Advertisement

ಮಾಂಸ ವ್ಯಾಪಾರಸ್ಥರ ಬದುಕಿಗೆ ನೋಟಿಸ್‌ ಬರೆ

11:19 AM Sep 14, 2019 | Suhan S |

ಬೆಳಗಾವಿ: ತಲೆ ತಲಾಂತರದಿಂದ ಮಾಂಸದ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಕುರಿ, ಕೋಳಿ, ಆಡು, ಮೇಕೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಂದಿರುವ ನೋಟಿಸ್‌ ಈಗ ವ್ಯಾಪಾರಸ್ಥರ ಉದ್ಯೋಗಕ್ಕೆ ಬರೆ ಎಳೆದಿದ್ದು, ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ.

Advertisement

ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾಂಸ ಮಾರಾಟದಿಂದ ಪಕ್ಷಿಗಳ ಹಾರಾಟದ ಹೆಚ್ಚಿದ್ದು ವಾಯು ಸಂಚಾರಕ್ಕೆ ಅಡ್ಡಿಯುಂಟು ಮಾಡಬಹುದು ಎಂದು ಸುಮಾರು 10 ಕಿಮೀ ವ್ಯಾಪ್ತಿಯ ಕುರಿ, ಮೇಕೆ, ಆಡು, ಕೋಳಿ ಮಾಂಸದ ಅಂಗಡಿಗಳನ್ನು ಬಂದ್‌ ಮಾಡುವಂತೆ ಆದೇಶ ಬಂದಿದೆ.

ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಮಾಂಸದ ವ್ಯಾಪಾರಿಗಳನ್ನು ಕಾಡುತ್ತಿದೆ. ಬ್ರಿಟಿಷರ ಕಾಲದಿಂದಲೂ ಈ ಭಾಗದಲ್ಲಿ ಉದ್ಯೋಗ ನಡೆಸಿಕೊಂಡು ಬದುಕು ಸಾಗಿಸುತ್ತಿರುವ ವ್ಯಾಪಾರಿಗಳು ಮುಂದೆ ಹೋಗುವುದಾದರೂ ಎಲ್ಲಿ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ಸಾಂಬ್ರಾದಲ್ಲಿ ವಾಯು ಸೇನೆ ತರಬೇತಿ ಕೇಂದ್ರ ಹಾಗೂ ವಿಮಾನ ನಿಲ್ದಾಣ ಜೊತೆಯಾಗಿಯೇ ಇವೆ. ಅನೇಕ ವರ್ಷಗಳಿಂದ ಈ ಭಾಗದಲ್ಲಿ ವಿಮಾನ ಹಾರಾಟ ಇದೆ. ಈಗ ಕೆಲವು ತಿಂಗಳುಗಳಿಂದ ಉಡಾನ್‌ 3ರ ಯೋಜನೆಯಡಿ ಮೂರ್‍ನಾಲ್ಕು ವಿಮಾನ ಹಾರಾಟ ಸೇವೆ ಶುರುವಾಗಿವೆ. ವಿಮಾನ ಹಾರಾಟದ ವೇಳೆ ಪಕ್ಷಿಗಳ ಪ್ರಾಣಹಾನಿ ಹಾಗೂ ವಿಮಾನ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂಬ ಉದ್ದೇಶದಿಂದ ವಿಮಾನ ನಿಲ್ದಾಣ ಪ್ರಾಧಿಕಾರ ಮಾಂಸ ಅಂಗಡಿಗಳನ್ನೇ ನಿಷೇಧಿಸುವ ಮೂಲಕ ಆದೇಶ ಹೊರಡಿಸಿದ್ದರಿಂದ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ.

ಸಾರ್ವಜನಿಕವಾಗಿ ಹಾಗೂ ವಿಮಾನ ಹಾರಾಟದ ವೇಳೆ ಯಾವುದೇ ಸಮಸ್ಯೆ ಇಲ್ಲದೇ ಈ ಭಾಗದಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳ ಪಾಲಿಗೆ ಈ ಆದೇಶ ಭೂತದಂತೆ ಕಾಡುತ್ತಿದೆ. ಸುಮಾರು ಒಂದು ವಾರದಿಂದ ಅಂಗಡಿಗಳನ್ನು ಬಂದ್‌ ಮಾಡಿ ಕಚೇರಿಗಳನ್ನು ಅಲೆದಾಡುತ್ತಿದ್ದಾರೆ. ಹೇಗಾದರೂ ಮಾಡಿ ಅಂಗಡಿ ಆರಂಭಿಸುವಂತೆ ಅಧಿಕಾರಿಗಳ ಬಳಿ ಬೇಡಿಕೊಳ್ಳುತ್ತಿದ್ದಾರೆ.

Advertisement

ಮಾಂಸದ ತ್ಯಾಜ್ಯ ಹಾಗೂ ಕಸವನ್ನು ರಸ್ತೆ ಮೇಲೆ ಚೆಲ್ಲಾಡದೇ ನೇರವಾಗಿ ವಾಹನದಲ್ಲಿ ಹಾಕಿ ದೂರದ ತುರಮುರಿ ಕಸ ವಿಲೇವಾರಿ ಘಟಕಕ್ಕೆ ಸ್ಥಳಾಂತರ ಮಾಡಲಾಗುವುದು. ಅಂಗಡಿ ಆರಂಭಿಸಲು ಅನುಮತಿ ನೀಡುವಂತೆ ಮಾಂಸ ವ್ಯಾಪಾರಿಗಳ ಒತ್ತಾಯವಾಗಿದೆ.

ಒಂದು ವೇಳೆ ಅಂಗಡಿಗಳು ಬಂದ್‌ ಮಾಡಿ ಬಿಟ್ಟರೆ ಈ ಭಾಗದ ಜನರು ಸುಮಾರು 15-20 ಕಿ.ಮೀ. ದೂರದ ಬೆಳಗಾವಿ ನಗರಕ್ಕೆ ಹೋಗಿ ಮಾಂಸ ಖರೀದಿಸಬೇಕಾಗುತ್ತದೆ. ವಾರಕ್ಕೊಮ್ಮೆ ಮಾಂಸ ತಿನ್ನುವವರ ಸಂಖ್ಯೆ ಜಾಸ್ತಿ ಇರುವುದರಿಂದ ಅಷ್ಟು ದೂರದವರೆಗೆ ಹೋಗಿ ಖರೀದಿ ಮಾಡುವುದು ಅಸಾಧ್ಯ. ಜಿಲ್ಲಾಡಳಿತ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ನಾಗೇಶ ದೇಸಾಯಿ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಅಂಗಡಿಕಾರರಿಗೆ ನೋಟಿಸ್‌ ಬಂದಾಗಿನಿಂದ ಬಹುತೇಕ ಎಲ್ಲ ಅಂಗಡಿಗಳಿಗೆ ಬೀಗ ಬಿದ್ದಿದೆ. ಒಂದು ವೇಳೆ ಅಂಗಡಿಗಳನ್ನು ಬಂದ್‌ ಮಾಡುವುದೇ ಇದ್ದರೆ ವ್ಯಾಪಾರಿಗಳಿಗೆ ಬದುಕಲು ನೌಕರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next