Advertisement
ಮೊದಲು ಟೆನಿಸನ್ ಎನ್ನುವ ಬ್ರಿಟಿಷ್ ಕವಿಯ ಕವಿತೆಯೊಂದರ ಕುರಿತು ಹೇಳಿಕೊಳ್ಳುತ್ತೇನೆ. ಓಡಿಸ್ಸಿ ಮಹಾಕಾವ್ಯದ ಘಟನೆಯೊಂದನ್ನು ಆಧರಿಸಿ ಬರೆಯಲಾದ ಕವಿತೆ ಅದು. ಅಲ್ಲಿ ಪ್ರಯಾಣ ನಿರತರಾದ ಒಂದು ಹಡಗಿನ ಜನರು ಮರಳಿ ತಮ್ಮ ಮನೆಗೆ ಬರುತ್ತಿರುತ್ತಾರೆ. ದಾರಿಯಲ್ಲಿ ಅಕಸ್ಮಾತ್ ಆಗಿ ಒಂದು ದ್ವೀಪದಲ್ಲಿ ಇಳಿದುಕೊಳ್ಳುತ್ತಾರೆ. ಆಗ ಸಂಜೆಯ ಸಮಯ. ಆ ದ್ವೀಪ ಗಿರಿಗಳು, ಕಂದರಗಳು, ಹೊನ್ನಿನ ಬಣ್ಣದ ಬೀಚ್‌ಗಳು ಇತ್ಯಾದಿಗಳಿಂದ ತುಂಬಿಕೊಂಡಿರುವ ಪ್ರದೇಶ. ಅತಿ ಸುಂದರ.
Related Articles
Advertisement
ಸಂಭ್ರಮದ ವಿವರಗಳನ್ನು ಇನ್ನೂ ಒಂದು ಚೂರು ಗಮನಿಸಿಕೊಳ್ಳಬೇಕು. ಎಲ್ಲೆಲ್ಲೂ ನೂರಾರು ಕಾರುಗಳು ಕನ್ನಡಕ ತೊಟ್ಟ ಸುಂದರಿಯರು. ಸದೃಢ ಮೈಕಟ್ಟುಗಳ, ಆರು ಪ್ಯಾಕ್‌ಗಳ ಯುವಕರು. ವಯಸ್ಸಾದರೂ ಸೌಂದರ್ಯ ಪ್ರಜ್ಞೆ ಕಳೆದುಕೊಳ್ಳದ ಗಂಡಸರು ಮತ್ತು ಹೆಂಗಸರು. ವಯಸ್ಸಾಗುವುದು ನಿಂತು ಹೋಗಿರುವ ಮಹಿಳೆಯರು. ತಾಯಿ, ಮಗಳು, ಮೊಮ್ಮಗಳು ಎಲ್ಲರೂ ಹಾಕಿಕೊಳ್ಳುವುದು ಹೆಚ್ಚು ಕಡಿಮೆ ಒಂದೇ ರೀತಿಯ, ಶಾರೀರಿಕ ಸೌಂದರ್ಯವನ್ನು ಧಾರಾಳವಾಗಿ ಬಿಚ್ಚಿಡುವ ಬಟ್ಟೆಗಳು. ಮುಖ ಕ್ಲೀನ್ ಆಗಿ ಬ್ಲೀಚ್ ಮಾಡಿಸಿಕೊಂಡು ಅಥವಾ ಲೈಟ್ ದಾಡಿ ಮಾಡಿಕೊಂಡ ಅಥವಾ ಫ್ಯಾಷೆನೆಬಲ್ ದಾಡಿ ಬಿಟ್ಟುಕೊಂಡ ಮಿರುಗುವ ಮುಖದ, ತಮ್ಮ ಪ್ರೇಯಸಿಯ ಕೈ ಹಿಡಿದು ನಿದ್ದೆಯಲ್ಲಿರುವಂತೆ ನಡೆಯುವ ಗಂಡಸರು. ಎದೆ ತುಂಬಿ ನಡೆಯುವ ಗಜಗಮನೆಯರು, ಸಂಭ್ರಮಿಸುವ ಮಕ್ಕಳು. ಎಲ್ಲರ ಮುಖದಲ್ಲೂ ಸಂತೋಷ, ಗಲಗಲ ನಗು, ಉತ್ಸಾಹ ಹರಿಯುವ ತೊರೆ. ಎಲ್ಲೆಲ್ಲಿಯೂ ಕಾಯಬೇಕು. ಪಾರ್ಕ್ ಮಾಡಲು, ತಿಂಡಿ ತಿನ್ನಲು, ಟಾಯ್ಲೆಟ್ ಬಳಸಲು. ಎಲ್ಲೆಲ್ಲಿಯೂ. ಹೆಜ್ಜೆ ಹೆಜ್ಜೆಗೂ ಖರ್ಚಿಗೆ ಕನಿಷ್ಟವೆಂದರೂ ಐದು ನೂರು ರೂಪಾಯಿಯ ನೋಟನ್ನೇ ತೆಗೆಯಬೇಕು. ಅಚ್ಚರಿ ಎಂದರೆ ಅದು ಯಾವುದೂ ಸಂಭ್ರಮವನ್ನು ಕಳೆಗುಂದಿಸಿದಂತೆ ಕಾಣಲಿಲ್ಲ.
