ಬೆಂಗಳೂರು: ಕಳೆದ 10 ತಿಂಗಳಿಂದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ನೇಮಕ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗೆ ರಾಜ್ಯಪಾಲರು ಗುರುವಾರ ಹೊಸ ತಿರುವು ನೀಡಿದ್ದಾರೆ.
ಶೋಧನಾ ಸಮಿತಿಯ ಶಿಫಾರಸಿನ ಆಧಾರದಲ್ಲಿ ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಿ, ಸಲ್ಲಿಸಿದ್ದ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಹಾಗೆಯೇ ಹೊಸ ಹೆಸರಿನ ಪಟ್ಟಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ವಿವಿ, ಮೈಸೂರು ವಿವಿ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕಾನೂನು ವಿವಿ ಸೇರಿ 8 ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಹುದ್ದೆ ಖಾಲಿ ಇವೆ. ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರೊ. ಸಿದ್ಧಾಶ್ರಮ ಹಾಗೂ ಬೆಂಗಳೂರು ವಿವಿಗೆ ಪ್ರೊ. ಸಂಗಮೇಶ್ ಪಾಟೀಲ್ ಅವರನ್ನು ಕುಲಪತಿ ಮಾಡುವ ಆಸಕ್ತಿಯನ್ನು ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಹೊಂದಿದ್ದರು.
ಆದರೆ, ರಾಜ್ಯಪಾಲರು ಈ ಎರಡು ಹೆಸರುಗಳನ್ನು ತಿರಸ್ಕರಿಸಿದ್ದಾರೆಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಕ್ಕೆ ನೇಮಿಸಿದ್ದ ಶೋಧನಾ ಸಮಿತಿ ನೀಡಿರುವ ಶಿಫಾರಸಿನ ಆಧಾರದಲ್ಲಿ ರಾಜ್ಯ ಸರ್ಕಾರ ಈ ಎರಡು ವಿಶ್ವವಿದ್ಯಾಲಯಕ್ಕೆ ಇಬ್ಬರ ಹೆಸರನ್ನು ಪ್ರತ್ಯೇಕವಾಗಿ ರಾಜ್ಯಪಾಲರಿಗೆ ಕಳುಹಿಸಿತ್ತು.
ಸರ್ಕಾರ ಕಳುಹಿಸಿರುವ ಎರಡು ಹೆಸರನ್ನು ರಾಜ್ಯಪಾಲರು ಈ ಹಿಂದೆಯೇ ನಿರಾಕರಿಸಿದ್ದರು. ಈ ಸಂಬಂಧ ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಪತ್ರವನ್ನು ಬರೆಯಲಾಗಿತ್ತು. ರಾಜ್ಯಪಾಲರು ಇದ್ಯಾವುದಕ್ಕೂ ಕ್ಯಾರೇ ಮಾಡಿಲ್ಲ. ಗುರುವಾರ ಅಂತಿಮವಾಗಿ ಎರಡು ವಿಶ್ವವಿದ್ಯಾಲಯಗಳ ಕುಲಪತಿ ನೇಮಕದ ಕಡತವನ್ನೇ ಸರ್ಕಾರಕ್ಕೆ ವಾಪಸ್ ಕಳುಹಿಸಿ, ಹೊಸ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.