Advertisement

ಆಸ್ಟ್ರೇಲಿಯನ್‌ ಓಪನ್‌: ಜೊಕೋಗೆ 10ನೇ ಕಿರೀಟ

11:56 PM Jan 29, 2023 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌’ನಲ್ಲಿ ತನಗೆ ಯಾರೂ ಸಾಟಿಯಾಗಲಾರರು ಎಂದು ಸರ್ಬಿಯಾದ ಟೆನಿಸಿಗ ನೊವಾಕ್‌ ಜೊಕೋವಿಕ್‌ 10ನೇ ಸಲ ಸಾಧಿಸಿ ತೋರಿಸಿದ್ದಾರೆ.

Advertisement

ರವಿವಾರ “ರಾಡ್‌ ಲೆವರ್‌ ಅರೇನಾ’ದಲ್ಲಿ ನಡೆದ ಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ ಅಮೋಘ ಪ್ರಭುತ್ವ ಸಾಧಿಸಿದ ಅವರು 6-3, 7-6 (7-4), 7-6 (7-5) ಅಂತರದ ಜಯದೊಂದಿಗೆ 22ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಒಡೆಯನೆನಿಸಿದರು; ರಫೆಲ್‌ ನಡಾಲ್‌ ದಾಖಲೆಯನ್ನು ಸರಿದೂಗಿಸಿದರು.

ಇನ್ನೊಂದೆಡೆ ಸ್ಟೆಫ‌ನಸ್‌ ಸಿಸಿಪಸ್‌ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆಲುವಿನ ಕನಸು ಎರಡನೇ ಸಲ ಜೊಕೋವಿಕ್‌ ಕೈಯಲ್ಲೇ ಕಮರಿ ಹೋಯಿತು. ಇದಕ್ಕೂ ಮುನ್ನ 2021ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲೂ ಅವರು ಜೊಕೋಗೆ ಶರಣಾಗಿದ್ದರು.

ಕಳೆದ ವರ್ಷದ ಬ್ರೇಕ್‌ ಬಳಿಕ ಮತ್ತೆ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಮಹೋನ್ನತ ಪ್ರದರ್ಶನ ನೀಡಿದ ಜೊಕೋವಿಕ್‌ ಹತ್ತಕ್ಕೆ ಹತ್ತೂ ಫೈನಲ್‌ಗ‌ಳಲ್ಲಿ ಚಾಂಪಿಯನ್‌ ಆಗಿ ಮೂಡಿಬಂದದ್ದು ಅಸಾಮಾನ್ಯ ಸಾಧನೆ ಎನಿಸಿದೆ. ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸರ್ಬಿಯನ್‌ ಟೆನಿಸಿಗನೀಗ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ. ಈ ಜಯದೊಂದಿಗೆ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮರಳಿ ಅಗ್ರಸ್ಥಾನ ಅಲಂಕರಿಸಲಿದ್ದಾರೆ.

ಜೊಕೋಗೆ ಗ್ರೀಕ್‌ನ ದೈತ್ಯ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಭಾರೀ ಪ್ರತಿರೋಧ ಒಡ್ಡುವರೆಂದೇ ಭಾವಿಸಲಾಗಿತ್ತು. 5 ಸೆಟ್‌ಗಳ ತನಕ ಹೋರಾಡುವ ಛಾತಿ ಅವರಿಗಿತ್ತು. ಆದರೆ ಜೊಕೋ ಅನುಭವದ ಮುಂದೆ ಸಿಸಿಪಸ್‌ ಆಟ ನಡೆಯಲಿಲ್ಲ. ಮೊದಲ ಸೆಟ್‌ನಲ್ಲಿ ಅವರು ಪ್ರತಿರೋಧವನ್ನೇ ತೋರಲಿಲ್ಲ. ಮುಂದಿನೆರಡು ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ಎಳೆದು ತಂದರೂ ಪ್ರಯೋಜನವಾಗಲಿಲ್ಲ.

Advertisement

ಸತತ 4ನೇ ಪ್ರಶಸ್ತಿ
ಇದು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಜೊಕೋವಿಕ್‌ಗೆ ಒಲಿದ ಸತತ 4ನೇ ಪ್ರಶಸ್ತಿ. 2019ರಿಂದ ಅವರ ಓಟ ಮೊದಲ್ಗೊಂಡಿತ್ತು. ಕಳೆದ ವರ್ಷ “ಕೊರೊನಾ ಲಸಿಕೆ’ ಹಾಕಿಸಿಕೊಳ್ಳದ ಕಾರಣ ಅವರಿಗೆ ಇಲ್ಲಿ ಆಡುವ ಅವಕಾಶ ನೀಡಿರಲಿಲ್ಲ.

ಜೊಕೋವಿಕ್‌ ಅವರ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ಗೆ ಅಗ್ರಸ್ಥಾನ (10). ಅವರ ಗ್ರ್ಯಾನ್‌ಸ್ಲಾಮ್‌ ಅಭಿಯಾನ ಆರಂಭಗೊಂಡದ್ದೇ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಎಂಬುದನ್ನು ಮರೆಯುವಂತಿಲ್ಲ. 2008ರಲ್ಲಿ ಜೊಕೋ ಇಲ್ಲಿ ತಮ್ಮ ಟೆನಿಸ್‌ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್‌ ಜಯಿಸಿದ್ದರು. ಉಳಿದಂತೆ 7 ಸಲ ವಿಂಬಲ್ಡನ್‌, 3 ಸಲ ಯುಎಸ್‌ ಓಪನ್‌, 2 ಸಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದಾರೆ.

ವರ್ಷ ಎದುರಾಳಿ ಅಂತರ
2008 ಜೋ ವಿಲ್‌ಫ್ರೆಡ್‌ ಸೋಂಗ 4-6, 6-4, 6-3, 7-6 (7-2)
2011 ಆ್ಯಂಡಿ ಮರ್ರೆ 6-4, 6-2, 6-3
2012 ರಫೆಲ್‌ ನಡಾಲ್‌ 5-7, 6-4, 6-2, 6-7 (5-7), 7-5
2013 ಆ್ಯಂಡಿ ಮರ್ರೆ 6-7 (2-7), 7-6 (7-3), 6-3, 6-2
2015 ಆ್ಯಂಡಿ ಮರ್ರೆ 7-6 (7-5), 6-7 (4-7), 6-3, 6-0
2016 ಆ್ಯಂಡಿ ಮರ್ರೆ 6-1, 7-5, 7-6 (7-3)
2019 ರಫೆಲ್‌ ನಡಾಲ್‌ 6-3, 6-2, 6-3
2020 ಡೊಮಿನಿಕ್‌ ಥೀಮ್‌ 6-4, 4-6, 2-6, 6-3, 6-4
2021 ಡ್ಯಾನಿಲ್‌ ಮೆಡ್ವೆಡೇವ್‌ 7-5, 6-2, 6-2
2023 ಸ್ಟೆಫ‌ನೆಸ್‌ ಸಿಸಿಪಸ್‌ 6-3, 7-6 (7-4), 7-6 (7-5)

Advertisement

Udayavani is now on Telegram. Click here to join our channel and stay updated with the latest news.

Next