ಗ್ರಾಮ್ಯ ಭಾರತ ಇಂದು ಹಲವಾರು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಸೂಕ್ಷ್ಮಗ್ರಹಿಯಾಗಿ ನೋಡಿ ಜೀವನದಲ್ಲಿ ಉಂಟಾಗುವ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಣ್ಣ ಕಾದಂಬರಿಯೇ ಲೇಖಕಿ ಸುಮಂಗಲಾ ಅವರ ಅಗೆದೆಷ್ಟೂ ನಕ್ಷತ್ರ. ಈ ಕಾದಂಬರಿಯೂ ಓದುಗರಿಗೂ ಹತ್ತಿರವಾಗುವ ಭಾವನಾತ್ಮಕ ಸಂದೇಶ ರವಾನಿಸುತ್ತದೆ. ಈ ಕಾದಂಬರಿಯ ಪಾತ್ರಗಳು ತೀಕ್ಷ್ಮಮತಿಯಾಗಿ ತರ್ಕಿಸುತ್ತವೆ. ಹೀಗಾಗಿ ಈ ಕೃತಿಯು ಓದುಗರ ಮೇಲೆ ವಾಸ್ತವ ನಡಿಗೆ ಮಾಡುತ್ತದೆ. ಆಗದರೆ ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮೂರು ಮುಖ್ಯ ಅಂಶಗಳ ಮೇಲೆ ಇಲ್ಲಿ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಲಾಗಿದೆ.
ಅಂಶ 1: ಈ ಕಾದಂಬರಿಯಲ್ಲಿ ಪ್ರಧಾನವಾಗುವ ರೈತ ಬದುಕಿನ ವಾಸ್ತವ ಸ್ಥಿತಿ. ಸಾವಿರಾರು ರೈತರು ಸಾಲಬಾಧೆ ಒತ್ತಡ ನಿಭಾಯಿಸದೇ ಆತ್ಮಹತ್ಯೆಯಲ್ಲಿ ಬಾಳು ಕೊನೆಯಾಗಿಸುವ ಅಂತಿಮ ನಿರ್ಧಾರ ಕೇಳಲು ಎಷ್ಟು ಕಠಿನವಾಗಿರುತ್ತದೋ ಅದಕ್ಕಿಂತ ಕಠಿನವಾಗುವುದು ಆ ರೈತ ಕುಟುಂಬ ಸಾವು ತಂದ ನೋವಿಬಾಧೆಯನ್ನು ಸಹಿಸಿಕೊಂಡು ಕೊರಗುವ ವ್ಯಥೆಯನ್ನು ಕೇಳಿದಾಗ. ಐಟಿ ಕಂಪೆನಿಯ ಕೆಲಸವನ್ನು ಬಿಟ್ಟು ರೈತರ ಮನೆಯಲ್ಲಿ ಕೂತು ಸಮಸ್ಯೆ ಆಲಿಸುವ ನೀತು ಇಲ್ಲಿ ಓದುಗರಿಗೆ ರೈತ ಬಂಧುವಿನ ದುಸ್ಥಿತಿಯನ್ನು ಹೊರ ಜಗತ್ತಿಗೆ ದಾಟಿಸುವ ಸೇತುವೆಯಾಗಿದ್ದಾಳೆ.
ಅಂಶ 2: ಹಳ್ಳಿ ಬದುಕಿನ ವ್ಯಥೆಯನ್ನು ಆಧುನಿಕ ಶೈಲಿಗೆ ಒಗ್ಗಿಕೊಂಡಿರುವ ಜೀವವೊಂದು ಕಿವಿಯಾಗಿಕೊಂಡು ಸಾಗುವುದರ ಬಗೆ. ಕಾದಂಬರಿಯಲ್ಲಿ ಸಂಬಂಧ ಮತ್ತು ಮುಕ್ತವಾದ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವನ್ನು ತೆರೆದಿಟ್ಟು ಬಾಳ್ವೆ ನಡೆಸುವ ಪಾತ್ರಗಳಿದ್ದು,ರೈತರ ಜಲ್ವಂತ ಸಮಸ್ಯೆಯನ್ನು ಹೊರಹಾಕುವ ಒಂದಿಷ್ಟು ಪ್ರಯತ್ನವನ್ನು ಮನದಟ್ಟು ಆಗುವ ರೀತಿಯಲ್ಲಿ ಚಿತ್ರಿತವಾಗಿದೆ.
ಅಂಶ 3: ಪರಿಸ್ಥಿತಿ, ಪಾತ್ರ ಹಾಗೂ ಪರಿಸರಕ್ಕೆ ಅನುಗುಣವಾಗಿ ಬಳಕೆಯಾದ ಭಾಷೆಯಿಂದ ಈ ಕಾದಂಬರಿ ನಮ್ಮ ಮನಕ್ಕೆ ಆತ್ಮೀಯವಾಗುತ್ತದೆ. ಇನ್ನೂ ಒಂದು ಸೊಬಗು ಅಂದ್ರೆ ಧಾರವಾಡ ಕನ್ನಡ , ಮಲೆನಾಡು ಸೀಮೆಯ ಭಾಷೆಯಲ್ಲಿ ಸಾಗುವ ಸಂಭಾಷಣೆಗಳು.ಕಡಿಮೆ ಅವಧಿಯಲ್ಲಿ ಒಂದೊಳ್ಳೆ ಪುಸ್ತಕ ಓದಿ ಮುಗಿಸ್ಬೇಕು ಅನ್ನುವವರ ಸಾಲಿಗೆ ಈ ಕಾದಂಬರಿ ಸೇರುತ್ತದೆ.
ಈ ಕಾದಂಬರಿಯಲ್ಲಿ ನೀಡಲಾದ ಈ ಮೂರು ಅಂಶಗಳೇ ಸಾಕು, ದೇಶದ ರೈತನ ಸ್ಥಿತಿ-ಗತಿ ಸಹಿತ ಹಲವಾರು ಸಮಕಾಲೀನ ಚರ್ಚೆ ಮಾಡುತ್ತದೆ ಎಂಬುದಕ್ಕೆ. ಎಲ್ಲ ಬಗೆಯ ಓದುಗರನ್ನು ಸೆಳೆಯುವ ಕೃತಿ ಇದಾಗಿದೆ.
- ಸುಹಾನ್ ಶೇಕ್