Advertisement

ಸಾಂಕ್ರಾಮಿಕ ರೋಗ ಹತೋಟಿಗೆ ಸೂಚನೆ

12:38 PM May 29, 2018 | |

ಶಿವಮೊಗ್ಗ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದಾದ ಸಂಭವವಿದ್ದು, ಅದರ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲಾ ಹಂತದ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮಕ್ಕೆ ಸಿದ್ಧರಾಗಿರುವಂತೆ ಜಿಲ್ಲಾಧಿಕಾರಿ ಡಾ| ಎಂ.
ಲೋಕೇಶ್‌ ಹೇಳಿದರು.

Advertisement

ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮ ಕುರಿತು ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆಯಲ್ಲಿ ಇತ್ತೀಚೆಗೆ ಕಂಡುಬಂದ ಕಾಲರಾ ಪೀಡಿತ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿರುವುದನ್ನು ತೆರೆವುಗೊಳಿಸಲಾಗಿದೆ. ತಾವೇ ಖುದ್ದಾಗಿ ಸ್ಥಳ ಪರಿಶೀಲಿಸಿ ಸೋಂಕು ತಗುಲಿರುವ ಬಗ್ಗೆ ವೈದ್ಯಕೀಯ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅಂತೆಯೇ ಅಲ್ಲಿನ ರೋಗಿಗಳ ರಕ್ತದ ಮಾದರಿಯನ್ನು ತಪಾಸಿಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾಗರ ತಾಲೂಕಿನಲ್ಲಿ ಶಂಕಿತ ನಿಫಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಎನ್‌ .ಐ.ವಿ ಪ್ರಯೋಗಾಲಯ ವರದಿ ನೀಡಿದ್ದು, ಸೋಂಕು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ. ಆದಾಗ್ಯೂ ನಿಫಾ ಸೋಂಕು ಜಿಲ್ಲೆಯಲ್ಲಿ ಕಾಣಿಸಿಕೊಳ್ಳದಂತೆ ಅಗತ್ಯ ಮುಂಜಾಗ್ರತ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಸೊರಬ ತಾಲೂಕಿನ ಬಾರಂಗಿಯಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾಯಿಲೆ ಪೀಡಿತ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಲಸಿಕೆ ಹಾಕಲಾಗಿದೆ. ಅಲ್ಲದೇ ನೆರೆಯ ಹಾವೇರಿ ಜಿಲ್ಲೆಯ ಆಯ್ದ ಪ್ರದೇಶದ ಗ್ರಾಮಗಳಿಗೂ ಉಚಿತವಾಗಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಯಿಲೆಯ ನಿಯಂತ್ರಣಕ್ಕೆ ಸ್ಥಳೀಯರು ಆರೋಗ್ಯ ಇಲಾಖಾ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.
 
ತಂಬಾಕು ನಿಯಂತ್ರಣ ಕಾರ್ಯಕ್ರಮ: ಶಿಕಾರಿಪುರ ತಾಲೂಕಿನ ಕ್ಯಾದಿಗೆಕೊಪ್ಪ ಗ್ರಾಮ ಸಂಪೂರ್ಣ ತಂಬಾಕುಮುಕ್ತ ಗ್ರಾಮವನ್ನಾಗಿ ಘೋಷಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಆದಾಗ್ಯೂ ಮತ್ತೂಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಸಮಾಲೋಚನೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಶಾಲೆಗಳ ಸುತ್ತ 100ಮೀ. ಪ್ರದೇಶದ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನ ಮಾರಾಟವಾಗದಂತೆ ನಿರ್ಬಂಧವಿದೆ. ನಗರದೆಲ್ಲೆಡೆ ತಂಬಾಕು ಉತ್ಪನ್ನ ಸೇವನೆಗೆ ಪ್ರೋತ್ಸಾಹಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ಪೊಲೀಸ್‌ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಕಾರದೊಂದಿಗೆ ತೆರವುಗೊಳಿಸಲಾಗುವುದು ಎಂದರು.

ಆಹಾರ ಮತ್ತು ಗುಣಮಟ್ಟ ಕಾರ್ಯಕ್ರಮ: ಮುದ್ರಿತ ಪತ್ರಿಕೆಗಳಲ್ಲಿ ಆಹಾರ ಪದಾರ್ಥ ಕಟ್ಟುವುದನ್ನು ನಿಷೇಧಿಸಲಾಗಿದ್ದರೂ ಮಾರಾಟ ಅವ್ಯಾಹತವಾಗಿ ನಡೆದಿದೆ. ಆರೋಗ್ಯಾಧಿಕಾರಿಗಳು ಈ ಸಂಬಂಧ ಪೊಲೀಸ್‌ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮಕ್ಕೆ ಮುಂದಾಗುವಂತೆ ತಿಳಿಸಿದರು.

ಮಹಾನಗರಪಾಲಿಕೆ, ಪುರಸಭೆ ಮತ್ತು ಪಪಂ ಮುಖ್ಯಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕೆ. ರಾಕೇಶ್‌ ಕುಮಾರ್‌ ಸೂಚಿಸಿದರು. ಜಿಲ್ಲೆಯ ಕೆಲವು ದಿನಸಿ ಅಂಗಡಿಗಳಲ್ಲಿ ಅಯೋಡಿನ್‌ ರಹಿತ ಉಪ್ಪು ಮಾರಾಟವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ವರ್ತಕರು ಅಯೋಡಿನ್‌ಯುಕ್ತ ಉಪ್ಪನ್ನೇ ಮಾರಾಟ ಮಾಡಬೇಕು. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಹಾಸ್ಟೆಲ್‌ಗ‌ಳಲ್ಲಿ ಶುದ್ಧ ಅಯೋಡಿನ್‌ ಯುಕ್ತ ಉಪ್ಪನ್ನೆ ಉಪಯೋಗಿಸುವಂತೆ ಜಿಲ್ಲಾಧಿಕಾರಿ ಎಂ.ಲೋಕೇಶ್‌ ಸೂಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕೆ. ರಾಕೇಶ್‌ಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವೆಂಕಟೇಶ್‌, ಡಾ| ನಟರಾಜ್‌, ಡಾ| ಶಂಕರಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿ ಅನುಮತಿ ಪಡೆಯದೆ ತಯಾರಿಸಿ ಮಾರಾಟ ಮಾಡುವ ಕೋಲ್ಡ್‌ ಪ್ಯಾಕೇಜ್‌ ಕುಡಿಯುವ ನೀರಿನ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದ್ದು, ಪರವಾನಗಿ ಪಡೆಯದೇ ಬಳಸಲು ಯೋಗ್ಯವಲ್ಲದ ನೀರನ್ನು ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು. 
 ಡಾ| ಎಂ. ಲೋಕೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next