Advertisement

ಅಸಂಘಟಿತರ ನೋಂದಣಿಗೆ ಸೂಚನೆ

11:19 AM Jul 07, 2018 | |

ಕಲಬುರಗಿ: ಜಿಲ್ಲೆಯಲ್ಲಿರುವ ಎಲ್ಲ ಅಸಂಘಟಿತ ವಲಯದ ಕಟ್ಟಡ ಮತ್ತು ಮನೆ ಕೆಲಸದ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮನವಿ ಮಾಡಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟ ಹಾಗೂ ಡಾನ್‌ ಬಾಸ್ಕೋ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಎನ್ನುವ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ನೋಂದಣಿಯಾದರೆ ಫಲಾನುಭವಿಗಳಿಗೆ ಸ್ಮಾರ್ಟಕಾರ್ಡ್‌ ನೀಡಿ ನೋಂದಾಯಿತ ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದರು.

ಅಸಂಘಟಿತ ಕಾರ್ಮಿಕರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಪಾರ್ಲಿಮೆಂಟ್‌ನಲ್ಲಿ ಕರಡು ಮಸೂದೆ ಮಂಡಿಸಲಾಗಿದೆ. ಈ ಮಸೂದೆ ಜಾರಿಯಾದರೆ ಅಸಂಘಟಿತ ಕಾರ್ಮಿಕರಿಗೆ ಕಾನೂನು ರೂಪದಲ್ಲಿ ಭದ್ರತೆ ದೊರೆಯುತ್ತದೆ ಎಂದರು.

ಮನೆಗೆಲಸ ಮಾಡುವ ಅಸಂಘಟಿತ ವಲಯದ ಮಹಿಳೆಯರಿಗೆ ಕೆಲಸದ ಸಮಯದಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ತೊಂದರೆಯಾಗಬಹುದು. ಅವರು ನೋಂದಾಯಿಸಿಕೊಳ್ಳದ ಕಾರಣ ಅವರನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಮನೆಗೆಲಸ ಮಾಡುವವರನ್ನು ದುರುಪಯೋಗ ಮಾಡಿಕೊಂಡರೆ ಶಿಕ್ಷೆ ನೀಡುವ ಕಾನೂನುಗಳು ಬೇರೆ ದೇಶಗಳಲ್ಲಿ ಜಾರಿಯಲ್ಲಿವೆ ಎಂದರು.

Advertisement

ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ ಎಂ.ಎನ್‌. ಮಾತನಾಡಿ, ಜಿಲ್ಲೆಯಲ್ಲಿ ಅಂಬೇಡ್ಕರ್‌
ಕಾರ್ಮಿಕ ಸಹಾಯ ಹಸ್ತ ಯೋಜನೆಗಾಗಿ ಮಾರ್ಚ್‌ ತಿಂಗಳಿಂದ ಅಸಂಘಟಿತ ಕಾರ್ಮಿಕರಿಂದ ಸ್ವಯಂ ಘೋಷಣೆ
ಅರ್ಜಿಗಳನ್ನು ಪಡೆಯಲಾಗುತ್ತಿದೆ. ಇಲ್ಲಿಯವರೆಗೆ ಕೇವಲ 122 ಕಾರ್ಮಿಕರು ಮಾತ್ರ ಅರ್ಜಿಗಳನ್ನು ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮನೆ ಕೆಲಸ ಮಾಡುವವರು ನೋಂದಾಯಿಸಿಕೊಳ್ಳಬೇಕು. ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 11,000 ಹಾಗೂ ಕುಶಲ ಕಾರ್ಮಿಕರಿಗೆ 13,000 ರೂ.ಗಳ ಕನಿಷ್ಟ ವೇತನ ನೀಡುವಂತೆ ಸರ್ಕಾರ ಆದೇಶಿಸಿದೆ.
ಮನೆಯಲ್ಲಿ ಅಡುಗೆ ಮಾಡುವರು ಕುಶಲ ಕಾರ್ಮಿಕರ ಪಟ್ಟಿಗೆ ಸೇರುವುದರಿಂದ ಕನಿಷ್ಠ ವೇತನ ನೀಡದವರ ವಿರುದ್ಧ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಬೇಕು ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಫಾಧ್ಯಕ್ಷೆ ಕೆ. ನೀಲಾ, ಕರ್ನಾಟಕ ಗೃಹ ಕಾರ್ಮಿಕ ಒಕ್ಕೂಟ ಅಧ್ಯಕ್ಷೆ ಮಹಾದೇವಿ ರಾಮಚಂದ್ರ ಅಚ್ಚಂದ, ಬೆಂಗಳೂರಿನ ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ
ಸಹಾಯಕಿ ಹಾಗೂ ಸ್ತ್ರೀ ಜಾಗೃತಿ ಸಮಿತಿ ಕಾರ್ಯದರ್ಶಿ ಗೀತಾ ಮೆನನ್‌, ಕಲಬುರಗಿ ಡಾನ್‌ ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್‌ ಸಜ್ಜೀತ್‌ ಜಾರ್ಜ, ಕರ್ನಾಟಕ ಗೃಹ ಕಾರ್ಮಿಕ ಒಕ್ಕೂಟ ಕಲಬುರಗಿ ಸಂಯೋಜಕಿ ಸಿ. ರೀನಾ ಡಿಸೋಜ, ಕಾರ್ಮಿಕ ಅಧಿಕಾರಿ ಶ್ರೀಹರಿ, ಮಾನವ ಹಕ್ಕುಗಳ ಆಯೋಗದ ಶರಣಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವಿಠಲ ಚಿಕಣಿ ಸ್ವಾಗತಿಸಿದರು, ಭರತೇಶ ಶಿಲವಂತರ ನಿರೂಪಿಸಿದರು. ಸಿ. ಮೇರಿ ವಂದಿಸಿದರು. ಸೆಂಟ್‌ ಜೋಸೆಫ್‌ ಶಾಲೆಯ ಬಾಲಕಿಯರು ಪ್ರಾರ್ಥನಾ ನೃತ್ಯ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next