Advertisement

ಸರಿಯಾಗಿ ಮಾಹಿತಿ ಕೊಡಲು ಅಧಿಕಾರಿಗಳಿಗೆ ಸೂಚನೆ

05:06 PM Aug 19, 2017 | Team Udayavani |

ಸಿಂಧನೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿ ಕೊಟ್ಟು ತಿಂಗಳಿಗೊಮ್ಮೆ ಸರಿಯಾಗಿ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ತಾಪಂ ಅಧ್ಯಕ್ಷೆ ಬಸಮ್ಮ ಬಸನಗೌಡ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ
ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸದಸ್ಯರು ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂದು ದೂರಿಗೆ ಪ್ರತಿಕ್ರಿಯಿಸಿ ತಾಪಂ ಅಧ್ಯಕ್ಷರು ಮುಂದಿನ ಸಭೆಯಲ್ಲಿ ಇಂಥ ತಪ್ಪು ಆಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ತಾಪಂಗೆ ಬಂದ ಅನುದಾನದಿಂದ ಕಾಮಗಾರಿ
ಅನುಷ್ಠಾನಗೊಳಿಸುವಲ್ಲಿ ಆಗುತ್ತಿರುವ ವಿಳಂಬ ಕುರಿತು ಬೇಸರ ವ್ಯಕ್ತಪಡಿಸಿದ ಗುಡದೂರು ಕ್ಷೇತ್ರ ಸದಸ್ಯ ಈಶಪ್ಪ ದೇಸಾಯಿ ಮತ್ತು ಸಾಲಗುಂದಾದ ಹನುಮಂತಪ್ಪ ಸಭಾಂಗಣ ನಿರ್ಮಾಣ ಕುರಿತು ಮೂರು ತಿಂಗಳಿನಿಂದ ಸಭೆಯಲ್ಲಿ ಧ್ವನಿ ಎತ್ತಿದ್ದರೂ ಇಲ್ಲಿಯವರೆಗೂ ಜಿಪಂ ಅನುಮತಿ ಪಡೆದಿಲ್ಲ ಎಂದು ದೂರಿದರು. ಸದಸ್ಯರು ತಮ್ಮ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳ ಪಟ್ಟಿ ಕೊಡುತ್ತಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುತ್ತಿದ್ದಾರೆ. ದಯವಿಟ್ಟು ಕಾಮಗಾರಿಗಳ ಪಟ್ಟಿ ಕೊಟ್ಟು ಸಹಕರಿಸಬೇಕು. ಇಲ್ಲದಿದ್ದರೆ ಕೆಲಸದ ವಿವರ ಕೊಟ್ಟ ಕ್ಷೇತ್ರಗಳ ಪಟ್ಟಿ ಮಾತ್ರ ಕಳುಹಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ದೇಸಾಯಿ ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿರುಪಾಪುರ ಕ್ಷೇತ್ರದ ಸದಸ್ಯ ಲಿಂಗಪ್ಪ ಅರಳಹಳ್ಳಿ, ಎಷ್ಟು ಹಣ, ಯಾವ ಯೋಜನೆ, ಕಾಮಗಾರಿ ಸ್ವರೂಪವೇನು ಎಂಬುದರ ಬಗ್ಗೆ ತಿಳಿಸದೆ ಪಟ್ಟಿ ಕೊಡುವಂತೆ ಹೇಳಿದರೆ ಎಲ್ಲಿಂದ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 12 ಅಂಗನವಾಡಿ ಕೇಂದ್ರ ದುರಸ್ತಿಗೊಳಿಸಲು ಹಣ ಮಂಜೂರಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಹೇಳಿದಾಗ, ಗಿಣಿವಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಾವು, ಚೇಳು ಸೇರಿಕೊಂಡಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಜನರು ಹೆದರುತ್ತಿದ್ದಾರೆ ಎಂದು ಸದಸ್ಯ ಉದಯಗೌಡ ಗಮನ ಸೆಳೆದರು. ಸಿಡಿಪಿಒ ಅಶೋಕ ಮಾತನಾಡಿ, 12 ಕೇಂದ್ರಗಳನ್ನು ದುರಸ್ತಿಗಾಗಿ ಆದೇಶ ಬಂದಿದೆ. ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಕೇಂದ್ರಗಳ ಪಟ್ಟಿ ಕೊಡುವಂತೆ ಸದಸ್ಯರನ್ನು ವಿನಂತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಮಾತನಾಡಿ, 175 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ದಾಖಲಾತಿ ಆಧರಿಸಿ ಇನ್ನೂ 40 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು. ತಾಲೂಕಿನಾದ್ಯಂತ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಾಪಂ ಉಪಾಧ್ಯಕ್ಷೆ ಅನುಷಾ ಪ್ರಶ್ನಿಸಿದಾಗ, ಸೊಳ್ಳೆಗಳನ್ನು ನಾಶ ಮಾಡುವ ಔಷಧಿ ಸಿಂಪಡಿಸಲಾಗುತ್ತಿದೆ. ತಾಲೂಕಿನಲ್ಲಿ ಆರೋಗ್ಯ ಇಲಾಖೆ 90 ಜನ ಸಿಬ್ಬಂದಿ
ಮೂಲಕ ಡೆಂಘೀ ಜ್ವರ ಕುರಿತು ಜಾಗೃತಿ ಮೂಡಿಸುತ್ತಿದೆ. ಸಂಶಯಾಸ್ಪದ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಬಳ್ಳಾರಿ ಮತ್ತು ರಾಯಚೂರು ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿ
ಕೊಡುತ್ತಿರುವುದಾಗಿ ಆರೋಗ್ಯ ಇಲಾಖೆಯ ರಂಗನಾಥ ಗುಡಿ ಉತ್ತರಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ. ಬಸಣ್ಣ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next