ಮೊಮ್ಮಕ್ಕಳಾದವರು ಕೂಡ ಈಗ ಜೀನ್ಸ್ ತೊಟ್ಟು ಅಥವಾ ಬರ್ಮುಡಾ ತೊಟ್ಟು ಸಂಭ್ರಮಿಸುವವರೇ. ಯಕ್ಷಗಾನದಲ್ಲಿ ಬರುವ ಹಾಡಿನ ಹಾಗೆ ಈಗ “”ಎಲ್ಲೆಲ್ಲು ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ, ಮಾಮರವು ಹೂತಿದೇ, ಸೊಬಗೇರಿ ನಿಂತಿದೆ.” ಟೆನ್ಸಿಸನ್‌ನ ಕವಿತೆಯಲ್ಲಿ ಬರುವ ಹಾಗೆ ಎಲ್ಲೆಲ್ಲೂ ಮಾದಕತೆ, ಸಂತೃಷ್ಟಿ ಜೀವನವನ್ನು ಕ್ಷಣ ಕ್ಷಣವೂ ಸವಿಯುವ ಉತ್ಸಾಹ. ಅರ್ಥವೆಂದರೆ ಭಾರತ ಸಂಭ್ರಮಿಸುತ್ತಿದೆ. ಏಕೋ, ಏನೋ ಒಮ್ಮೆಲೇ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹೊಸ ವರ್ಷ ಇತ್ಯಾದಿ ದಿನಗಳು ದೊಡ್ಡ ಸಂಭ್ರಮಾಚರಣೆಗಳಾಗಿ ಹೋಗಿವೆ. ಸಂಭ್ರಮಕ್ಕೆ ಎಲ್ಲೆಗಳೇ ಇಲ್ಲದ್ದನ್ನು ನೋಡುವುದಿದ್ದರೆ ಬೆಂಗಳೂರಿನಲ್ಲಿ ಎಮ್.ಜಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆಯನ್ನು ಗಮನಿಸಬೇಕು. ರಸಿಕರ ಸ್ವರ್ಗ ಅದು. ಅದು ಯಾವ ತುದಿಗೆ ಹೋಗುತ್ತದೆಂದರೆ ಕೊನೆ ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಬೇಕಾಗುತ್ತದೆ.
ವಿಶೇಷವಾದ ಗಮನಾರ್ಹವಾದ ವಿಷಯ ಇದು. ಏಕೆಂದರೆ ಬಹುಶಃ ಒಂದು ನಾಗರಿಕತೆಯಾಗಿ ನಮ್ಮ ದೇಶದ ಮನಸ್ಸು ತಾತ್ವಿಕತೆಗೆ ಓರಿಯಂಟ್ ಆದುದು ಎಂದೇ ಹೇಳಲಾಗಿದೆ. ಅಂದರೆ ನಮ್ಮ ನಾಗರಿಕತೆ ಇಹಕ್ಕಿಂತಲೂ ಪರದತ್ತ ಹೆಚ್ಚು ಮನಸ್ಸು ಮಾಡಿದ್ದು. ನಮ್ಮಲ್ಲಿ ಹುಟ್ಟಿಕೊಂಡಿರುವ ಯಾವ ಧರ್ಮವೂ ಇಹ ಜೀವನವನ್ನು ಸೆಲೆಬ್ರೇಟ್ ಮಾಡುವ ಕುರಿತು ಹೇಳುವುದಿಲ್ಲ. ನಮ್ಮ ತಾತ್ವಿಕತೆಯಲ್ಲಿ ಜೀವನ ಇರುವುದು ಮೋಕ್ಷ ಪಡೆಯುವುದಕ್ಕಾಗಿ. ತ್ಯಾಗ ಮಾಡುವುದು, ಬಯಕೆಗಳನ್ನು ಮೀರುವುದು, ಇಹದ ಭೋಗಗಳನ್ನು ತ್ಯಜಿಸುವುದು. ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ರಾಗ ದ್ವೇಷಗಳನ್ನು ಗೆಲ್ಲುವುದು, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ಗೆಲ್ಲುವುದು, ಗೆಲ್ಲುವ ಮೂಲಕ ಸ್ಥಿತ ಪ್ರಜ್ಞತೆಯನ್ನು ಗಳಿಸುವುದು ನಮ್ಮ ನಾಗರಿಕತೆಯ ಪ್ರಮುಖ ಅಂಶಗಳು. ಈ ರೀತಿಯಾಗಿ ಎಲ್ಲವನ್ನೂ ಬಿಡುವ ಆಸೆ ವೇದಕಾಲದಲ್ಲಿ ಹೇಳಲಾದ ಜೀವನದ ನಾಲ್ಕು ಅವಸ್ಥೆಗಳಲ್ಲಿಯೇ ಇಂಗಿತವಾಗಿದೆ. ಅದೇನೆಂದರೆ ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ.
