Advertisement

ಪ್ಲಾಸ್ಟಿಕ್‌ ಕವರ್ ಬಳಕೆ ನಿರ್ಬಂಧ ಅಭಿಯಾನಕ್ಕೆ ಸೂಚನೆ

01:13 AM Jun 12, 2019 | Lakshmi GovindaRaj |

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ಹೇರಳವಾಗಿದ್ದು, ಅವುಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಗಂಗಾಬಿಕೆ ಸೂಚಿಸಿದ್ದಾರೆ.

Advertisement

ಮಂಗಳವಾರ ಸಂಜೆ ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ನಡೆದ ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರು ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿದ್ದರೂ ನಗರದ ಎಲ್ಲೆಡೆ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ಹೆಚ್ಚಿದೆ. ಸಣ್ಣಪುಟ್ಟ ವ್ಯಾಪಾರಸ್ಥರಲ್ಲಿ ಈಗಲೂ ಪ್ಲಾಸ್ಟಿಕ್‌ ಕವರ್‌ಗಳನ್ನೇ ಹೇರಳವಾಗಿ ಬಳಸುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ವ್ಯಾಪಾರ ಸ್ಥಳದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಬಂಧಿಸಲು ಕಟ್ಟುನಿಟ್ಟಿನ ಕ್ರಮವಹಿಸಿಸಬೇಕು.

ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಪ್ಲಾಸ್ಟಿಕ್‌ ಕವರ್‌ ಬಳಸದಂತೆ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಆದೇಶಿಸಿದ್ದರು. ಇನ್ನು ನಗರದಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ರುದ್ರ ಭೂಮಿ ಮತ್ತು ವಿದ್ಯುತ್‌ ಚಿತಾಗಾರಗಳಲ್ಲಿ ಉತ್ಪಾದನೆಯಾಗುತ್ತಿರುವ ಹಸಿ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ, ಅಲ್ಲಿಯೇ ಹಸಿಕಸದಿಂದ ಕಂಪೋಸ್ಟರ್‌ ಬಳಸಿ ಸಾವಯವ ಗೊಬ್ಬರವನ್ನು ತಯಾರಿಸಲು ಕ್ರಮವಹಿಸಬೇಕು.

Advertisement

ಇನ್ನು ಸ್ಮಶಾನಕ್ಕೆ ಬರುವ ಸಾರ್ವಜನಿಕರೂ ಕೂಡಾ ಸ್ಪಚ್ಛತೆ ಕಾಪಾಡುವಂತೆ ತಿಳಿವಳಿಕೆ ನೀಡುವುದು ಹಾಗೂ ಉದ್ಯಾನದ ರೀತಿಯಲ್ಲಿಯೇ ಸ್ಮಶಾನವನ್ನು ಕೂಡಾ ಸ್ಪಚ್ಛವಾಗಿಟ್ಟುಕೊಳ್ಳಲು ಅಗತ್ಯ ಅಭಿವೃದ್ಧಿ ಮತ್ತು ಸುಧಾರಣೆ ಕ್ರಮವಹಿಸುವಂತೆ ತಿಳಿಸಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದು, ಡೆಂಗ್ಯೂ ಸೇರಿದಂತೆ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು.

ಜತೆಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಧನ್ವಿವರ್ಧಕಗಳನ್ನು ಬಳಸುವ ಮೂಲಕ ತಿಳಿಸಬೇಕು ಎಂದು ತಿಳಿಸಿದ್ದಾರೆ. ಈ ಬಾರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸುವ ಮೂಲಕ ನಗರದಲ್ಲೆಲ್ಲೂ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಹಾಗೂ ಹೊರಭಾಗದಿಂದ ನಗರಕ್ಕೆ ಪಿಒಪಿ ಮೂರ್ತಿಗಳು ಬಾರದಂತೆ ನಿರ್ಬಂಧಿಸಲು ಆದೇಶಿಸಿದರು. ಸಭೆಯಲ್ಲಿ ಪಾಲಿಕೆ ವಿಶೇಷ ಆಯುಕ್ತ ಡಿ.ರಂದೀಪ್‌, ಪಾಲಿಕೆ ಸದಸ್ಯ ಐಶ್ವರ್ಯಾ ಇದ್ದರು.

ಉದಯವಾಣಿ ಜಾಗೃತಿ: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಚೆಗೆ “ಉದಯವಾಣಿ’ಯು “ಪ್ಲಾಸ್ಟಿಕ್‌ ಮುಕ್ತ ಪರಿಸರದತ್ತ…’ ಸರಣಿ ಮೂಲಕ ಜಾಗೃತಿ ಅಭಿಯಾನ ನಡೆಸಿತ್ತು. ಅಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಟಿ.ವಿ.ರಾಮಚಂದ್ರ, ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಪತ್ರಿಕೆ ಕಚೇರಿಗೆ ಭೇಟಿ ನೀಡಿ ಸಂವಾದ ಕೂಡ ನಡೆಸಿದ್ದರು. ಬೆನ್ನೆಲ್ಲೇ ಮೇಯರ್‌ ಈ ಸಂಬಂಧ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next