Advertisement

Nov.14- 20: ಅಖಿಲ ಭಾರತ ಸಹಕಾರ ಸಪ್ತಾಹ

11:17 PM Oct 09, 2023 | Team Udayavani |

ಬೆಂಗಳೂರು: ನವೆಂಬರ್‌ 14ರಿಂದ 20 ರ ವರೆಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದ್ದು, 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ಘೋಷವಾಕ್ಯದೊಂದಿಗೆ ಈ ಸಪ್ತಾಹ ನಡೆಯಲಿದೆ.

Advertisement

ಸಹಕಾರ ಸಪ್ತಾಹದ ಕುರಿತು ವಿಕಾಸಸೌಧದಲ್ಲಿ ಸೋಮವಾರ ಜರಗಿದ ಪೂರ್ವಭಾವಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹಾಗೂ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ ಈ ವಿಷಯ ತಿಳಿಸಿದರು.

ರಾಷ್ಟ್ರೀಯ ಸಹಕಾರ ಒಕ್ಕೂಟದ ಮಾರ್ಗದರ್ಶನದಂತೆ ಮಾಜಿ ಪ್ರಧಾನಿ ದಿವಂಗತ ಪಂ.ಜವಾಹರ್‌ಲಾಲ್‌ ನೆಹರೂ ಅವರ ಹುಟ್ಟುಹಬ್ಬದ ದಿನವಾದ ನ.14ರಿಂದ 20ರ ವರೆಗೆ ರಾಷ್ಟ್ರಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ. ಸಪ್ತಾಹದ ಅಂಗವಾಗಿ 7 ದಿನಗಳೂ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

6 ಮಂದಿಗೆ ಸಹಕಾರ ರತ್ನ ಪ್ರಶಸ್ತಿ
ಈ ಬಾರಿ ಹಿಂದಿನಂತೆ ಹತ್ತಾರು ಜನರಿಗೆ ಸಹಕಾರ ರತ್ನ ಪ್ರಶಸ್ತಿಗಳನ್ನು ನೀಡಲಾಗುವುದಿಲ್ಲ. ಬದಲಿಗೆ ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳಿಂದ ತಲಾ ಒಬ್ಬರು ಸಹಕಾರಿ ಗಣ್ಯರು, ಬೆಂಗಳೂರು ನಗರದಿಂದ ಇಬ್ಬರು ಹಾಗೂ ಇಲಾಖೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಓರ್ವ ನಿವೃತ್ತ ಅಧಿಕಾರಿ ಸಹಿತ ಒಟ್ಟು 6 ಮಂದಿಗೆ ಮಾತ್ರ ಸಹಕಾರ ರತ್ನ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ ಎಂದು ವಿವರಿಸಿದರು.

ವಿಜಯಪುರವೋ? ತುಮಕೂರೋ?
ನ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಪ್ತಾಹಕ್ಕೆ ಚಾಲನೆ ನೀಡಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಾಗಿತ್ತು. ಈ ಬಾರಿ ಉದ್ಘಾಟನೆ ಎಲ್ಲಿ ಮಾಡಬೇಕು? ಸಮಾರೋಪ ಎಲ್ಲಿ ಮಾಡಬೇಕು ಎಂಬುದಿನ್ನೂ ಅಂತಿಮಗೊಂಡಿಲ್ಲ. ಜವಳಿ ಹಾಗೂ ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲ್‌ ಅವರ ಕ್ಷೇತ್ರವಾದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಸಚಿವರಾದ ಕೆ.ಎನ್‌.ರಾಜಣ್ಣ, ಡಾ| ಜಿ. ಪರಮೇಶ್ವರ್‌ ಅವರು ಪ್ರತಿನಿಧಿಸುವ ತುಮಕೂರು ಜಿಲ್ಲೆ ಅಥವಾ ಮಂಗಳೂರಿನ ಹೆಸರು ಕೇಳಿಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸ್ಥಳ ನಿಗದಿಪಡಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಮೂರರಲ್ಲಿ ಒಂದೆಡೆ ಉದ್ಘಾಟನೆ, ಮತ್ತೂಂದೆಡೆ ಸಮಾರೋಪ ಸಮಾರೋಪ ನಡೆಸುವ ಚರ್ಚೆಗಳು ನಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next