಿ ಭರ್ತಿ ಮಾಡಿ ಸಲ್ಲಿಸಲು ನ.6 ಅಂತಿಮ ದಿನವಾಗಿರುತ್ತದೆ. ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಕರಡು ಪಟ್ಟಿಯನ್ನು ನ. 19 ಹಾಗೂ ಅಂತಿಮ ಮತದಾರರ ಪರಿಷ್ಕರಣಾ ಪಟ್ಟಿಯನ್ನು ಡಿ. 30ರಂದು ಪ್ರಕಟಿಸಲಾಗುವುದು ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲೂಕುಗಳು ಒಳಪಡಲಿದ್ದು, ಮತದಾರರ ಪಟ್ಟಿ ಸಿದ್ಧತೆಗೆ ಸಂಬಂಧಿ ಸಿದಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೆ 1-11-2019ಕ್ಕಿಂತ ಮೂರು ವರ್ಷದ ಹಿಂದೆ ಪದವೀಧರರಾಗಿರಬೇಕು. ಪದವಿ ಪೂರೈಸಿದ ಬಗ್ಗೆ ದೃಢೀಕೃತ ಅಂಕಪಟ್ಟಿ, ಸರ್ಕಾರಿ ನೌಕರರಾಗಿದ್ದಲ್ಲಿ ಕಚೇರಿಯ ಪತ್ರಾಂಕಿತ ಅಧಿಕಾರಿಯಿಂದ ಮೂರನೇ ಅನುಸೂಚಿ ನಮೂನೆಯನ್ನು ದೃಢೀಕರಿಸಿದ ಪತ್ರ ಹಾಗೂ ಸ್ಥಳೀಯ ನಿವಾಸಿ ಬಗ್ಗೆ ದಾಖಲಾತಿ ಪತ್ರ ಸಲ್ಲಿಸಬೇಕು. ನಮೂನೆ 18 ಅರ್ಜಿಯನ್ನು ಭರ್ತಿಮಾಡಿ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲೂಕು ಕಚೇರಿಗೆ ಹಾಗೂ ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವವರು ಮಹಾನಗರಪಾಲಿಕೆಯಲ್ಲಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಮುಖಂಡರ ದೂರು: ಸಭೆಯಲ್ಲಿದ್ದ ಬಿಜೆಪಿಯ ಪ್ರಭು ಹಾಗೂ ಬಿಎಸ್‌ಪಿಯ ಎಚ್. ಮಲ್ಲೇಶ್, ಬಿಎಲ್‌ಓ ಗಳು ಮನೆ ಮನೆ ಭೇಟಿ ನೀಡಿ, ಮತದಾರರ ಪಟ್ಟಿ ಸಮರ್ಪಕವಾಗಿ ಪರಿಶೀಲನೆ ನಡೆಸುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಧಿಕಾರಿಗಳು ಪ್ರತಿಕ್ರಿಯಿಸಿ, ಬಿಎಲ್‌ಓಗಳು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಬೇಕು ಹಾಗೂ ಮತದಾರರ ಪಟ್ಟಿಗೆ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ವಿತರಿಸಬೇಕೆಂದು ಸೂಚಿಸಿದರು.
ಜಿ.ಪಂ. ಸಿಇಓ ಪದ್ಮ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಿಡಿಪಿಯು ನಿರಂಜನ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಪಾಲಿಕೆಯ ಗದಿಗೇಶ್, ಇತರೆ ಅಧಿ ಕಾರಿಗಳು ಸಭೆಯಲ್ಲಿದ್ದರು.