ಭಟ್ಕಳ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ತಾಲೂಕು ಅಧಿಕಾರಿಗಳ ಸಭೆ ನಡೆಸಿದರಲ್ಲದೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಹಲವಾರು ಸಲಹೆ ಸೂಚನೆ ನೀಡಿದರು.
ಭಟ್ಕಳದಲ್ಲಿ ಕೋವಿಡ್-19 ಮತ್ತೆ ಮರುಕಳಿಸಿರುವುದರಿಂದ ನಗರದಲ್ಲಿ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮ, ಗಲ್ಲಿ ಗಲ್ಲಿಗಳಲ್ಲಿ ಜನ ಸಂಚಾರವಿದ್ದು, ಅದನ್ನು ತಡೆಯುವಲ್ಲಿ ಹೆಚ್ಚಿನ ಪೊಲೀಸ್ ಬಲ ತರಿಸುವ ಕುರಿತು ಸೂಚನೆ ನೀಡಿದ್ದಾರೆ. ಬಂದೋಬಸ್ತ್ ಮಾಡಲು ಜಿಲ್ಲೆಯ ಪಿಎಸ್‌ಐಗಳನ್ನು ಕರೆಯಿಸಿಕೊಳ್ಳಿ, ಅಗತ್ಯ ಬಿದ್ದರೆ ಹೆಚ್ಚಿನ ಪಡೆಗಳನ್ನು ಕಳುಹಿಸುವ ಕುರಿತೂ ಪ್ರಸ್ತಾಪಿಸಿದ್ದಾರೆ.
ಕೋವಿಡ್-19 ಪ್ರಕರಣ ಏರಿಕೆ ಆಗುತ್ತಿರುವುದರಿಂದ ಸೋಂಕು ತಡೆಗಟ್ಟಲು ಮತ್ತು ಹರಡದಿರಲು ಲಾಕ್ ಡೌನ್ ಬಿಗಿಗೊಳಿಸಿ ಅನಾವಶ್ಯಕವಾಗಿ ಯಾರೂ ತಿರುಗಾಡದಂತೆ ನಿಗಾ ವಹಿಸಬೇಕು. ಚೆಕ್‌ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಎಲ್ಲ ವಾಹನಗಳನ್ನು ತಪಾಸಣೆ ನಡೆಸಬೇಕು. ಭಟ್ಕಳ ಕಂಟೈನ್‌ಮೆಂಟ್ ಜೋನ್ ಆಗಿರುವುದರಿಂದ ಪಟ್ಟಣಕ್ಕೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಿದರು.
ಪುರಸಭೆ ಮತ್ತು ಜಾಲಿ ಪಪಂನಲ್ಲಿ ಮರಣ ಪ್ರಮಾಣ ಪತ್ರ ನೀಡುವುದರ ಮೊದಲು ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ ಮಾಹಿತಿ ತರಿಸಿಕೊಳ್ಳಬೇಕು. ಪಟ್ಟಣದಲ್ಲಿ ಏನೇ ಆದರೂ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಗಮನಕ್ಕೆ ಬರಬೇಕು ಎಂದೂ ಹೇಳಿ, ಯಾವುದನ್ನಾದರು ಮರೆ ಮಾಚಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರೆನ್ನಲಾಗಿದೆ.
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ತರಲು ಇದೆಲ್ಲ ಕ್ರಮ ಸದ್ಯಕ್ಕೆ ಅನಿವಾರ್ಯವಾಗಿದೆ ಎಂದ ಅವರು, ಯಾರೇ ಆಗಲಿ ಶಾಸಕರ, ಮಂತ್ರಿಗಳ ಒತ್ತಡ ತಂದರೂ ಕೂಡಾ ಅದಕ್ಕೆ ಮಣೀಯದೇ ಕಾನೂನು ಪಾಲನೆ ಮಾಡಬೇಕು. ಯಾವುದೇ ಸಂದಿಗ್ಧ ಪರಿಸ್ಥಿತಿ ಉಂಟಾದಲ್ಲಿ ತಮ್ಮನ್ನು ಸಂಪರ್ಕಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ ಸಂಸದರು, ಕಾನೂನು ಪಾಲನೆಯಾಗದೇ ಇದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ಶಾಸಕ ಸುನೀಲ ನಾಯ್ಕ, ಎಸಿ ಭರತ್ ಎಸ್., ತಾಲೂಕಿನ ಹಿರಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದರು.