ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಒಂದು ವರ್ಷದವರೆಗೆ ಎಲ್ಲ ಮಾದರಿಯ ಜಾಹೀರಾತುಗಳ ಪ್ರದರ್ಶನ ನಿಷೇಧಿಸಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ರದ್ದುಪಡಿಸುವಂತೆ ಕೋರಿ ಮೆಸರ್ಸ್ ಅವಿನಾಶಿ ಆ್ಯಡ್ಸ್ ಔಟ್‌ಡೋರ್ ಅಡ್ವಟೈಸಿಂಗ್ ಸೇರಿ ನಗರದ ಹಲವು ಜಾಹೀರಾತು ಏಜೆನ್ಸಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ವಕೀಲರಿಗೆ ಈ ಸೂಚನೆ ನೀಡಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.
ನಗರದ ವ್ಯಾಪ್ತಿಯಲ್ಲಿ 1 ವರ್ಷದ ಅವಧಿಗೆ ಎಲ್ಲ ಬಗೆಯ ಜಾಹೀರಾತುಗಳ ಪ್ರದರ್ಶನ ನಿಷೇಧಿಸಿ 2018ರ ಆ.6ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಹಲವು ಜಾಹೀರಾತು ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿವೆ.
ವಾಹನಗಳ ಮೇಲೆ ಜಾಹೀರಾತು ನಿರ್ಬಂಧ: ರಸ್ತೆ ಮೇಲೆ ಸಂಚರಿಸುವ ಯಾವುದೇ ಸಾರಿಗೆ ವಾಹನಗಳ ಮೇಲೆ ಜಾಹಿರಾತು ಪ್ರದರ್ಶಿಸುವುದನ್ನು ಪ್ರತಿಬಂಧಿಸಲಾಗಿದ್ದು, ನಿಯಮ ಉಲ್ಲಂ ಸಿದ ವಾಹನ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ.
ಈಗಾಗಲೇ ನಿಯಮಬಾಹಿರವಾಗಿ ಆಟೋ, ಸರಕು ಸಾಗಣೆ ವಾಹನ, ಬಸ್, ಟ್ಯಾಕ್ಸಿ ಮತ್ತಿತರ ವಾಹನಗಳ ಮೇಲೆ ಹಾಕಲಾದ ಜಾಹಿರಾತುಗಳನ್ನು ತೆರವುಗೊಳಿಸಬೇಕು. ಹಾಗೊಂದು ವೇಳೆ ಜಾಹಿರಾತು ಪ್ರದರ್ಶಿಸಬೇಕಾದರೆ, ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯ ಎಂದು ಸಾರಿಗೆ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.