ಬೆಂಗಳೂರು: ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಮೈತ್ರಿ ಪಕ್ಷಗಳ ನಾಯಕರು ಹೇಗಾದರೂ ಮಾಡಿ ಮೈತ್ರಿ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಬಿಜೆಪಿಯ ‘ಆಪರೇಷನ್ ಕಮಲ’ಕ್ಕೆ ಬ್ರೇಕ್ ಹಾಕಲು ಬಂಡಾಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ, ಸರ್ಕಾರದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಕಾರಣಕ್ಕಾಗಿ ಕೆಲವು ಹಾಲಿ ಸಚಿವರಿಗೆ ಅಗತ್ಯ ಬಿದ್ದರೆ, ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧರಾಗಿರಿ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಪ್ರಮುಖವಾಗಿ ಹಿರಿಯ ಸಚಿವರಾಗಿ ರುವ ಆರ್.ವಿ. ದೇಶಪಾಂಡೆ, ಕೆ.ಜೆ.ಜಾರ್ಜ್ ಅವರಿಗೂ ಸರ್ಕಾರ ಉಳಿಸಿಕೊಳ್ಳಲು ಸಹಕಾರ ನೀಡುವಂತೆ ಹೈಕಮಾಂಡ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಶಿವಶಂಕರ ರೆಡ್ಡಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೂ ಪರೋಕ್ಷವಾಗಿ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧರಿರುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಪರೋಕ್ಷ ರಾಜೀನಾಮೆ ಸಂದೇಶ ರವಾನಿಸಲಾಗಿದೆ. ಅತೃಪ್ತರ ಸಂಖ್ಯೆ ಹಾಗೂ ಮಂತ್ರಿ ಸ್ಥಾನ ನೀಡುವ ಅಗತ್ಯತೆಯ ಆಧಾರದಲ್ಲಿ ಸಚಿವರಿಂದ ರಾಜೀನಾಮೆ ಕೊಡಿಸುವ ಆಲೋಚನೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಇರುವುದರಿಂದ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಆಲೋಚನೆಯನ್ನು ರಾಜ್ಯ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ನಾಯಕರ ವಿರುದ್ಧ ಬಂಡಾಯ ಸಾರಿರುವ ಹಿರಿಯ ಶಾಸಕ ರೋಷನ್ ಬೇಗ್ ಹಾಗೂ ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಅತೃಪ್ತರಾಗಿ ಮುನಿಸಿಕೊಂಡಿರುವ ಎಂ.ಕೃಷ್ಣಪ್ಪ ಅವರಿಗೂ ಸಚಿವ ಸ್ಥಾನ ನೀಡಿ ಸಮಾಧಾನ ಮಾಡಬೇಕೆಂಬ ಆಲೋಚನೆ ಪಕ್ಷದ ನಾಯಕರಲ್ಲಿದೆ ಎಂದು ತಿಳಿದು ಬಂದಿದೆ.