ಈ ಕುರಿತು ಕಾರಾಗೃಹ ಮುಖ್ಯಸ್ಥರು ರಾಜ್ಯದ ಎಲ್ಲ ಕಾರಾಗೃಹಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ. ಕಾರಾಗೃಹಕ್ಕೆ ಹೊಸದಾಗಿ ಮತ್ತು ಪರೋಲ್‌ನಿಂದ ಬಂದಿರುವ ಕೈದಿಗಳಿಗೆ
ಜ್ವರ, ಶೀತ ಇನ್ನಿತರೆ ಆರೋಗ್ಯ ಸಮಸ್ಯೆಯಿದ್ದರೆ ಸ್ಕ್ರೀನಿಂಗ್ ಮಾಡಬೇಕು. ಜತೆಗೆ ಪರೋಲ್ ಕೈದಿಗಳನ್ನು 10 ದಿನಗಳ ಕಾಲ ಬ್ಯಾರಕ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಬೇಕು. ವಿಶೇಷವಾಗಿ ವಿದೇಶಿ ಬಂಧಿಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಕಾರಾಗೃಹಗಳಲ್ಲಿ ಪ್ರತ್ಯೇಕವಾದ ಐಸೋಲೇಷನ್ ವಾರ್ಡ್ ಸಿದ್ಧಪಡಿಸಿ, ಜ್ವರ, ಕೆಮ್ಮು ಹಾಗೂ ನೆಗಡಿ ಇತರೆ ಸೋಂಕಿನ ಲಕ್ಷಣಗಳ ಬಂಧಿಗಳನ್ನು ಪ್ರತ್ಯೇಕವಾಗಿ ಇರಿಸಿ, ನಿರಂತರ ವೈದ್ಯಕೀಯ ಮೇಲ್ವಿಚಾರಣೆ ನಡೆಯಬೇಕು. ಜತೆಗೆ, ಸಂದರ್ಶಕರು, ವಕೀಲರು, ಸಂಘ-ಸಂಸ್ಥೆಗಳು ಮತ್ತು ಕೈದಿಗಳ ಸಂಬಂಧಿಕರ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಆದರೆ, ಕೈದಿಗಳು ಜೈಲಿನಲ್ಲಿರುವ ಫೋನ್ ಮೂಲಕ ಮಾತನಾಡಲು ಅವಕಾಶ ಕೊಡಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ಬಂಧಿಗಳ ಹಾಜರಾತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸೂಚಿಸಿದ್ದಾರೆ.
Advertisement
ಜೈಲಿನಲ್ಲೇ ಮಾಸ್ಕ್ ತಯಾರಿ: ಜೈಲಿನಲ್ಲೇ ಕೈದಿಗಳೇ ಸರ್ಕಾರದ ನಾನಾ ಇಲಾಖೆಗಳಿಗೆ ಮಾಸ್ಕ್ಗಳನ್ನು ಸಿದ್ಧಪಡಿಸಿ ಕಳುಹಿಸಿದ್ದಾರೆ. ಅದೇ ಮಾಸ್ಕ್ ಅನ್ನು ಕಾರಾಗೃಹದಅಧಿಕಾರಿಗಳು, ಸಿಬ್ಬಂದಿ, ಎಲ್ಲ ಕೈದಿಗಳು ಧರಿಸಬೇಕು. ಜತೆಗೆ ಕೇಂದ್ರ ಕಾರಾಗೃಹಗಳಲ್ಲಿ ಸಿದ್ಧವಾಗುವ ಮಾಸ್ಕ್ಗಳನ್ನು ಜಿಲ್ಲಾ ಮತ್ತು ತಾಲೂಕು ಕಾರಾಗೃಹಗಳಿಗೆ ಕಳುಹಿಸಬೇಕು. ಪದೇಪದೆ ಹ್ಯಾಂಡ್ ವಾಶ್ ಅಥವಾ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸಿ ಕೈತೊಳೆದುಕೊಳ್ಳಬೇಕು ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಜತೆಗೆ ಜೈಲುಗಳಲ್ಲಿರುವ ಕ್ಯಾನ್ಸರ್ ಇನ್ನಿತರೆ ಅನಾರೋಗ್ಯಕ್ಕೆ ತುತ್ತಾದ ಕೈದಿಗಳಿಗೆ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದ್ದು, ನಿತ್ಯ ಆರೋಗ್ಯ ತಪಾಸಣೆ ನಡೆಯುತ್ತಿದೆ ಎಂದು ಅಧಿಕಾರಿ ವಿವರಿಸಿದರು.