ಅಂದರೆ ಜೀವನದ ಕೊನೆಯ ಎರಡು ಭಾಗಗಳ ಚಲನೆ ಇರುವುದು ಮೋಕ್ಷದ ದಾರಿಯಲ್ಲಿಯೇ. ಜೀವನದ ಇಹದ ಮಹತ್ವ ಇದ್ದಿದ್ದು ಸತ್ಕಾಯಗಳ ಮೂಲಕ ಪುಣ್ಯಗಳಿಸಿ ಹುಟ್ಟು, ಸಾವುಗಳ ಸಂಕೋಲೆಯಿಂದ ತಪ್ಪಿಸಿಕೊಂಡು ಚಿರವಾದ ನಕ್ಷತ್ರವಾಗಿಸುವ ಸಾಧನವಾಗಿ ಮಾತ್ರ. ಇನ್ನೂ ಒಂದು ವಿಷಯ ಗಮನಿಸಿಕೊಳ್ಳಬೇಕು. ಏನೆಂದರೆ ದೇಶದಲ್ಲಿ ಬಾಳಿ ಬದುಕಿದ, ಬದುಕಿ ನಾಗರಿಕತೆಗೆ ದಾರಿದೀಪವಾದ ಶ್ರೇಷ್ಟ ವ್ಯಕ್ತಿಗಳ ಬದುಕುಗಳು ಇದೇ ಪಾಠಗಳನ್ನೇ ಹೇಳುತ್ತವೆ. ಸಿದ್ದಾರ್ಥ ಎನ್ನುವ ರಾಜಕುಮಾರ ಇಹದ ಸರ್ವ ಸುಖವನ್ನೂ ಬಿಟ್ಟು ಜೀವನದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದ. ಜೈನ ಧರ್ಮವೂ ಅದನ್ನೇ ಹೇಳುತ್ತದೆ. ಬಾಹುಬಲಿ ಎಲ್ಲವನ್ನೂ ತ್ಯಜಿಸಿ ಆಕಾಶದತ್ತ ಎತ್ತರಕ್ಕೆ ಬೆಳೆದು ನಿಂತ. ಹಿಂದೂ ಧರ್ಮದ ಸಂತರು ಬದುಕಿದ್ದು ಕೂಡ ಹೀಗೆ. ಮೀರಾಬಾಯಿ, ಕನಕದಾಸ, ಪುರಂದರದಾಸರು, ಅಕ್ಕಮಹಾದೇವಿ ಎಲ್ಲರೂ ಇದೇ ಪಂಥಕ್ಕೆ ಸೇರಿದವರು. ಒಟ್ಟಾರೆ ಹೇಳಬೇಕಾದದ್ದೆಂದರೆ ನಮ್ಮ ಪರಂಪರೆಯ, ಸಂಸ್ಕೃತಿಯ ಸ್ವರೂಪ ಐತಿಹಾಸಿಕವಾಗಿ ಬೇರೆಯೇ ಇತ್ತು. ಇದೆ.
