Advertisement

ಗೈರಾದ ಅಧಿಕಾರಿಗೆ ನೋಟಿಸ್‌

07:04 AM Mar 01, 2019 | |

ಬಸವನಬಾಗೇವಾಡಿ: ತಾಪಂ ಸಭಾ ಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹೆಚ್ಚು ಗೈರಾಗಿದ್ದು ಕಂಡು ಬಂದಿತು. ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಆಗ್ರಹಿಸಲಾಯಿತು.

Advertisement

ಇನ್ನು ಅಧಿಕಾರಿಗಳ ಸಹಾಯಕರು ಸರಿಯಾದ ಮಾಹಿತಿ ನೀಡದ ಕಾರಣ ಸಭೆಯಲ್ಲಿ ಅಷ್ಟಾಗಿ ವಿಷಯಗಳು ಚರ್ಚೆಯಾಗಲಿಲ್ಲ. ಸಭೆಯಲ್ಲಿ ಅಧಿಕಾರಿಗಳಿಲ್ಲದೆ ಸಹಾಯಕರದೇ ದರ್ಬಾರ್‌ ಆಗಿದೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಸಭೆಗೆ ಅಧಿಕಾರಿಗಳು ತಪ್ಪದೆ ಹಾಜರಾಗುವಂತೆ ಸೂಚಿಸಬೇಕೆಂದು ತಾಪಂ ಅಧ್ಯಕ್ಷ ದೇವೇಂದ್ರ ನಾಯಕ ಅವರನ್ನು ಒತ್ತಾಯಿಸಿದರು. ಅದಕ್ಕೆ ಅಧ್ಯಕ್ಷರು ಸಮ್ಮತಿಸಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ತಾಪಂ ಅಧಿಕಾರಿಗೆ ಸೂಚಿಸಿದರು.

ತಾಪಂ ಅಧ್ಯಕ್ಷ ದೇವೇಂದ್ರ ನಾಯಕ ಮಾತನಾಡಿ, ಬೇಸಿಗೆ ಆರಂಭವಾಗಿದೆ. ತಾಲೂಕಿನಾದ್ಯಂತ ದನಕರು, ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಶುದ್ಧ ಕಡಿಯುವ ನೀರನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ಸಚಿವರ ನಿರ್ದೇಶನದಂತೆ ತಾಲೂಕಿನ ಮೂರು ಕಡೆಗಳಲ್ಲಿ ಮೇವು ಬ್ಯಾಂಕ್‌ ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.

Advertisement

ತಾಲೂಕಿನ ಜಾಯವಾಡಗಿ ಗ್ರಾಮದಲ್ಲಿ ಕುಡಿಯುವ ನೀರು ಕಲುಷಿತವಾಗಿ ಬರುತ್ತಿದೆ. ಅಧಿಕಾರಿಗಳು ಗಮನ ಹರಿಸುವಂತೆ ತಾಪಂ ಸದಸ್ಯ ಮಲ್ಲು ತಳವಾರ ಸಭೆಯ ಗಮನಕ್ಕೆ ತಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾತನಾಡಿ, ಈಗಾಗಲೇ ಎಲ್ಲ
ಕಡೆಗಳಲ್ಲು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಎಲ್ಲಾದರು ಅವ್ಯವಸ್ಥೆ ಕಂಡು ಬಂದಲ್ಲಿ ಪರೀಕ್ಷಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ರೈತರ ಕೃಷಿ ಹೊಂಡದ ಅರ್ಜಿಗಳನ್ನು ತೆಗೆದುಕೊಳ್ಳಬೇಕು. ಕೆಲ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರದೆ ಕಳಪೆ ಮಟ್ಟದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಅಧ್ಯಕ್ಷರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಸುಜಾತಾ ಪಾಟೀಲ, ಎಸ್‌.ಜಿ ಬೋಸಲೆ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕೆಲ ಅಧಿಕಾರಿಗಳ ಸಹಾಯಕರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next