ವಾಷಿಂಗ್ಟನ್: ಅಮೆರಿಕನ್ ಓಪನ್ ಟೆನ್ನಿಸ್ ಕೂಟದ ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸಿದ ವಿಶ್ವದ ನಂಬರ್ 1 ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಫೈನಲ್ ತಲುಪಿದರು. ಸೆಮಿ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿದರು.
ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಕ್ ಅವರು ರೋಜರ್ ಫೆಡರರ್ ಅವರ ಅತೀ ಹೆಚ್ಚು ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ದಾಖಲೆಯನ್ನು ಸರಿಗಟ್ಟಿದರು. ಫೆಡರರ್ ಅವರು 31 ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿದ್ದರೆ, ನೊವಾಕ್ ಜೊಕೊವಿಕ್ ಅವರಿಗಿದು 31 ನೇ ಫೈನಲ್.
ಇದನ್ನೂ ಓದಿ:ಗಣೇಶ ಹಬ್ಬಕ್ಕೆ ವಿಶೇಷ ಹಾಡು ರಿಲೀಸ್ ಮಾಡಿದ ಮಂಗ್ಲಿ
ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಜೊಕೊವಿಕ್ 4-6, 6-2, 6-4, 4-6, 6-2 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಜೊಕೊವಿಕ್ ಒಂಬತ್ತನೇ ಬಾರಿ ಯುಎಸ್ ಓಪನ್ ಫೈನಲ್ ತಲುಪಿದರು.
ರವಿವಾರ ನಡೆಯಲಿರುವ ಫೈನಲ್ ನಲ್ಲಿ ಜೊಕೊವಿಕ್ ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಮುಖಾಮುಖಿಯಾಗಲಿದ್ದಾರೆ. ಮೆಡ್ವೆಡೆವ್ ಅವರು ಸೆಮಿ ಫೈನಲ್ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಅಗರ್-ಅಲಿಯಾಸಿಮೆ ಅವರನ್ನು ಸೋಲಿಸಿ ಫೈನಲ್ ತಲುಪಿದರು.