ಅಂತಹ ಹರಿಯುವ ನದಿ ಇಂದು ತನ್ನ ಹರಿವಿನ ದಿಸೆಯನ್ನು ಬದಲಾಯಿಸಿ ಕೊಂಡಿದೆಯೇ ಎನ್ನುವುದು ಈ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ. ಮೂಲ ಸಂಸ್ಕೃತಿಯೇ ಬದಲಾಗಿ ಹೋಯಿತೇ? ಅಥವಾ ಹಣದ ಹರಿವಿನ ಹೊಳೆ ತುಂಬಿಕೊಳ್ಳುತ್ತ ಹೋದಂತೆ ಸಂಸ್ಕೃತಿಗಳು ತಮ್ಮನ್ನು ತಾವು ಬದಲಾಯಿಸಿಕೊಂಡು ಬಿಡುತ್ತವೆಯೇ ಎನ್ನುವ ಪ್ರಶ್ನೆ ಕೂಡ ಇಲ್ಲಿ ಹುಟ್ಟಿಕೊಳ್ಳುತ್ತದೆ.
ಅದಿರಲಿ. ಪ್ರಶ್ನೆಗಳೇನೇ ಇರಲಿ, ನಿರ್ವಿವಾದವಾಗಿ ಒಪ್ಪಿಕೊಳ್ಳಬೇಕಾದ ವಿಷಯವೆಂದರೆ ದೇಶ ಸಂಭ್ರಮಿಸುತ್ತಿದೆ. ಈ ಸಂಭ್ರಮ ದೇಶದ ಪ್ರಸ್ತುತ ಸಾಮಾಜಿಕ, ಆರ್ಥಿಕ ಸ್ಥಿತಿಗೆ ಕನ್ನಡಿಯಾಗಿರುವುದನ್ನೂ ನಾವು ಗಮನಿಸಿಕೊಳ್ಳಬೇಕು. ಏನೆಂದರೆ ನಿಜವಾಗಿ ಇಂದು ದೇಶದ ಆರ್ಥಿಕ ಸ್ಥಿತಿ ತುಂಬ ಸುಧಾರಿಸಿದೆ. ಮೊದಲು ನಾವು ಅಮೆರಿಕಾದ ಕುರಿತು ಹೇಳುತ್ತಿದ್ದೆವು. ಏನೆಂದರೆ ಅಲ್ಲಿ ಕೆಲಸಗಾರರು ಕೂಡ ಕಾರಿನಲ್ಲಿ ಬರುತ್ತಾರೆ ಎಂದು. ಇಂದು ನಮ್ಮ ದೇಶದಲ್ಲಿಯೂ ಅಂತಹುದೇ ಸ್ಥಿತಿ ಬಂದಿದೆ. ಹೆಚ್ಚು ಕಡಿಮೆ ಕಾರುಗಳು ಎಲ್ಲರ ಬಳಿಯೂ ಬಂದಿದೆ. ಬೈಕ್‌ಗಳಂತೂ ಮನೆಗೆ ಮೂರು ನಾಲ್ಕು ಆಗಿ ಹೋಗಿವೆ. ಬಹುಶಃ ಅತಿ ಬಡವನೆಂದು ಹೇಳಬೇಕಾದ ವ್ಯಕ್ತಿಯ ಬಳಿ ಕೂಡ ಆತನ ಹಂತದ ಮನರಂಜನೆಗೆ ಮತ್ತು ಸಂಭ್ರಮಾಚರಣೆಗೆ ಸಾಲುವಷ್ಟು ಹಣವಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಒಮ್ಮೆ ಹೇಳಿದ್ದರು ಏನೆಂದರೆ ದೇಶದಲ್ಲಿ ಭಿಕ್ಷುಕನ ಕೈಯಲ್ಲಿ ಕೂಡ ಮೊಬೈಲ್‌ಗಳು ಇರುವಂತೆ ಮಾಡುತ್ತೇನೆ ಎಂದು. ಆ ಮಾತು ಅಕ್ಷರಶಃ ಸತ್ಯವಾಗಿ ಹೋಗಿದೆ. ಬಹುಶಃ ನಮ್ಮ ದೇಶದಲ್ಲಿ ದಟ್ಟ ದಾರಿದ್ರÂ ಮಾಯವಾಗಿ ಹೋಗಿದೆ. ನಮ್ಮ ಆರ್ಥಿಕ ಸರ್ವೆಗಳನ್ನು ಪುನರ್‌ವಿಮರ್ಶಿಸಿಕೊಳ್ಳಬೇಕು.
ಎರಡನೆಯ ವಿಷಯವೆಂದರೆ ಮನರಂಜನೆ ಅಥವಾ ಎಂಜಾಯ್‌ಮೆಂಟ್ ಇಂದು ಕೇವಲ ಗಂಡು ಮಕ್ಕಳಿಗಾಗಿ ಇಲ್ಲ. ಸ್ತ್ರೀಯರೂ ಇದರಲ್ಲಿ ಸಮಾನ ಪಾಲುದಾರರಾಗಿದ್ದಾರೆ. ಸ್ತ್ರೀಯರೂ ಮೈ ಚಳಿ ಬಿಟ್ಟು ಆನಂದಿಸುತ್ತಿದ್ದಾರೆ ಎಂದೇ ಹೇಳಬೇಕು. ಸಂಭ್ರಮದಲ್ಲಿ ಅಕಸ್ಮಾತ್ ಸೆರಗು ಜಾರಿ ಹೋದರೆ/ಬಟ್ಟೆಗಳು ಜಾರಿ ಹೋದರೆ, ಬೇರೆ ಗಂಡಸರ ಮೈ-ಕೈ ತಾಗಿ ಹೋದರೆ ಇತ್ಯಾದಿ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟು ಗಂಡಸರ ಸಮಾನವಾಗಿ ಸಂಭ್ರಮಿಸಲಾರಂಭಿಸಿದ್ದಾರೆ ಎಂದೇ ಭಾವನೆ. ಗಂಡು ಹೆಣ್ಣು ಎಲ್ಲ ರೀತಿಯ ಸಂತೋಷಾಚರಣೆಗಳಲ್ಲಿ ಸಮಾನರೇ ಆಗಿ ಹೋಗಿದ್ದಾರೆ.ಯುವಕ ಯುವತಿಯರ ದಂಡುಗಳೇ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿರುವುದನ್ನು ಕಾಣುವುದು ಸಾಮಾನ್ಯವಾಗಿ ಹೋಗಿದೆ. ಇಬ್ಬರದೂ ಬಟ್ಟೆಗಳು ವರ್ತನೆಗಳು ಎಲ್ಲವೂ ಒಂದೇ. ಹೆಣ್ಣು ಗಂಡು ಬೇಧಗಳೇನೂ ಇಲ್ಲ. ಹಾಗೆಯೇ ಹಾಗೂ ಚಿಕ್ಕ ವಿಷಯಗಳು ದೊಡ್ಡ ವಿಷಯಗಳಾಗಿ ಉಳಿದಿಲ್ಲ. ಸ್ತ್ರೀ ಸಮಾನತೆ ಇಲ್ಲಿ ಬಂದೇ ಹೋಗಿದೆ. ಇನ್ನೂ ಒಂದು ವಿಷಯವೆಂದರೆ ಈ ಸಂಭ್ರಮ ಜಾತಿ, ಧರ್ಮ ಇತ್ಯಾದಿ ಬೇಲಿಗಳನ್ನು ತೆಗೆದು ಹಾಕಿಬಿಟ್ಟಿದೆ ಎಂದೇ ಅನಿಸುತ್ತದೆ. ಏಕೆಂದರೆ ಎಲ್ಲ ಧರ್ಮ ಜಾತಿಯವರು ಈ ಆನಂದೋತ್ಸವದಲ್ಲಿ ಕರಗಿ ಹೋಗಿದ್ದಾರೆ. ಬಹುಶಃ ಧರ್ಮ, ಜಾತಿ, ಇತ್ಯಾದಿ ಉಳಿದಿರುವುದು ರಾಜಕೀಯವಾಗಿ ಮಾತ್ರ. ಸಂಭ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ಜಾತಿ, ಧರ್ಮಗಳೂ ಒಂದೇ ಆಗಿ ಹೋಗಿವೆ. ಮುಂದುವರಿದವರು ಹಿಂದುಳಿದವರು ಇತ್ಯಾದಿ ವಿಭಾಗಗಳು ಇರುವುದೂ ಮತ್ತೆ ರಾಜಕೀಯವಾಗಿ ಮಾತ್ರ. ಉಡುಗೆ ತೊಡುಗೆ ವಿಷಯದಲ್ಲಿಯೂ ಹಾಗೆಯೇ: ಸ್ತ್ರೀ-ಪುರುಷ, ಜಾತಿ, ಧರ್ಮ ಎಲ್ಲವೂ ಒಂದೇ ಆಗಿ ಹೋಗಿವೆ.ಎದ್ದು ಕಾಣುತ್ತಿರುವುದು ಸಂಭ್ರಮವೊಂದೇ. ಭಾರತ ಸಂಭ್ರಮಿಸುತ್ತದೆ.
ಡಾ. ಆರ್.ಜಿ. ಹೆಗಡೆ