ಹುಬ್ಬಳ್ಳಿ: ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿ ನೀಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಘಟಕಗಳನ್ನು ರದ್ದು ಮಾಡಲು ಸೂಚಿಸಲಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಎಲ್.ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಶಾಖೆಗಳನ್ನು ಅಥವಾ ವಿಭಾಗಗಳನ್ನು ಹೊಂದಿರುವ ಕಚೇರಿಗಳಲ್ಲಿ ಪ್ರತ್ಯೇಕ ಮಾಹಿತಿ ಹಕ್ಕು ಘಟಕ ಇರುವುದರಿಂದ ಸಕಾಲದಲ್ಲಿ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಸಲ್ಲಿಸಿದ ಅರ್ಜಿಯನ್ನು ಸಂಬಂಧಿಸಿದ ಶಾಖೆಗೆ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ ಪ್ರತ್ಯೇಕ ಘಟಕದ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಬಿಬಿಎಂಪಿಯಲ್ಲಿ ಪ್ರತ್ಯೇಕವಾಗಿ ಮಾಹಿತಿ ಹಕ್ಕು ಘಟಕ ಸ್ಥಾಪಿಸಲಾಗಿತ್ತು. ಮಾಹಿತಿ ಹಕ್ಕು ಘಟಕದಲ್ಲಿ ಅರ್ಜಿ ಸಲ್ಲಿಸುವುದರಿಂದ 30 ದಿನಗಳಲ್ಲಿ ಮಾಹಿತಿ ನೀಡಲು ಆಗುತ್ತಿರಲಿಲ್ಲ. ಸಂಬಂಧಿಸಿದ ಶಾಖೆಗೆ ಅರ್ಜಿ ವಿಲೇವಾರಿ ಮಾಡುವ ಕುರಿತು ಸಾಕಷ್ಟು ಸಬೂಬು ಕೇಳಿ ಬರುತ್ತಿತ್ತು. ಅಲ್ಲದೇ ಜನರು ಕೇಳಿದ ಮಾಹಿತಿ ಕುರಿತು ಅಲ್ಲಿನ ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅರ್ಜಿ ಸಂಖ್ಯೆ ಹಿಡಿದುಕೊಂಡು ಓಡಾಡುವುದೇ ಆಗಿತ್ತು. ಹೀಗಾಗಿ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಅದೇ ಶಾಖೆಯಲ್ಲಿ ಅರ್ಜಿ ಸಲ್ಲಿಸುವುದರಿಂದ ಸಕಾಲದಲ್ಲಿ ದೊರೆಯಲಿದೆ. ಹೀಗಾಗಿ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪ್ರತ್ಯೇಕ ಘಟಕ ರದ್ದುಗೊಳಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಕಟ್ಟಡ ಪರವಾನಗಿ ಉಲ್ಲಂಘನೆ ಅರ್ಜಿ ಹೆಚ್ಚು: ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಾಗಿ ಕಟ್ಟಡ ಪರವಾನಗಿ ನಿಯಮಗಳ ಉಲ್ಲಂಘನೆ ಕುರಿತ ಮಾಹಿತಿ ಕೇಳಿರುವ ಅರ್ಜಿಗಳೇ ಹೆಚ್ಚಾಗಿವೆ. ಇಲ್ಲಿಯೂ ಕೂಡ ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿ ಬಂದಿರುವುದು ಕಂಡು ಬಂದಿದೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅರ್ಜಿಗಳ ವಿಲೇವಾರಿ, ಸಂಬಂಧಿಸಿದ ಮಾಹಿತಿಯನ್ನು ಅರ್ಜಿದಾರರಿಗೆ ಸಕಾಲದಲ್ಲಿ ಸಲ್ಲಿಸಿದ್ದಾರೆ. ಬಾಕಿ ಇರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿನ ಆಯುಕ್ತರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಕಂದಾಯ ವಿಭಾಗದ ಹೆಚ್ಚುವರಿ ಆಯುಕ್ತ ಎಂ. ಗಂಗಣ್ಣ ಇದ್ದರು.