ವಿಜಯಪುರ: ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಹೊರಬಿದ್ದು ದಶಕವೇ ಕಳೆದಿದೆ. ಬರುವ 2-3 ತಿಂಗಳಲ್ಲಿ ಕಾನೂನು, ತಾಂತ್ರಿಕ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಅಧಿ ಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಅಧಿಸೂಚನೆ ಹೊರಬೀಳುತ್ತಲೇ ಬಜೆಟ್‌ನಲ್ಲಿ ಘೋಷಿತ ಅನುದಾನದ ಹೊರತಾಗಿ ಕೃಷ್ಣಾ ಯೋಜನೆಗೆ ಅಗತ್ಯದ ಅನುದಾನ ಬಿಡುಗಡೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಂಗಳವಾರ ತಾಳಿಕೋಟೆ ತಾಲೂಕಿನ ಕೊಡ ಗಾನೂರ ಗ್ರಾಮದಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧಿ ಕರಣ ಅಂತಿಮ ತೀರ್ಪು ಹೊರ ಬಿದ್ದ ಬಳಿಕದ ಕಾನೂನು ಹೋರಾಟದ ತಾಂತ್ರಿಕ ಸಮಸ್ಯೆ ಇದೀಗ ನಿವಾರಣೆ ಹಂತ ತಲುಪಿದೆ. ಹೀಗಾಗಿ ಕೇಂದ್ರ ಸರ್ಕಾರ 2-3 ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದರು.
ಅಧಿಸೂಚನೆ ಹೊರ ಬೀಳುತ್ತಲೇ ಬಜೆಟ್‌ನಲ್ಲಿ ನೀರಾವರಿ ಕಾರ್ಯಕ್ಕೆ ಘೋಷಿತ ಅನುದಾನ ಹೊರತಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯ ಇರುವ ಪೂರ್ಣ ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 524 ಮೀಟರ್‌ಗೆ ಗೇಟ್ ಅಳವಡಿಸುವ ಕಾರ್ಯ, ಭೂಸ್ವಾಧೀನವಾದ, ಪರಿಹಾರ ವಿತರಣೆ, ಮುಳುಗಡೆ ಆಗಲಿರುವ 20 ಹಳ್ಳಿಗಳ ಪುನರ್ವಸತಿ ಕಾರ್ಯ ಸೇರಿ ಇಡೀ ಯೋಜನೆಗೆ ಅಗತ್ಯ ಇರುವ ಅನುದಾನ ನೀಡುವುದಾಗಿ ಘೋಷಿಸಿದರು. ಅಲ್ಲದೇ ರಾಜ್ಯದ ಪಾಲಿನ 130 ಟಿಎಂಸಿ ಅಡಿ ನೀರು ಬಳಸಿಕೊಂಡು ರಾಜ್ಯದ ಅನ್ನದಾತರ ಜಮೀನಿಗೆ ನೀರು ಹರಿಸಿ ಭೂದೇವಿಗೆ ಹಸಿರು ಹೊದಿಸುವ ಕಾರ್ಯ ಮಾಡುವಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಲಿದೆ ಎಂದರು.
ರಾಜ್ಯದಲ್ಲೇ ಕೆರೆಗೆ ನೀರು ತುಂಬುವ ಯೋಜನೆ ಅನುಷ್ಠಾನಕ್ಕಾಗಿ 110 ಕೋಟಿ ರೂ. ಅನುದಾನ ನೀಡಿ, ವಿಜಯಪುರ ಜಿಲ್ಲೆಯಿಂದ ಯೋಜನೆ ಆರಂಭಿಸಿದ್ದು ನಾನು. ಆದರೆ ನೀರಾವರಿ ವಿಷಯದಲ್ಲಿ ಕೆಲವರು ಭಗೀರಥ ಎಂದು ಕರೆದುಕೊಳ್ಳುತ್ತಾರೆ. ಯಾರು ಬೇಕಾದರೂ ತಮ್ಮನ್ನು ಭಗೀರಥ ಎಂದು ಕರೆದುಕೊಳ್ಳಲಿ, ನನಗೆ ಭಗೀರಥ ಎಂದು ಕರೆಯುವುದು ಬೇಡ. ನಾಡಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಸಂತೃಪ್ತಿ ನನಗಿದೆ. ಭವಿಷ್ಯದಲ್ಲಿ ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವುದು ನನ್ನ ಮುಂದಿರುವ ಗುರಿ ಎಂದರು.
ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ 67 ಸಾವಿರ ಕೋಟಿ ರೂ. ಸಾಲ ತರುವ ಸ್ಥಿತಿ ಇದ್ದಾಗ ಸೋರಿಕೆಗಳನ್ನು ತಡೆದು, ಅನಗತ್ಯ ಖರ್ಚಿಗೆ ಮಿತಿ ಹಾಕಿದ್ದರಿಂದ 4 ಸಾವಿರ ಕೋಟಿ ರೂ. ಸಾಲ ಕಡಿತ ಮಾಡಿದ್ದು ನಮ್ಮ ಸರ್ಕಾರದ ಸಾಧನೆ. ಕೇಂದ್ರ ಸರ್ಕಾರ ಕೂಡ ಬಜೆಟ್ ಘೋಷಣೆ ಹೊರತಾಗಿ 9600 ಕೋಟಿ ರೂ. ನೆರವು ನೀಡಿದ್ದರಿಂದ ರಾಜ್ಯದ ಆರ್ಥಿಕ ಶಕ್ತಿ ಸುಭದ್ರವಾಗಿದೆ ಎಂದರು.
ನಾನು ದೇವರು ಹಾಗೂ ದೈವ (ಜನ ಸಮೂಹ)ವನ್ನು ನಂಬಿದವ. ಆತ್ಮಸಾಕ್ಷಿಯಿಂದ ಕೆಲಸ ಮಾಡುವವನು. ಕೋವಿಡ್ ಸಂಕಷ್ಟದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂ. ನಿರೀಕ್ಷಿತ ಆದಾಯ ಕೊರತೆ ಆದಾಗ ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸಿ, ಗುರಿ ಮೀರಿ 16 ಸಾವಿರ ಕೋಟಿ ರೂ. ಆದಾಯ ಗಳಿ ಸಿದ್ದು ನಮ್ಮ ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದರು.