ಹೊಸದಿಲ್ಲಿ : ಕುಖ್ಯಾತ ಕ್ರಿಮಿನಲ್ ಗೀತಾ ಆರೋರ ಅಲಿಯಾಸ್ ಸೋನು ಪುಂಜಬಾನ್ ಳನ್ನು ದಿಲ್ಲಿ ಪೊಲೀಸರು ಆರು ತಿಂಗಳ ಕಾಲ ಬೆನ್ನಟ್ಟಿ ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈಕೆ ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಉನ್ನತ ಮಟ್ಟದ ವೇಶ್ಯಾ ಜಾಲ ನಡೆಸುವ ಮೂಲಕ ಕುಖ್ಯಾತಳಾಗಿದ್ದಳು.
ಕಳೆದ ಶನಿವಾರ ಬಂಧಿಸಲ್ಪಟ್ಟ ಸೋನು ಪುಂಜಬಾನ್ ಳನ್ನು ಎಸಿಪಿ ಸಂದೀಪ್ ಲಾಂಬಾ ನೇತೃತ್ವದ ತಂಡ ಕ್ರೈಮ್ ಬ್ರಾಂಚ್‌ನ ಸೈಬರ್ ಸೆಲ್ ಕಚೇರಿಯಲ್ಲಿ ಪ್ರಶ್ನಿಸುತ್ತಿದೆ.
ಮಹಿಳೆಯರ ಕಳ್ಳಸಾಗಣೆ ಮತ್ತು ಬಲವಂತದ ವೇಶ್ಯೆಗಾರಿಕೆಯ ಸಂತ್ರಸ್ತಳಾಗಿದ್ದ ಹದಿನಾರು ವರ್ಷ ಪ್ರಾಯದ ಹುಡುಗಿಯೊಬ್ಬಳು ಕೊಟ್ಟ ಮಾಹಿತಿಯನ್ನು ಅನುಸರಿಸಿ ಸೋನು ಪುಂಜಬಾನ್ ಳ ರಹಸ್ಯ ಅಡಗುದಾಣವನ್ನು ಪತ್ತೆ ಹಚ್ಚಿ ಆಕೆಯನ್ನು ಸೆರೆ ಹಿಡಿಯಲಾಯಿತು ಎಂದು ಹಿರಿಯ ದಿಲ್ಲಿ ಪೊಲೀಸ್ ಅಧಿಕಾರಿ ಐಎಎನ್‌ಎಸ್‌ಗೆ ತಿಳಿಸಿದರು.
ಸಂತ್ರಸ್ತ ಹುಡುಗಿಯು 12 ವರ್ಷ ಪ್ರಾಯದವಳಿದ್ದಾಗ 2009ರಲ್ಲಿ ಅಪಹರಣಕ್ಕೆ ಗುರಿಯಾಗಿದ್ದಳು. 2014ರಲ್ಲಿ ಈ ಸಂತ್ರಸ್ತ ಬಾಲಕಿಯು ಖುದ್ದು ನಜಫ್ಗಢ ಪೊಲೀಸ್ ಠಾಣೆಗೆ ಬಂದು ಸೋನು ಪುಂಜಬಾನ್ ಹಾಗೂ ಆಕೆಯ ದಲ್ಲಾಳಿಗಳ ವಿರುದ್ಧ ದೂರು ನೀಡಿದ್ದಳು.
ತಾನು ದೂರು ಕೊಟ್ಟ ಬಳಿಕವೂ ಯಾವುದೇ ಪೊಲೀಸ್ ಕ್ರಮ ಕಂಡು ಬಾರದ ಹಿನ್ನೆಲೆಯಲ್ಲಿ ತಾನು ಕೊಲ್ಲಲ್ಪಡಬಹುದು ಎಂಬ ಭೀತಿಯಲ್ಲಿ ಹುಡುಗಿಯು ಭೂಗತಳಾಗಿದ್ದಳು.
ಈ ಕೇಸನ್ನು ಅನಂತರ ಎಸಿಪಿ ಲಾಂಬಾ ಅವರಿಗೆ ನೀಡಲಾಗಿ ಅವರು ಭೂಗತಳಾಗಿದ್ದ ಹುಡುಗಿಯನ್ನು ಕಳೆದ ನವೆಂಬರ್‌ನಲ್ಲಿ ಪತ್ತೆ ಹಚ್ಚಿ ಸೋನು ಕುರಿತ ಅಮೂಲ್ಯ ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು ಕಾರ್ಯಾಚರಣೆ ನಡೆಸಿದರು.
ಪುಂಜಬಾನ್ ಳಿಂದ ಅಪಹೃತಳಾಗಿದ್ದ ತನ್ನನ್ನು ಬಲವಂತದ ವೇಶ್ಯೆಗಾರಿಕೆಯ ಬಲಿಪಶುವನ್ನಾಗಿ ಮಾಡಲಾಯಿತು. ಆಕೆಯ ದಲ್ಲಾಳಿಗಳು ತನ್ನನ್ನು ಮಾರಿ, ಚಿತ್ರಹಿಂಸೆ, ಅತ್ಯಾಚಾರಕ್ಕೆ ಗುರಿಪಡಿಸಿದರು ಎಂದು ಬಾಲಕಿ ಹೇಳಿದಳು.