Advertisement

ಕುಡಿಯುವ ನೀರಿನ ಸಿದ್ಧತೆಗೆ ಸೂಚನೆ

12:58 PM Nov 16, 2018 | Team Udayavani |

ಕಲಬುರಗಿ: ಮಳೆ ಅಭಾವದಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗಲೇ ಸಮಗ್ರವಾದ ಕ್ರಿಯಾ ಯೋಜನೆ ರೂಪಿಸಿ ಕಾರ್ಯೋನ್ಮುಖರಾಗುವಂತೆ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅಧ್ಯಕ್ಷರು ಹಾಗೂ ಉಪಾಧ್ಯಕೆ ಶೋಭಾ ಸಿದ್ದು ಸಿರಸಗಿ, ಕೃಷಿ-ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ ಬರೀ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಸಮಯ ದೂಡುವ ಬದಲು ವಾಸ್ತವ ಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳುವಂತೆ ಹೇಳಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ರೇವಣಸಿದ್ದಪ್ಪ ಮಾತನಾಡಿ, ಈಗಾಗಲೇ 5 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದಲ್ಲದೇ ಟಾಸ್ಕ್ ಪೋರ್ಸ್‌ ಸಮಿತಿ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಜಿಲ್ಲೆಯ 121 ಗ್ರಾಮಗಳಲ್ಲಿ ಟ್ಯಾಂಕ್‌ರ ಮೂಲಕ ನೀರು ಸರಬರಾಜು, ಕೊಳವೆ ಬಾವಿ ದುರಸ್ತಿ, ಪೈಪ್‌ ಲೈನ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 

ಇದಲ್ಲದೆ ವಿಕೋಪ ನಿಧಿಯಲ್ಲಿ 380 ಗ್ರಾಮಗಳಲ್ಲಿ ತೆರೆದ ಬಾವಿ ಹೂಳೆತ್ತಲು 9.52 ಕೋಟಿ ರೂ. ಮೀಸಲಿರಿಸಿದೆ ಎಂದು ವಿವರಣೆ ನೀಡಿದರು. ಆಳಂದ ತಾಲೂಕು ಮಾದನಹಿಪ್ಪರಗಾ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಮೂಲ ಆಧಾರವಾಗಿರುವ ಖಾಸಗಿ ವ್ಯಕ್ತಿ ಜಮೀನಿನಲ್ಲಿರುವ ತೆರೆದ ಬಾವಿಯಿಂದ ನೀರು ಪೂರೈಸಲು ಜಮೀನುದಾರರು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಇದೆ. ಕೂಡಲೇ ತಾಲೂಕಿನ ತಹಶೀಲ್ದಾರರನ್ನು ಸಂಪರ್ಕಿಸಿ ತೆರೆದ ಬಾವಿ ವಶಕ್ಕೆ ಪಡೆದು ಗ್ರಾಮಸ್ಥರಿಗೆ ನೀರು ಸರಬರಾಜು ಮಾಡುವಂತೆ ಸಿಇಒ ಡಾ| ರಾಜಾ ಪಿ.ಅವರು ಸೂಚನೆ ನೀಡಿದರು ಅಲ್ಲದೇ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಕೆರೆಗಳ ಬಳಿ ನರೇಗಾ ಯೋಜನೆಯಡಿ ತೆರೆದ ಬಾವಿ ತೋಡಲು ಸಂಬಂಧಿಸಿದಂತೆ ಭೂವಿಜ್ಞಾನಿಯವರನ್ನು ಸಂಪರ್ಕಿಸಿ ಒಂದು ವಾರದೊಳಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಮೂರು ವರ್ಷವಾದರೂ ಕಾಮಗಾರಿ 
ಆರಂಭವಿಲ್ಲ: ಜೇವರ್ಗಿ ತಾಲೂಕಿನಲ್ಲಿ ಮೂರು ವರ್ಷಗಳ ಹಿಂದೆ ಎನ್‌ಆರ್‌ಡಿಡಬ್ಲೂಪಿ ಯೋಜನೆಯಡಿ ಟೆಂಡರ್‌ವಾಗಿರುವ 50 ಕಾಮಗಾರಿಗಳು ಇದೂವರೆಗೆ ಹಲವು ಆರಂಭವಾಗೇ ಇಲ್ಲ. ಗುತ್ತಿಗೆದಾರರಿಗೆ ಇನ್ನೂ ಎಷ್ಟು ದಿನ ಸಮಯ ಕೊಡ್ತೀರಿ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಕಾಮಗಾರಿಗಳನ್ನೇ ಮಾಡದೇ ಇರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದಿದ್ದಾರೆ. ಕಪ್ಪು ಪಟ್ಟಿಗೆ ಸೇರಿಸಿ ಹೊಸ ಗುತ್ತಿಗೆದಾರರನ್ನು ನಿಯೋಜಿಸಲು ತಮಗೇನು ತೊಂದರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ
ಸಮಿತಿ ಅಧ್ಯಕ್ಷ ಶಾಂತಪ್ಪ ಚಂದ್ರಶ್ಯಾ ಕೂಡಲಗಿ ಪ್ರಶ್ನಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಅವರು 2016-17ನೇ ಸಾಲಿನ ವರೆಗೆ ಜೇವರ್ಗಿ ತಾಲೂಕಿನಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳ ಪಟ್ಟಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಮತ್ತು ನಿಧಾನಗತಿ ಧೋರಣೆ ಹೊಂದಿರುವ ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಐದಂಶ ಸೂಚನೆ: ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಅವರು ಈ ಹಿಂದೆ ಸಭೆಗಳೆಲ್ಲ ಕಾಟಾಚಾರಕ್ಕೆ ಎನ್ನುವಂತೆ ನಡೆಯುತ್ತ ಬಂದಿದ್ದರಿಂದ ಏನು ಚರ್ಚೆ ಮಾಡಬೇಕು ಎಂಬುದೇ ತಿಳಿಯದಂತಾಗಿದೆ. ಹಿಂದಿನ ಸಭೆ ವಿವರಣೆಯನ್ನೇ ಈ ಸಭೆಗೂ ನೀಡ್ತಾರೆ. 

ಸಭೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಇಂದಿನ ಸಭೆಗೆ ಹಲವು ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದು ನಿರೂಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಿಇಓ ಅವರು, ಜಿಪಂ ಸಾಮಾನ್ಯ ಸಭೆ, ಕೆಡಿಪಿ ಸಭೆಗೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಾರದೆ ಜನಪ್ರತಿನಿಧಿಗಳು ಬಂದ ನಂತರ ಅಧಿಕಾರಿಗಳು ಸಭೆಗೆ ಬರುವ ಪರಿಪಾಠ ಬೆಳೆಸಿಕೊಂಡಿರುವುದು ಸರಿಯಾದುದಲ್ಲ. ಇನ್ನು ಮುಂದೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಒಂದು ವೇಳೆ ಸಭೆಗೆ ಬಾರಲು ಆಗದಿದ್ದಲ್ಲಿ ಅಥವಾ ಪ್ರತಿನಿಧಿಯಾಗಿ ಕೆಳ ಹಂತದ ಅಕಾರಿಗಳನ್ನು ಕಳುಹಿಸುವಾಗ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು ಹಾಗೂ ಮಾಹಿತಿಯನ್ನು ಕನ್ನಡದಲ್ಲಿಯೆ ಸಲ್ಲಿಸಬೇಕು. ಇದನ್ನು ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
 
247 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ: ಜಿಲ್ಲೆಯಲ್ಲಿ ಬರಗಾಲ ವ್ಯಾಪಕ ಆವರಿಸಿದ ಪರಿಣಾಮ ಶೇ.70ಕ್ಕಿಂತ ಹೆಚ್ಚಿನ ಬೆಳೆ
ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ ಸಭೆಗೆ ವಿವರಣೆ ನೀಡಿದರು. ಮುಂಗಾರಿನಲ್ಲಿ 616 ಮಿಮೀ ಮಳೆ ಪೈಕಿ 361 ಮಿಮೀ ಮಾತ್ರ ಮಳೆಯಾಗಿದೆ. ಶೇ.41ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 112 ಮಿಮೀ ಮಳೆ ಪೈಕಿ 34 ಮಿಮೀ ಮಳೆಯಾಗಿದ್ದು. ಇಲ್ಲಿಯೂ ಶೇ.69 ಮಳೆ ಕೊರತೆಯಾಗಿದೆ. ಇದು ಜಿಲ್ಲೆಯ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಗೆ 247.72 ಕೋಟಿ ರೂ. ಬೆಳೆ ಪರಿಹಾರವಾಗಿ ಇನಫುಟ್‌ ಸಬ್ಸಿಡಿ ನೀಡಬೇಕಾಗಿದೆ ಎಂದು ಹೇಳಿದರು.

