Advertisement

ವಿರಾಟ್‌ ಕೊಹ್ಲಿಗೆ ಸೆಂಚುರಿ ಮಿಸ್‌

10:32 AM Aug 19, 2018 | |

ನಾಟಿಂಗ್‌ಹ್ಯಾಮ್‌: ಶನಿವಾರ ಇಲ್ಲಿ ಮೊದಲ್ಗೊಂಡ ಇಂಗ್ಲೆಂಡ್‌ ಎದುರಿನ 3ನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಕೇವಲ ಮೂರು ರನ್ನಿನಿಂದ ಶತಕವನ್ನು ತಪ್ಪಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಕೂಡ 81 ರನ್‌ ಗಳಿಸಿ ಶತಕ ವಂಚಿತರಾದರು. ಇವರಿಬ್ಬರ 159 ರನ್‌ ಜತೆಯಾಟದ ನೆರವಿನಿಂದ ಭಾರತ 5 ವಿಕೆಟಿಗೆ 290 ರನ್‌ ಗಳಿಸಿ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.

Advertisement

ಮೊದಲೆರಡು ಟೆಸ್ಟ್‌ ಪಂದ್ಯಗಳನ್ನು ಸೋತ ಆಘಾತ ದಲ್ಲಿದ್ದ ಭಾರತ 3 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಟಾಸ್‌ ಗೆದ್ದ ಇಂಗ್ಲೆಂಡ್‌ ಭಾರತವನ್ನು ಮೊದಲು ಬ್ಯಾಟಿಂಗಿಗೆ ಇಳಿಸಿತು. 

ಧವನ್‌- ರಾಹುಲ್‌ ಭರವಸೆಯ ಆರಂಭ 
ಸರಣಿಯಲ್ಲಿ 3ನೇ ಆರಂಭಿಕ ಜೋಡಿಯಾಗಿ ಕಾಣಿಸಿಕೊಂಡ ಶಿಖರ್‌ ಧವನ್‌-ಕೆ.ಎಲ್‌. ರಾಹುಲ್‌ ತಂಡಕ್ಕೆ ಭರವಸೆಯ ಆರಂಭ ಒದಗಿಸಿದರು. ಪ್ರಸಕ್ತ ಸರಣಿಯಲ್ಲಿ ಮೊದಲ ಬಾರಿಗೆ ಆರಂಭಿಕ ವಿಕೆಟಿಗೆ 50 ಪ್ಲಸ್‌ ರನ್‌ ಒಟ್ಟುಗೂಡಿಸುವ ಮೂಲಕ ಭಾರತ ಆಂಗ್ಲರ ದಾಳಿಗೆ ಸಡ್ಡು ಹೊಡೆಯಿತು. ರಾಹುಲ್‌-ಧವನ್‌ 18.4 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 60 ರನ್‌ ಒಟ್ಟುಗೂಡಿಸಿದರು.

ಆದರೆ ಲಂಚ್‌ ತನಕ ಆರಂಭಿಕ ಜೋಡಿಯೇ ಕ್ರೀಸಿನಲ್ಲಿ ಉಳಿಯಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಮಧ್ಯಮ ವೇಗಿ ಕ್ರಿಸ್‌ ವೋಕ್ಸ್‌ ಐದೇ ರನ್‌ ಅಂತರದಲ್ಲಿ ಇವರಿಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿದರು. 65 ಎಸೆತಗಳಿಂದ 35 ರನ್‌ ಮಾಡಿದ ಧವನ್‌ ಮೊದಲಿಗರಾಗಿ ವಿಕೆಟ್‌ ಒಪ್ಪಿಸಿದರು. ಈ ಕಿರು ಇನ್ನಿಂಗ್ಸ್‌ ವೇಳೆ ಧವನ್‌ 7 ಬೌಂಡರಿ ಬಾರಿಸಿ ಮೆರೆದರು. ಸ್ಕೋರ್‌ 65ಕ್ಕೆ ಏರಿದಾಗ ರಾಹುಲ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. 53 ಎಸೆತ ಎದುರಿಸಿದ ರಾಹುಲ್‌ 4 ಬೌಂಡರಿ ನೆರವಿನಿಂದ 23 ರನ್‌ ಹೊಡೆದಿದ್ದರು.

ಲಂಚ್‌ ಒಳಗಾಗಿ ವೋಕ್ಸ್‌ ಇನ್ನೂ ಒಂದು ಆಘಾತವಿಕ್ಕಿದರು. ಸ್ಕೋರ್‌ 82 ರನ್‌ ಆದಾಗ ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಅವರನ್ನು ರಶೀದ್‌ಗೆ ಕ್ಯಾಚ್‌ ಕೊಡಿಸುವಲ್ಲಿ ಯಶಸ್ವಿಯಾದರು. ಪೂಜಾರ ಗಳಿಕೆ 14 ರನ್‌. 34 ಎಸೆತಗಳ ಈ ಆಟದಲ್ಲಿ 2 ಬೌಂಡರಿ ಸೇರಿತ್ತು. ಭೋಜನ ವಿರಾಮದ ವೇಳೆ ಭಾರತ 3 ವಿಕೆಟಿಗೆ 83 ರನ್‌ ಗಳಿಸಿತ್ತು.

Advertisement

ಕೊಹ್ಲಿ-ರಹಾನೆ ಅಮೋಘ ಬ್ಯಾಟಿಂಗ್‌
ಈ ಸಂದರ್ಭದಲ್ಲಿ ಕ್ರೀಸ್‌ ಆಕ್ರಮಿಸಿಕೊಂಡ ವಿರಾಟ್‌ ಕೊಹ್ಲಿ-ಅಜಿಂಕ್ಯ ರಹಾನೆ ಇಂಗ್ಲೆಂಡ್‌ ಬೌಲಿಂಗ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸತೊಡಗಿದರು; ಜತೆಗೆ ಬಿರುಸಿನ ಬ್ಯಾಟಿಂಗಿಗೂ ಇಳಿದರು. ಪರಿಣಾಮ, ದ್ವಿತೀಯ ಅವಧಿಯಲ್ಲಿ ಭಾರತ ಯಾವುದೇ ವಿಕೆಟ್‌ ಕಳೆದುಕೊಳ್ಳಲಿಲ್ಲ.
 
ಕೊಹ್ಲಿ-ರಹಾನೆ 157 ಎಸೆತಗಳಲ್ಲಿ 4ನೇ ವಿಕೆಟಿಗೆ ಶತಕದ ಜತೆಯಾಟ ಪೂರ್ತಿಗೊಳಿಸಿದರು. ಚಹಾ ವಿರಾಮದ ವೇಳೆ ಭಾರತ ಮೂರೇ ವಿಕೆಟಿಗೆ 189 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ 74 ಎಸೆತಗಳಿಂದ, ರಹಾನೆ 76 ಎಸೆತಗಳಿಂದ ಅರ್ಧ ಶತಕ ಪೂರೈಸಿದರು.ಶತಕದ ನಿರೀಕ್ಷೆಯಲ್ಲಿದ್ದ ವಿರಾಟ್‌ ಕೊಹ್ಲಿ ರಶೀದ್‌ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚಿತ್ತು ಔಟಾದರು.

ರಿಷಬ್‌ ಪಂತ್‌ಗೆ ಟೆಸ್ಟ್‌  ಕ್ಯಾಪ್‌
ನಾಟಿಂಗ್‌ಹ್ಯಾಮ್‌:
ನಿರೀಕ್ಷೆಯಂತೆ ದಿಲ್ಲಿಯ 20ರ ಹರೆಯದ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ನಾಟಿಂಗ್‌ಹ್ಯಾಮ್‌ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಅವರಿಗೆ ಟೀಮ್‌ ಇಂಡಿಯಾ ಕಪ್ತಾನ, ದಿಲ್ಲಿಯವರೇ ಆದ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ಯಾಪ್‌ ನೀಡಿ ತಂಡಕ್ಕೆ ಸ್ವಾಗತಿಸಿದರು. ಪಂತ್‌ ಭಾರತೀಯ ಟೆಸ್ಟ್‌ ಕ್ರಿಕೆಟಿನ 291ನೇ ಆಟಗಾರನಾಗಿದ್ದು, ಫಾರ್ಮ್ನಲ್ಲಿಲ್ಲದ ದಿನೇಶ್‌ ಕಾರ್ತಿಕ್‌ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 

ಸರಣಿಯ ಮೊದಲೆರಡೂ ಟೆಸ್ಟ್‌ಗಳನ್ನು ಸೋತ ಪ್ರವಾಸಿ ಭಾರತ, 3ನೇ ಟೆಸ್ಟ್‌ಗಾಗಿ ಪಂತ್‌ ಸೇರ್ಪಡೆ ಸಹಿತ 3 ಬದಲಾವಣೆ ಮಾಡಿಕೊಂಡಿದೆ. ಆರಂಭಕಾರ ಮುರಳಿ ವಿಜಯ್‌ ಬದಲು ಮರಳಿ ಶಿಖರ್‌ ಧವನ್‌ಗೆ ಅವಕಾಶ ಕಲ್ಪಿಸಲಾಯಿತು. 

ಧವನ್‌ ಅವರನ್ನು ಲಾರ್ಡ್ಸ್‌ ಟೆಸ್ಟ್‌ನಿಂದ ಹೊರಗಿಡಲಾಗಿತ್ತು. ಇದರೊಂದಿಗೆ 3 ಟೆಸ್ಟ್‌ಗಳಲ್ಲಿ ಭಾರತ 3 ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿದಂತಾಯಿತು.

ತಂಡದ ಇನ್ನೊಂದು ಬದಲಾವಣೆ ಬೌಲಿಂಗ್‌ ವಿಭಾಗದಲ್ಲಿ ಸಂಭವಿಸಿದೆ. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಬದಲು ಜಸ್‌ಪ್ರೀತ್‌ ಬುಮ್ರಾ ಆಯ್ಕೆಯಾದರು. ಗಾಯಾಳಾಗಿದ್ದ ಬುಮ್ರಾ ಮೊದಲೆರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದರು.
ಇಂಗ್ಲೆಂಡ್‌ ತಂಡಕ್ಕೆ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮರಳಿದರು. ಇವರಿಗಾಗಿ ಸ್ಯಾಮ್‌ ಕರನ್‌ ಜಾಗ ಬಿಟ್ಟರು.

ಕಪ್ಪು ಪಟ್ಟಿ  ಧರಿಸಿ ಆಡಲಿಳಿದ
ಭಾರತದ ಕ್ರಿಕೆಟಿಗರು

ಕಳೆದ ಬುಧವಾರ ನಿಧನರಾದ ಮಾಜಿ ಕ್ರಿಕೆಟಿಗ ಅಜಿತ್‌ ವಾಡೇಕರ್‌ ಗೌರವಾರ್ಥ 3ನೇ ಟೆಸ್ಟ್‌ ಪಂದ್ಯದ ವೇಳೆ ಭಾರತದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲಿಳಿದರು. ಅಜಿತ್‌ ವಾಡೇಕರ್‌ ಅದೃಷ್ಟಶಾಲಿ ಕಪ್ತಾನನಾಗಿದ್ದು, ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನೆಲದಲ್ಲಿ ಭಾರತಕ್ಕೆ ಮೊದಲ ಟೆಸ್ಟ್‌ ಗೆಲುವನ್ನು ತಂದಿತ್ತ ನಾಯಕನಾಗಿ ಗುರುತಿಸಲ್ಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next