ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್1ಎನ್1 ಸೋಂಕು ಹೆಚ್ಚಾಗುತ್ತಿದ್ದು, ಈವರೆಗೆ ಇಬ್ಬರು ಮೃತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಎಚ್1ಎನ್1 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಭಾನುವಾರ ಗೃಹಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಈವರೆಗೂ 100 ಮಂದಿಗೆ ಎಚ್1ಎನ್1 ಸೋಂಕು ತಗುಲಿದೆ. ಇಬ್ಬರು ಮೃತರಾಗಿದ್ದಾರೆ. ಈ ಕುರಿತು ಪಾಲಿಕೆ ವೈದ್ಯಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು, ಭಿತ್ತಿಪತ್ರಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಗಾಳಿ ಮೂಲಕ ರೋಗ ಹರಡುವುದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೊಳಚೆ ಪ್ರದೇಶಗಳಲ್ಲಿ ಮಾತ್ರ ಎಚ್1ಎನ್1 ಬರುತ್ತದೆ ಎಂಬ ಭ್ರಮೆ ಬೇಡ. ಇದೊಂದು ಗಾಳಿಯಿಂದ ಹರಡುವ ರೋಗವಾಗಿದ್ದು, ಇಂತಹದ್ದೇ ಪ್ರದೇಶ ಎಂದು ಗುರುತಿಸುವುದು ಕಷ್ಟ.
ಇನ್ನು ಮಹದೇವಪುರ ಭಾಗದಲ್ಲಿ ಐಟಿ ಉದ್ಯೋಗಿಗಳು ಬೇರೆ-ಬೇರೆ ಕಡೆಯಿಂದ ಬರುತ್ತಿರುವುದರಿಂದ ಆ ಭಾಗದ ಆಸ್ಪತ್ರೆಗಳಲ್ಲಿ 38 ಪ್ರಕರಣ ದಾಖಲಾಗಿವೆ. ಯಾವುದೇ ವ್ಯಕ್ತಿಯಲ್ಲಿ ಎಚ್1ಎನ್1 ಸೋಂಕು ಇರುವುದು ಪತ್ತೆಯಾದರೆ, ತಕ್ಷಣ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕು. ಜತೆಗೆ ಅವರ ಕುಟುಂಬ ವರ್ಗ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಎಚ್1ಎನ್1ನಿಂದಾಗಿ ಪಾಲಿಕೆ ವ್ಯಾಪ್ತಿಗೆ ಬರುವ ಇಬ್ಬರು ಮೃತಪಟ್ಟಿದ್ದಾರೆ. ಇತರೆ ಭಾಗದಿಂದ ಚಿಕಿತ್ಸೆಗೆಂದು ಬೆಂಗಳೂರಿಗೆ ಬರುವರನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ತಪ್ಪು ಅಂಕಿ ಅಂಶ ವರದಿಯಾಗಿದೆ. ಇನ್ನು ಸೋಂಕಿನ ತಡೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಸಭೆಯಲ್ಲಿ ಮಹಾಲಕ್ಷ್ಮೀ ಬಡಾವಣೆ ಶಾಸಕ ಗೋಪಾಲಯ್ಯ, ರಾಜೀವ್‌ಗಾಂಧಿ ಆರೋಗ್ಯ ಸಂಸ್ಥೆ ನಿರ್ದೇಶಕ ನಾಗರಾಜ್, ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕ ಡಾ.ಶಿವಕುಮಾರ್ ಸಜ್ಜನ್ ಶೆಟ್ಟಿ ಭಾಗವಹಿಸಿದ್ದರು.