ಆಹಾರ ಇಲಾಖೆ ಉಪನಿರ್ದೇಶಕ ಡಾ| ರಾಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ 983 ಪಡಿತರ ಅಂಗಡಿಗಳ ಪೈಕಿ 972 ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ನೀಡಿ ಪಡಿತರ ಪಡೆಯಲು ಪಾಯಿಂಟ್‌ ಆಫ್‌ ಸೇಲ್‌ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲಾಗಿದೆ. ಆಳಂದ ತಾಲೂಕಿನ ಕವಲಗಾ, ಚಿತ್ತಾಪುರ ತಾಲೂಕು ಕೊಂಚೂರ ಮತ್ತು ಚಿಂಚೋಳಿ ತಾಲೂಕಿನ ಕೆಲ ಪಡಿತರ ಅಂಗಡಿಗಳು ಬಯೋಮೆಟ್ರಿಕ್‌ ಒಂದು ದಿನ ಪಡೆದು ತದನಂತರ ಮರುದಿನ ಪಡಿತರ ಸರಬರಾಜು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹವರ ಮೇಲೆ ಈಗಾಗಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೊಗೆ ಮುಕ್ತ ಕರ್ನಾಟಕಕ್ಕಾಗಿ ಮುಖ್ಯಮಂತ್ರಿ ಅನೀಲ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ್‌ ಯೋಜನೆಯಡಿ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸುವ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಲ್ಲಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೀರಾವರಿ, ಲೋಕೋಪಯೋಗಿ, ಪಿಎಂಜಿಎಸ್‌ವೈ, ತೋಟಗಾರಿಕೆ, ಜೆಸ್ಕಾಂ, ಪಿಆರ್‌ಇ ಸೇರಿದಂತೆ ಇನ್ನಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.  

ನರೇಗಾ ಕೂಲಿ ದಿನ ಹೆಚ್ಚಳ
ಬರದ ಹಿನ್ನೆಲೆಯಲ್ಲಿ ರೈತ ಸಮುದಾಯ ಉದ್ಯೋಗ ಆರಿಸಿ ಪಟ್ಟಣದತ್ತ ಮುಖ ಮಾಡುವ ಸಂಭವವಿದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ದಿನ ಹೆಚ್ಚಿಸಬೇಕು ಎಂದು ಸಿಇಒ ಡಾ| ರಾಜಾ ಪಿ. ಅಧಿಕಾರಿಗಳಗೆ ಸೂಚನೆ ನೀಡಿದರು. ಬರದ ಹಿನ್ನೆಲೆಯಲ್ಲಿ ಕೂಲಿ ದಿನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೆ ಸರ್ಕಾರದಿಂದ ಆದೇಶ ಬರಲಿದೆ. ಅಷ್ಟರೊಳಗೆ ಎಲ್ಲ ಮುನ್ನೆಚರಿಕೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾದ್ಯಂತ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಯಿದೆ. ವಿಕೋಪ ನಿಧಿ ಸೇರಿದಂತೆ ಇನ್ನಿತರ ಯೋಜನೆಗಳಡಿ ಅನುದಾನ ಪ್ರಾಯೋಜನೆ ಮಾಡಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು. ಆಳಂದ ತಾಲೂಕಿನಲ್ಲಿಯೂ ಬರದ ಛಾಯೆಯಿದ್ದು, ಇದನ್ನು ಬರಪೀಡಿತ ತಾಲೂಕು ಘೋಷಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next