Advertisement

ಕಾದಂಬರಿಗಳು ವಾಸ್ತವದ ಗಡಿ ದಾಟುತ್ತಿವೆ

06:36 AM Mar 05, 2019 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಾದಂಬರಿಗಳು ಕೂಡ ವಾಸ್ತವದ ಗಡಿರೇಖೆಯನ್ನು ದಾಟುತ್ತಿವೆ ಎಂದು ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು. ಕನ್ನಡ ಜನಶಕ್ತಿ ಕೇಂದ್ರ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಸುರೇಶ ಪಾಟೀಲ ಅವರ “ಸಂಭವ’ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಾದಂಬರಿಗೆ ಅದರದ್ದೇ ಆದ ಒಂದು ಚೌಕಟ್ಟಿರುತ್ತದೆ.

Advertisement

ಆದರೆ ಇತ್ತೀಚಿನ ದಿನಗಳಲ್ಲಿ ಆ ಗಡಿರೇಖೆಯನ್ನು ಮೀರಿ ರಚನೆಯಾಗುತ್ತಿದ್ದು, ಕಾದಂಬರಿಗಳು ಯಾವಾಗಲೂ ಹೊಸ ಅನುಭವವನ್ನು ನೀಡಬೇಕು ಎಂದು ಹೇಳಿದರು. ಲೇಖಕನ ನಿಜವಾದ ಉದ್ದೇಶ ಶೋಧನೆಯಾಗಿರುತ್ತದೆ. ಸಂಭವ ಕಾದಂಬರಿಯಲ್ಲೂ ಶೋಧನೆಯನ್ನು ಕಾಣಬಹುದಾಗಿದೆ.

ಈಗಾಗಲೇ ಕಾದಂಬರಿ ಲೋಕಕ್ಕೆ ಹೆಜ್ಜೆಯಿರಿಸಿರುವ ಡಾ.ಸುರೇಶ ಪಾಟೀಲ ಅವರು, ಉತ್ತಮ ಕಾದಂಬರಿಗಳನ್ನು ರಚಿಸಿದ್ದು, ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿರುವ ಅವರಿಂದ ಮತ್ತಷ್ಟು ಸೊಗಸಾದ ಕಾದಂಬರಿಗಳು ಹೊರಬರಲಿ ಎಂದು ಆಶಿಸಿದರು.

ಚಿತ್ರ ನಿರ್ದೇಶಕ ಟಿ.ಎಸ್‌.ನಾಗಭರಣ ಮಾತನಾಡಿ, ಇತಿಹಾಸವನ್ನು ತಿರುಚಿ ಬರೆಯಲಾಗಿದೆ. ಹೀಗಾಗಿ, ಇತಿಹಾಸದ ಮರು ವ್ಯಾಖ್ಯಾನವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬರೆಯುವ ಮನಸ್ಸುಗಳು ಕೂಡ ಕಡಿಮೆಯಾಗಿದ್ದು, ಎಡಬಲದ ಮಾರ್ಗದಲ್ಲೇ ಸಿಲುಕಿಕೊಂಡಿದ್ದೇವೆ. ಈ ಎರಡೂ ಮಾರ್ಗಗಳನ್ನು ಬಿಟ್ಟು ಮಧ್ಯ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರು.

ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ.ಟಿ.ಎನ್‌.ವಾಸುದೇವ ಮೂರ್ತಿ, “ಸಂಭವ’ ಕಾದಂಬರಿಯು ಪುನರ್‌ಜನ್ಮ ಸೇರಿದಂತೆ ಹಲವು ವಿಚಾರಗಳನ್ನು ಕಟ್ಟಿಕೊಡುತ್ತದೆ. ಸಿನಿಮಾ ಮತ್ತು ಸಾಹಿತ್ಯದ ಸಂಬಂಧವನ್ನು ಕೂಡ ಇದರಲ್ಲಿ ಹೇಳಲಾಗಿದೆ ಎಂದು ತಿಳಿಸಿದರು. ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕಾದಂಬರಿಕಾರ ಡಾ.ಸುರೇಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next