Advertisement

ಕ್ರಿಯಾಯೋಜನೆ ಸಲ್ಲಿಸಲು ಸೂಚನೆ

01:31 PM May 21, 2019 | Suhan S |

ಕಲಬುರಗಿ: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರನ್ನು ಕೊಂಡೊಯ್ಯುತ್ತಿರುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕರಣದ ಮುಂದಿನ ವಿಚಾರಣೆಯೂ ಜೂ.3ರಂದು ನಡೆಯಲಿರುವುದರಿಂದ ಕ್ರಿಯಾಯೋಜನೆ ಸಲ್ಲಿಸಲು ಕಾರ್ಮಿಕ ಅಪರ ಆಯುಕ್ತ ಎಸ್‌. ನರಸಿಂಹಮೂರ್ತಿ ತಿಳಿಸಿದ್ದಾರೆ.

Advertisement

ಅಂದು ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದಿಂದ ಅಫಿಡೇವಿಟ್ ಸಲ್ಲಿಸಬೇಕಾಗಿರುವುದರಿಂದ ಜಿಲ್ಲಾ ಹಂತದಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಿಲ್ಲಾಧಿಕಾರಿ ಮೂಲಕ ಸಾರಿಗೆ ಆಯುಕ್ತರಿಗೆ ಕೂಡಲೆ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದರು.

ನಗರದ ಕಾರ್ಮಿಕ ಇಲಾಖೆಯ ಭವನದಲ್ಲಿ ಆಯೋಜಿಸಲಾದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಾರ್ಮಿಕ ಸಂಘಟನೆ ಮುಖಂಡರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವೇದನಾ ಶೀಲತೆಯನ್ನು ಮೂಡಿಸುವ ಉದ್ದೇಶದಿಂದ ನಡೆಸಲಾದ ಸಭೆಯಲ್ಲಿ ಮಾತನಾಡುತ್ತ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡ ಕ್ರಮ ಹಾಗೂ ಮುಂದೆ ತೆಗೆದುಕೊಳ್ಳಬಹುದಾದ ಕ್ರಮದ ಕುರಿತು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಉಚ್ಚ ನ್ಯಾಯಾಲಯದ ನಿರ್ದೇಶನ ನೀಡಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಳೆದ ಏ.26ರಂದು ನಡೆಸಿದ ವಿಡಿಯೋ ಸಂವಾದದಲ್ಲಿ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸುತ್ತ ಪ್ರತಿ ಜಿಲ್ಲೆಯಿಂದ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಿರುತ್ತಾರೆ.

ಬಹುತೇಕ ಜಿಲ್ಲೆಗಳಲ್ಲಿ ಕರಡು ಸಹ ಸಿದ್ಧಗೊಂಡಿದೆ. ಅದರಂತೆ ಕಲಬುರಗಿ ಜಿಲ್ಲೆಯಿಂದಲೂ ಶಿಕ್ಷಣ, ಸಾರಿಗೆ, ಪೊಲೀಸ್‌, ಕಾನೂನು ತಜ್ಞರಿಂದ ಸಲಹೆ ಪಡೆದು ಸಕಾರಾತ್ಮಕ ಹಾಗೂ ಸರಳವಾಗಿ ಅನುಷ್ಠಾನ ಮಾಡಲು ಯೋಗ್ಯವಾದ ಕ್ರಿಯಾಯೋಜನೆ ಸಲ್ಲಿಸಬೇಕಾಗುತ್ತದೆ. ಈ ಕ್ರಿಯಾಯೋಜನೆ ಮುಂದೆ ಕಾನೂನಾಗಿ ಜಾರಿಗೆ ಬಂದರು ಅಚ್ಚರಿಯಿಲ್ಲ. ಹೀಗಾಗಿ ಯೋಜನೆ ಸಿದ್ಧಪಡಿಸುವಾಗ ಸಾಧಕ-ಬಾಧಕಗಳನ್ನು ಅವಲೋಕಿಸುವುದು ಒಳ್ಳೆಯದು ಎಂದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್‌.ಆರ್‌. ಮಾಣಿಕ್ಯ ಮಾತನಾಡಿ, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣ ಮಾಡಿ ಅಪಘಾತಕ್ಕೆ ತುತ್ತಾದಲ್ಲಿ ಯಾವುದೇ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂಬುದನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಇಂತಹ ವಾಹನಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ತಡೆಯಬೇಕಾದರೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಅವಶ್ಯಕ. ಸರಕು ವಾಹನಗಳಲ್ಲಿ ಪ್ರಯಾಣ ತಡೆಗಟ್ಟಲು ಆಂದೋಲನ ರೂಪದಲ್ಲಿ ಕಾರ್ಯಾಚರಣೆ ನಡೆಸಬೇಕಾಗಿದ್ದು, ಪೊಲೀಸ್‌, ಸಾರಿಗೆ ಇಲಾಖೆಯೊಂದಿಗೆ ಇನ್ನಿತರ ಇಲಾಖೆಗಳು ಸಹ ಕೈಜೋಡಿಸಬೇಕಾಗಿದೆ ಎಂದರು.

ಸಭೆಯಲ್ಲಿ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತ ಗಿರೀಶ ಎಸ್‌.ಪಾಟೀಲ, ಸಹಾಯಕ ಕಾರ್ಮಿಕ ಆಯುಕ್ತ ಶ್ರೀಹರಿ ದೇಶಪಾಂಡೆ, ಸಂಚಾರ ಉಪ ವಿಭಾಗದ ಎಸಿಪಿ ವೀರೇಶ, ಎನ್‌.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿದಂತೆ ಆರ್‌ಟಿಒ, ಈ.ಕ.ರ.ಸಾ.ಸಂಸ್ಥೆ, ಕಾರ್ಖಾನೆ ಮತ್ತು ಬಾಯ್ಲರಗಳ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ಸಂಘನೆಯ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next