ಪ್ಯಾರಿಸ್: ವಿಶ್ವದ ನಂ. 33 ರ್‍ಯಾಂಕಿಂಗ್‌ನ ಜೆಕ್ ಆಟಗಾರ್ತಿ ಬಾಬೊìರಾ ಕ್ರೆಜಿಕೋವಾ ಫ್ರೆಂಚ್ ಓಪನ್‌ನಲ್ಲಿ ಕನಸಿನ ಓಟ ಮುಂದುವರಿಸಿ 4ನೇ ಸುತ್ತು ತಲುಪಿದ್ದಾರೆ. ಶನಿವಾರದ ಮುಖಾಮುಖೀಯಲ್ಲಿ ಕ್ರೆಜಿಕೋವಾ 6-3, 6-2 ನೇರ ಸೆಟ್‌ಗಳಿಂದ ಎಲಿನಾ ಸ್ವಿಟೋಲಿನಾ ಆಟವನ್ನು ಕೊನೆಗೊಳಿಸಿದರು.
ಇದು ಆವೆಯಂಗಳದಲ್ಲಿ ಕ್ರೆಜಿಕೋವಾ ಸಾಧಿಸಿದ ಸತತ 8ನೇ ಗೆಲುವು. ಇದಕ್ಕೂ ಮೊದಲು ಸ್ಟ್ರಾಸ್‌ಬರ್ಗ್ ಡಬ್ಲ್ಯುಟಿಎ 250 ಕೂಟದ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕ್ರೆಜಿಕೋವಾ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಸವಾಲನ್ನು ಎದುರಿಸಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ, 2018ರ ರನ್ನರ್ ಅಪ್ ಸ್ಟೀಫನ್ಸ್ 18ನೇ ಶ್ರೇಯಾಂಕದ ಕ್ಯಾರೋಲಿನಾ ಮುಖೋವಾ ವಿರುದ್ಧ 6-3, 7-5 ಅಂತರದ ಜಯ ಸಾಧಿಸಿದರು. ಸೋಫಿಯಾ ಕೆನಿನ್ 4-6, 6-1, 6-4ರಿಂದ ಜೆಸ್ಸಿಕಾ ಪೆಗುಲಾ ಅವರಿಗೆ ಸೋಲುಣಿಸಿದರು.
ಜೊಕೋ ನಿರಾಯಾಸ ಜಯ
ಪುರುಷರ ಸಿಂಗಲ್ಸ್‌ನಲ್ಲಿ ನಂ.2 ಆಟಗಾರ ನೊವಾಕ್ ಜೊಕೋವಿಕ್ ಲಿಥುವೇನಿಯಾದ ರಿರ್ಕಾಡಸ್ ಬೆರಂಕಿಸ್ ವಿರುದ್ಧ 6-1, 6-4, 6-1 ಅಂತರದ ನಿರಾಯಾಸದ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು.
ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ಅಮೆರಿಕದ ಬಿಗ್ ಸರ್ವರ್ ಜಾನ್ ಇಸ್ನರ್ ಅವರನ್ನು ಕೂಟದಿಂದ ಹೊರದಬ್ಬಿದರು. ಇವರದು 4 ಸೆಟ್‌ಗಳ ಸೆಣಸಾಟವಾಗಿತ್ತು. ಮೊದಲ ಸೆಟ್ ಕಳೆದುಕೊಂಡ ಬಳಿಕ ಸಿಸಿಪಸ್ ತಿರುಗಿ ಬಿದ್ದರು. ಗೆಲುವಿನ ಅಂತರ 5-7, 6-3, 7-6 (7-3), 6-1. ಇವರ ಮುಂದಿನ ಎದುರಾಳಿ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ. ಅವರು ಅಮೆರಿಕದ ಸ್ಟೀವ್ ಜಾನ್ಸನ್‌ಗೆ 6-4, 6-4, 6-2 ಅಂತರದ ಸೋಲುಣಿಸಿದರು.
ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್, ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್, ಇಟಲಿಯ ಲೊರೆಂಜೊ ಮುಸೆಟ್ಟಿ ಕೂಡ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.