ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ತಾತ್ಕಾಲಿಕವಾಗಿ 3473 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಕುರಿತಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ -2021 ರಿಂದ ನೇರ ನೇಮಕಾತಿಯ ಮೂಲಕ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವವರೆಗೆ ಅಥವಾ ಮೇ 2021ರವರೆಗೆ ಅಥವಾ 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಉಪನ್ಯಾಸಕರನ್ನು ಗುರುತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ:ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಕೋವಿಡ್ ಸಾವಿಗೆ ಕಾರಣ : ಸಂಶೋಧನೆ
ರಾಜ್ಯದ ಪ್ರೌಢ ಶಾಲೆಗಳಿಗೆ ವೃಂದ ಬಲ ನಿಗದಿಗೊಳಿಸಿರುವ ಸರ್ಕಾರದ ಆದೇಶದ ಕ್ರಮಗಳನ್ನು ಹಾಗೂ ಇಲಾಖಾ ಅಧಿಸೂಚನೆಗಳಲ್ಲಿರುವ ಸೂಚನೆಗಳನ್ನು ಪಾಲಿಸಿ, ಪ್ರತೀ ಶಾಲೆಗೆ ಅಗತ್ಯವಿರುವ ಶಿಕ್ಷಕರ ಹುದ್ದೆಗಳ ಕುರಿತಂತೆ, ಶಾಲಾವಾರು ವೃಂದ ಮಂಜೂರಾತಿ ಕ್ರಮಗಳನ್ನು ಈಗಾಗಲೇ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗುತ್ತದೆ. ಸದರಿ ಆಧಾರದಲ್ಲಿ ಎಲ್ಲಿ ಅಗತ್ಯ ಹುದ್ದೆಗಳು ಖಾಲಿ ಇವೆಯೋ ಅಂತಹ ಖಾಲಿ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಆಧರಿಸಿ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ನೇಮಕ ಪ್ರಕ್ರಿಯೆ ನಡೆಸಲು ಸರ್ಕಾರ ಸೂಚಿಸಿರುವ ನಿಯಮಗಳನ್ನು ಆಧರಿಸಿ ಅತಿಥಿ ಉಪನ್ಯಾಸಕರ ನೇಮಕವನ್ನು ಮಾಡಿಕೊಳ್ಳಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.