Advertisement
ನೌವಾರಿ ಸೀರೆ ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಒಂಬತ್ತು ಯಾರ್ಡ್‌ಗಳಷ್ಟು ಉದ್ದದ ಅಂದದ ಸೀರೆಯನ್ನು ಉಡುವ ಶೈಲಿ ಭಾರತದಲ್ಲೇ ವೈಶಿಷ್ಟ್ಯಪೂರ್ಣ. ಧೋತಿಯಂತೆ ಸೀರೆ ಉಡುವ ಇಲ್ಲಿನ ಮಹಿಳೆಯರ ನೌವಾರಿ ಸೀರೆಯನ್ನು ವಿಶೇಷ ರೀತಿಯ ಸೆರಗಿನೊಂದಿಗೆ ಅಂದಗಾಣಿಸುತ್ತಾರೆ. ಈ ತರಹದ ಸೀರೆಗಳಿಗೆ ಲುಗಡ್ (LUGADE) ಎಂದೂ ಕರೆಯಲಾಗುತ್ತದೆ.
ನೌವಾರಿ ಸೀರೆಯೊಂದಿಗೆ ಉಡುವ ಕುಪ್ಪಸವನ್ನು ಆಯಾ ಸಾಂಪ್ರದಾಯಿಕ ನೌವಾರಿ ಸೀರೆಯೊಂದಿಗೆ ಹೊಂದುವಂತೆ ಧರಿಸುತ್ತಾರೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಸೀರೆಗಳ ರಂಗು ಹಸಿರು, ಕೆಂಪು ಹಾಗೂ ಹಳದಿಮಿಶ್ರಿತ ಕೇಸರಿ ಬಣ್ಣಗಳಲ್ಲಿ ಅಧಿಕವಾಗಿ ಕಾಣಸಿಗುತ್ತದೆ.
Related Articles
Advertisement
ಈ ನೌವಾರಿ ಸೀರೆಯನ್ನು ಉಟ್ಟು ತಮಾಶಾ, ಲಾವಣಿ ಮುಂತಾದ ನೃತ್ಯಗಳನ್ನು ಮಾಡುವುದು ಮಹಾರಾಷ್ಟ್ರದ ಮಹಿಳೆಯ ಮತ್ತೂಂದು ವೈಭವ. ಅಂತೆಯೇ ಪೊವಡಾ ಹಾಗೂ ಕೋಲಿ ಎಂಬ ಜಾನಪದ ನೃತ್ಯಗಳು ಅಷ್ಟೇ ವಿಶಿಷ್ಟ. ಮಹಾರಾಷ್ಟ್ರ ರಾಜ್ಯದ ಮಹಿಳೆಯರ ಮದುವೆಯ ಉಡುಗೆ ಹತ್ತುಹಲವು ಬಗೆಗಳನ್ನು ಹೊಂದಿದೆ. ಸಾಂಪ್ರದಾಯಿಕ ಸೀರಗಳಲ್ಲಿಯೇ ವಧುವಿಗೆ ವಿಶಿಷ್ಟ ಆಯ್ಕೆ ಮಾಡಲು ಹಲವು ಬಗೆಯ ಸೀರೆಗಳಿವೆ.
ವಧುವಿನ ವಿಶಿಷ್ಟ ಸೀರೆಯತ್ತ ಒಂದು ನೋಟನೌವಾರಿ ಸಿಲ್ಕ್ ಸೀರೆ ಹೆಚ್ಚಿನ ವಧುಗಳ ಮೆಚ್ಚಿನ ಆಯ್ಕೆ. ಇದು ಜೀವನಪರ್ಯಂತ ಬಾಳಿಕೆ ಬರುವಂಥದ್ದು ! ಇಲ್ಲಿನ ವಧುಗಳು ಮೆಚ್ಚುವ ಇನ್ನೊಂದು ಸಾಂಪ್ರದಾಯಿಕ ಸೀರೆಯೆಂದರೆ ಕೊಲ್ಹಾಪುರಿ ರೇಶ್ಮೆ ಸೀರೆಗಳು. ಇನ್ನೊಂದು ವೈವಿಧ್ಯ ಪೈಠನಿ ರೇಶ್ಮೆ ಸೀರೆ. ವಧುವಿನ ಕೊಲ್ಹಾಪುರಿ ರೇಶ್ಮೆ ಸೀರೆಯು 2-3 ಸಾವಿರ ರೂಪಾಯಿಗಳಿಂದ ಆರಂಭವಾಗಿ 20-40 ಸಾವಿರದವರೆಗೆ ವೈಭವೋಪೇತವಾಗಿ ಆಯ್ಕೆ ಹೊಂದಿದೆ. ಕೊಲ್ಹಾಪುರಿ ರೇಶ್ಮೆ ಸೀರೆಯು ಹುಟ್ಟಿದ್ದು ಕೊಲ್ಹಾಪುರದಲ್ಲಿಯಾದರೂ, ಮಹಾರಾಷ್ಟ್ರದ ಈ ಸೀರೆಯು ಭಾರತದ ಹಲವೆಡೆ ಮಾತ್ರವಲ್ಲ , ವಿಶ್ವದ ಹಲವೆಡೆಯೂ ಪ್ರಸಿದ್ಧಿ ಪಡೆದಿದೆ, ಕೊಲ್ಹಾಪುರಿ ಪಾದರಕ್ಷೆಗಳಂತೆ!
ಈ ಬಗೆಯ ರೇಷ್ಮೆ ಸೀರೆಗಳಲ್ಲಿ ಅಧಿಕ ವರ್ಣಗಳ ಆಯ್ಕೆ ಕಡಿಮೆ. ಸಾಮಾನ್ಯವಾಗಿ ವಧುವು ವರನನ್ನು ಭೇಟಿಯಾಗುವ ಮದುವೆಯ ಮಂಟಪದಲ್ಲಿ ಹಸಿರು ಕೊಲ್ಹಾಪುರಿ ರೇಶ್ಮೆ ಸೀರೆಗೆ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚು. ಮಹಾರಾಷ್ಟ್ರದ ವಧು ತೊಡುವ ಪೈಠನಿ ಸೀರೆ ವೈಭವೋಪೇತವಾಗಿ ಅಲಂಕೃತವಾಗಿರುತ್ತದೆ. ಈ ಸೀರೆ ವಿಶಿಷ್ಟ ಬಗೆಯ ಅಂಚು, ವಿನ್ಯಾಸ ಹೊಂದಿರುತ್ತದೆ. ನಡುನಡುವೆ ಜರತಾರಿ, ಮೋತಿ, ಹರಳುಗಳಿಂದಲೂ ಅಲಂಕೃತವಾಗಿರುತ್ತದೆ. ಐದು ಸಾವಿರದಿಂದ 50-60 ಸಾವಿರ ಬೆಲೆಯ ವಧುವಿನ ಪೈಠನಿ ಸೀರೆಗಳು ಎಲ್ಲೆಡೆ ಲಭ್ಯವಿರುತ್ತವೆ. ಈ ಸೀರೆಗಳ ವಿಶಿಷ್ಟ ತೆಯೆಂದರೆ ಗಾಢ ರಂಗುಗಳ ಆಯ್ಕೆ. ಗಾಢ ನೀಲಿ, ಕೇಸರಿ, ಗುಲಾಲಿ ಹಾಗೂ ನೇರಳೆ ಬಣ್ಣಗಳಿಂದ ಅಲಂಕೃತಗೊಂಡು ವಧುವು ನತ್ತು, ಝುಮಕಾ, ಮಾಂಗ್ ಠೀಕಾ ಹಾಗೂ ಹತ್ತುಹಲವು ಹಾರಗಳೊಂದಿಗೆ ವಿಶೇಷವಾಗಿ ಕಾಣಿಸುತ್ತಾರೆ. ಇಂದು ಮಹಾರಾಷ್ಟ್ರ ರಾಜ್ಯದ ನೌವಾರಿ ವೈವಿಧ್ಯಮಯ ಸೀರೆಗಳು, ಕೊಲ್ಹಾಪುರಿ ರೇಷ್ಮೆ ಸೀರೆಗಳು ಮತ್ತೂಮ್ಮೆ ಮುಂಚಿಗಿಂತ ಹೆಚ್ಚು ಬೇಡಿಕೆ ಮತ್ತು ಜನಪ್ರಿಯತೆ ಪಡೆಯುತ್ತಿವೆ. ಅದರಲ್ಲೂ ಪೈಠನಿ ಸೀರೆಗಳು ಮರಾಠಿ ಹಾಗೂ ಹಿಂದಿಯ “ಬಾಜಿರಾವ್ ಮಸ್ತಾನಿ’ ಮೊದಲಾದ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಂತರ ಭಾರತದ ಎಲ್ಲೆಡೆ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತಿದೆ.
ಸಾಂಪ್ರದಾಯಿಕತೆಯೊಂದಿಗೆ ಆಧುನಿಕತೆಯ ಸಮಕಾಲೀನ ಬದಲಾವಣೆಗಳೊಂದಿಗೆ ಮರಾಠಿ ಮಹಿಳೆಯರ ತೊಡುಗೆ, ಸೀರೆಗಳನ್ನು ತೊಡುವ ಸಂಪ್ರದಾಯವನ್ನು ಇಂದಿಗೂ ಕಾಪಿಡುತ್ತಿವೆ. ಅನುರಾಧಾ ಕಾಮತ್